Advertisement

ಎಸ್‌ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಆರಂಭಿಸಿ

02:11 PM Aug 06, 2019 | Suhan S |

ಕೂಡ್ಲಿಗಿ: ಪರಿಶಿಷ್ಟ ಪಂಗಡದ ಜನತೆಯೇ ಹೆಚ್ಚಿರುವ ತಾಲೂಕಿನಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಆರಂಭಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಎ.ಐ.ಎಸ್‌.ಎಫ್‌ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

Advertisement

ಪಟ್ಟಣದ ಗಾಂಧಿಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಲ್ಲಿ ಸಭೆ ಸೇರಿದ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಸ್ಟೆಲ್ ನಿರ್ಮಿಸುವಂತೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗುತ್ತಾ ತಹಶೀಲ್ದಾರ್‌ ಕಚೇರಿಗೆ ತೆರಳಿದರು.

ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರೂ ಇಲ್ಲಿ ಪರಿಶಿಷ್ಟ ವರ್ಗದವರೇ ಬಹುಪಾಲು ಜನತೆ ಇದ್ದರೂ ಇಲ್ಲಿಯವರೆಗೂ 6ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸುವಂತೆ ತಹಶೀಲ್ದಾರ್‌ಗೆ ಹಾಗೂ ಪರಿಶಿಷ್ಟ ವರ್ಗಗಳ ತಾಲೂಕು ಅಧಿಕಾರಿಗಳಿಗೆ ಒತ್ತಾಯಿಸಿದರು.

ಕಮ್ಯುನಿಸ್ಟ್‌ ಪಕ್ಷದ ಕಾರ್ಯದರ್ಶಿ ಎಚ್. ವೀರಣ್ಣ ಮಾತನಾಡಿ, ಪಟ್ಟಣದಲ್ಲಿ ಎಸ್‌.ಟಿ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ಇಲ್ಲದ ಕಾರಣ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸದಾಗಿ ಎಸ್‌.ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರಾರಂಭಿಸುವುದರ ಜತೆಗೆ ಈಗಿರುವ ವಸತಿ ನಿಲಯಗಳಲ್ಲಿ 100 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶವಿರುವುದರಿಂದ ಅವಶ್ಯಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೆಚ್ಚಿನ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಕೂಡ್ಲಿಗಿಯಲ್ಲಿ 6ನೇ ತರಗತಿಯಿಂದ 10ನೇ ತರಗತಿಗಳವರೆಗೆ 300ಕ್ಕೂ ಹೆಚ್ಚು ಎಸ್‌.ಟಿ. ವಿದ್ಯಾರ್ಥಿಗಳಿಗೆ ವಸತಿ ನಿಲಯ ಪ್ರಾರಂಭಿಸಬೇಕು. ಗುಡೇಕೋಟೆ, ಕೊಟ್ಟೂರು, ಉಜ್ಜಿನಿಯಲ್ಲಿ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯ ಪ್ರಾರಂಭಿಸಬೇಕು. ಕೊಟ್ಟೂರಿನಲ್ಲಿ ಪರಿಶಿಷ್ಟ ವರ್ಗಗಳ ಕಾಲೇಜ್‌ ವಿದ್ಯಾರ್ಥಿಗಳಿಗೆ ವಸತಿ ನಿಲಯ ಪ್ರಾರಂಭಿಸುವುದು ಅಗತ್ಯವಾಗಿದೆ. ಆದರೆ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಗಮನಹರಿಸದೇ ಇರುವುದು ಈ ಭಾಗದ ವಿದ್ಯಾರ್ಥಿಗಳ ದುರ್ದೈವವೇ ಸರಿ ಎಂದರು.

Advertisement

ತಹಶೀಲ್ದಾರ್‌ ಮಹಾಬಲೇಶ್ವರ ಮನವಿ ಸ್ವೀಕರಿಸಿದರು. ಪರಿಶಿಷ್ಟ ವರ್ಗಗಳ ತಾಲೂಕು ಅಧಿಕಾರಿ ಮೆಹಬೂಬ್‌ ಬಾಷಾ ಮಾತನಾಡಿ, ಈಗಾಗಲೇ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ವಸತಿ ನಿಲಯಗಳ ಅಗತ್ಯತೆಗಳನ್ನು ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗನೆ ನಿಮ್ಮ ಬೇಡಿಕೆ ಈಡೇರಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಪಟ್ಟಣದ ವಿವಿಧ ಶಾಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next