ಬಾಗಲಕೋಟೆ: ಕಳೆದ 2014-15ನೇ ಸಾಲಿನ ಬಜೆಟ್‌ನಲ್ಲಿ ಬಾಗಲಕೋಟೆಗೆ ಘೋಷಣೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರಸಕ್ತ ಬಜೆಟ್ ನಲ್ಲಿ ಅಗತ್ಯ ಅನುದಾನ ನೀಡಿ, ಕೂಡಲೇ ಕಾಲೇಜು ಆರಂಭಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ.
ನಗರದ ಬಸವೇಶ್ವರ ವೃತ್ತದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಾ| ಎಂ.ಪಿ. ನಾಡಗೌಡ ಅಭಿಯಾನಕ್ಕೆ ಚಾಲನೆ ನೀಡಿ, ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ ಮಾಡಿದರೂ ಈ ವರೆಗೆ ಆರಂಭಿಸಿಲ್ಲ. ಇದಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳಿವೆ. ಸರ್ಕಾರ ಘೋಷಿತ ಕಾಲೇಜು ಆರಂಭಿಸಲು ಅನುದಾನ ನೀಡಬೇಕು. ಇದರಿಂದ ಈ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೂ ವೈದ್ಯಕೀಯ ಪದವಿ ಪಡೆಯಲು ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.
ಕರವೇ ಜಿಲ್ಲಾ ಅಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ವೈದ್ಯಕೀಯ ಕಾಲೇಜನ್ನು ಸರ್ಕಾರವೇ ಘೋಷಣೆ ಮಾಡಿತ್ತು. ಐದು ವರ್ಷ ಕಳೆದರೂ ಈ ವರೆಗೆ ಆರಂಭಿಸಿಲ್ಲ. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳೂ ನಡೆದಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದರಿಂದ ಈ ಭಾಗದ ಬಡ ವಿದ್ಯಾರ್ಥಿಗಳುಗೆ-ರೋಗಿಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಆಗ್ರಹಿಸಿದರು.
ಕರವೇ ಪದಾಧಿಕಾರಿಗಳು, ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಹಿ ಸಂಗ್ರಹಿಸಿದರು. ಅಲ್ಲದೇ ಫೆ.26ರಂದು ವಿದ್ಯಾಗಿರಿಯಲ್ಲಿ ಸಹಿ ಸಂಗ್ರಹ ಮಾಡಲು ನಿರ್ಧರಿಸಿದರು. ಇದೇ ವೇಳೆ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ವೈದ್ಯಕೀಯ ಕಾಲೇಜು ಆರಂಭಕ್ಕೆ ಒತ್ತಾಯಿಸಿದರು.
ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ, ಕರವೇ ಪ್ರಧಾನ ಕಾರ್ಯದರ್ಶಿ ಬಸವರಾಜ ಧರ್ಮಂತಿ, ಪ್ರಮುಖರಾದ ಸಂಗಮೇಶ ಕಲ್ಲೂರ, ಬಸವರಾಜ ಅಂಬಿಗೇರ, ಮಲ್ಲು ಕಟ್ಟಿಮನಿ, ಆತ್ಮಾರಾಮ ನೀಲನಾಯಕ, ರಾಜು ರಾಠೊಡ, ಪ್ರವೀಣ ಪಾಟೀಲ, ಡಿ.ಡಿ. ನದಾಫ, ಅಶೋಕ ಪೂಜಾರಿ ಇತರರು ಇದ್ದರು.