Advertisement

ಪ್ರತಿ ವಾರ್ಡ್‌ನಲ್ಲಿ ಕೇರ್‌ ಸೆಂಟರ್‌ ಆರಂಭಿಸಿ

01:04 PM Apr 30, 2021 | Team Udayavani |

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೌಮ್ಯ ಮತ್ತು ಮೃದು ಸ್ವರೂಪದ ಸೋಂಕಿತರ ಚಿಕಿತ್ಸೆಗೆ ವಾರ್ಡ್‌ ವಾರು ಕೋವಿಡ್‌ ಕೇರ್‌ ಸೆಂಟರ್‌ಸ್ಥಾಪಿಸಿ ಎಂದು ಹೈಕೋರ್ಟ್‌ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

Advertisement

ಕೋವಿಡ್‌ ನಿಯಂತ್ರಣ ಸಂಬಂಧ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎ.ಎಸ್‌. ಓಕ್‌ ಮತ್ತು ನ್ಯಾ. ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಈ ನಿರ್ದೇಶನ ನೀಡಿತು. ತೀವ್ರ ಸೋಂಕು ಇಲ್ಲದವರೂ ಸಹ ಆಸ್ಪತ್ರೆ ಸೇರುತ್ತಿದ್ದಾರೆ ಹಾಗಾಗಿ ಬೆಡ್‌ ಕೊರತೆ ಎದುರಾಗುತ್ತಿದೆ.

ಆದ್ದರಿಂದ ಮನೆಗಳಲ್ಲಿಐಸೋಲೇಷನ್‌ ಸಾಧ್ಯವಾಗದವರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ನ್ಯಾಯಪೀಠ ಹೇಳಿತು.ಸಂಕಷ್ಟಗಳ ಮಧ್ಯೆ ವೈದ್ಯರು, ನರ್ಸ್‌ಗಳು, ಕೋವಿಡ್‌ ವಾರಿಯರ್‌ಗಳ ಕಾರ್ಯ ಶ್ಲಾಗಿಸಿದ ಹೈಕೋರ್ಟ್‌, ವೈದ್ಯರು, ನರ್ಸ್‌ಗಳ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಪಿಜಿ ವಿದ್ಯಾರ್ಥಿಗಳು, ಅಂತಿಮವೈದ್ಯ ಪದವಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಸಲಹೆ ನೀಡಿತು.

ರೈಲ್ವೆಯ 300 ಬೆಡ್‌ ಬಳಸಲು ಆದೇಶ: ವಿಚಾರಣೆ ವೇಳೆ ಕೇಂದ್ರ ಸರ್ಕಾರದ ವಕೀಲರು, ನೈರುತ್ಯ ರೈಲ್ವೆ ಬೆಂಗಳೂರಿನಲ್ಲಿ 300 ಆಕ್ಸಿಜನ್‌ ಕೋಚ್‌ ಬೆಡ್‌ ಒದಗಿಸಲು ಸಿದ್ಧವಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ ಯಲ್ಲಿ ಕೋಚ್‌ ಲಭ್ಯವಿದ್ದು, ಅವುಗಳನ್ನು ಸರ್ಕಾರ ಬಳಸಿ ಕೊಂಡಿಲ್ಲ ಎಂದು ಹೇಳಿದರು. ಅದಕ್ಕೆ ನ್ಯಾಯಪೀಠ ಸರ್ಕಾರ ಮತ್ತು ಬಿಬಿಎಂಪಿ ತಕ್ಷಣ ರೈಲ್ವೆಯಿಂದ ಆ 300 ಬೆಡ್‌ ಪಡೆದುಕೊಳ್ಳಬೇಕು ಎಂದು ಆದೇಶಿಸಿತು.

ಸಂಕಷ್ಟದಲ್ಲಿ ಸೇನೆ ನೆರವಿಗೆ ಧಾವಿಸಲಿ: ಸೈನಿಕ ಆಸ್ಪತ್ರೆಗಳಲ್ಲಿ ಬೆಡ್‌ ಖಾಲಿ ಇಲ್ಲ ಎಂದಿದ್ದಾರೆ. ವಿಪತ್ತುಗಳ ಸಂಭವಿಸಿದಾಗ ಸೇನೆ ಜನಸಾಮಾನ್ಯರ ನೆರವಿಗೆ ಧಾವಿಸುತ್ತದೆ. ಕೊರೊನಾ ಸಹ ವಿಪತ್ತಿನ ಸ್ಥಿತಿ ತಂದಿದೆ.ಬೆಂಗಳೂರಿನ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದೆ. ಹಾಗಾಗಿ ಬೆಂಗಳೂರಿನಲ್ಲೂ ಸೇನಾ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಬೆಡ್‌ ಸೃಷ್ಟಿಸಲು ಕ್ರಮಕೈಗೊಳ್ಳಬೇಕು ಎಂದು ಹೈಕೋರ್ಟ್‌ ಸೇನೆಗೆ ಮನವಿ ಮಾಡಿತು.

Advertisement

ಎರಡು ದಿನಗಳಲ್ಲಿ ಪೋರ್ಟಲ್‌: ವಿಚಾರಣೆ ಹಾಜರಾಗಿದ್ದ ಫನಾ ಅಧ್ಯಕ್ಷ ಡಾ.ಎಚ್‌.ಎನ್‌ .ಪ್ರಸನ್ನ, ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಇನ್ನಿತರ ಸಮಗ್ರ ವಿವರಗಳನ್ನು ಒಳಗೊಂಡ ಪೋರ್ಟಲ್‌ ಸಿದ್ಧವಾಗುತ್ತಿದ್ದು, ಇನ್ನರಡು ದಿನಗಳಲ್ಲಿ ಅದು ಅನಾವರಣಗೊಳ್ಳಲಿದೆ ಎಂದರು. ಅದರಲ್ಲಿ ಸಾರ್ವಜನಿಕರಿಗೆ ಎಲ್ಲ ವಿವರಗಳನ್ನು ಲಭ್ಯವಾಗುವಂತೆ ಮಾಡಬೇಕು ಎಂದು ನ್ಯಾಯಾಲಯ ಆದೇಶ ನೀಡಿತು.

ಹೆಚ್ಚುವರಿ ಬೆಡ್‌ ಸೃಷ್ಟಿ: ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಕಮಾಂಡ್‌ ಆಸ್ಪತ್ರೆಯಲ್ಲಿ ಶೇ.50 ಬೆಡ್‌ ಗಾಗಿರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ ಎಂದರು. ಜೊತೆಗೆ ಹಜ್‌ ಭವನ್‌,ಪಶುವೈದ್ಯ ಕಾಲೇಜಿನಲ್ಲಿ ತಲಾ 100 ಬೆಡ್‌, ಇನ್ನೂ 1500 ಬೆಡ್‌ಗಳನ್ನು ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗಂಭೀರ ಸೋಂಕಿತರಿಗೆ ಮಾತ್ರ ಆಕ್ಸಿಜನ್‌ ಬೆಡ್‌, ರೆಮ್‌ ಡಿಸಿವಿರ್‌ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಸೇನಾ ಆಸ್ಪತ್ರೆಗಳಲ್ಲಿ ಬೆಡ್‌ ಖಾಲಿ ಇಲ್ಲ: ಈ ಮಧ್ಯೆ ಕೇಂದ್ರ ಸರ್ಕಾ ರದ ಪರ ವಾದ ಮಂಡಿಸಿದ ಎಂ.ಎನ್‌.ಕುಮಾರ್‌, ಸೇನಾ ಆಸ್ಪತ್ರೆಗಳಲ್ಲಿ ಸದ್ಯಕ್ಕೆ ಬೆಡ್‌ಗಳು ಖಾಲಿ ಇಲ್ಲ, ಅಲ್ಲಿ ಸೇನಾ ಸಿಬ್ಬಂದಿ ಮತ್ತು ಅವರ ಕುಟುಂದವರಿಗೆ ಮಾತ್ರ ಸೌಕರ್ಯ ಸಾಕಾಗುತ್ತಿದೆ, ಅಲ್ಲೂ ಹೆಚ್ಚಿನ ಸಂಖ್ಯೆಯ ಸೋಂಕಿತರಿದ್ದಾರೆ. ಬೇರೆ ರಾಜ್ಯಗಳಲ್ಲಿ ಸೇನೆ, ಸಾರ್ವಜನಿಕ ರಿಗೆ ಹೆಚ್ಚುವರಿ ಬೆಡ್‌ ಸೌಕರ್ಯ ಕಲ್ಪಿಸಿದೆ. ಆದರೆ ಏನೂ ಮಾಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next