Advertisement

ಥಿಯೇಟರ್‌ ಮುಚ್ಚಲು STARS ಕಾರಣನಾ?

09:11 AM Apr 27, 2019 | mahesh |

ಕನ್ನಡ ಚಿತ್ರರಂಗದ ಮಾರುಕಟ್ಟೆ ಈಗ ಎಂದಿಗಿಂತಲೂ ವಿಸ್ತಾರವಾಗಿದೆ. ಇದನ್ನು ಒಪ್ಪಲೇಬೇಕು. ಹಾಗಂತ, ಇಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ. ಚಿತ್ರಮಂದಿರಗಳ ಸಮಸ್ಯೆ ಮೊದಲ ಕೂಗು. ಈ ಕೂಗು ಹೊಸದಲ್ಲ. ಬೆರಳೆಣಿಕೆಯ ಸ್ಟಾರ್‌ ನಟರು ಮತ್ತು ಒಂದಷ್ಟು ಗುರುತಿಸಿಕೊಂಡ ಹೀರೋಗಳ ಸಿನಿಮಾ ಹೊರತುಪಡಿಸಿದರೆ, ಹೊಸಬರಿಗಂತೂ ಚಿತ್ರಮಂದಿರ ಅನ್ನೋದು ಗಗನ ಕುಸುಮ. ಚಿತ್ರಮಂದಿರ ಸಿಗುತ್ತಿಲ್ಲ ಎಂಬ ಹೊಸಬರ ಅಳಲು ಒಂದು ಕಡೆಯಾದರೆ, ಸಿನಿಮಾಗಳ ಗಳಿಕೆ ಇಲ್ಲವಾದ್ದರಿಂದ ರಾಜ್ಯಾದ್ಯಂತ ಸರಿ ಸುಮಾರು 70 ಕ್ಕೂ ಹೆಚ್ಚು ಚಿತ್ರಮಂದಿರಗಳು ಮುಚ್ಚುವ ನಿರ್ಧಾರದಲ್ಲಿವೆ ಎಂಬ ಅಚ್ಚರಿ ಇನ್ನೊಂದು ಕಡೆ. ಹೌದು, ಆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ಅಥವಾ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಚನೆಗೆ ಹಲವರು ಮುಂದಾಗಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ಏನು ಈ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆ ಕುರಿತ ಪ್ರಶ್ನೆಗೆ ಹಲವರ ಉತ್ತರ ಇಲ್ಲಿ…

Advertisement

ಚಿತ್ರಮಂದಿರದಲ್ಲಿ ಮೊದಲ ಪ್ರದರ್ಶನಕ್ಕೆ ನಿರೀಕ್ಷೆಯಷ್ಟು ಜನರೇ ಇರೋದಿಲ್ಲ… -ಈ ಮಾತು ಸ್ಟಾರ್‌ ಸಿನಿಮಾಗಳಿಗೆ ಅನ್ವಯಿಸುವುದಿಲ್ಲ. ಇಲ್ಲಿ ಫ‌ಸ್ಟ್‌ಲೈನ್‌, ಸೆಕೆಂಡ್‌ ಲೈನ್‌ ಹಾಗೂ ಥರ್ಡ್‌ಲೈನ್‌ ಹೀರೋಗಳು ಎಂಬ ಕೆಟಗರಿ ಮಾಡಲಾಗಿದೆ. ಸ್ಟಾರ್‌ಗಳಿಗಿಂತ ಇಲ್ಲೀಗ ಹೊಸಬರ ಚಿತ್ರಗಳ ಸಂಖ್ಯೆಯೇ ಹೆಚ್ಚುತ್ತಿವೆ. ಅದಕ್ಕೆ ಕಾರಣ ಸ್ಟಾರ್‌ಗಳ ಡೇಟ್‌ ಇಲ್ಲದೇ ಇರೋದು. ಸ್ಟಾರ್‌ಗಳು ವರ್ಷಕ್ಕೆ ಒಂದೇ  ಸಿನಿಮಾದಲ್ಲಿ ಬಿಜಿಯಾಗಿರುತ್ತಾರೆ. ಹೀಗಾಗಿ, ಸಿನಿಮಾ ಉದ್ಯಮವನ್ನೇ ನಂಬಿರುವ ನಿರ್ಮಾಪಕ, ನಿರ್ದೇಶಕ ಅನಿವಾರ್ಯವಾಗಿ ಸೆಕೆಂಡ್‌ ಲೈನ್‌ ಹೀರೋ ಅಥವಾ ಥರ್ಡ್‌ಲೈನ್‌ ಹೀರೋ ಬಳಿ ಹೋಗುತ್ತಾರೆ. ಫ‌ಸ್ಟ್‌ಲೈನ್‌ ಹೀರೋಗಳಿಗೆ ಮಾರ್ಕೆಟ್‌ ಇರುತ್ತೆ. ಅದು ವಕೌìಟ್‌ ಆಗುತ್ತೆ. ಆದರೆ, ಸೆಕೆಂಡ್‌ಲೈನ್‌ ಹೀರೋಗಳಿಗೆ ಮಾರ್ಕೆಟ್‌ ಆವರೇಜ್‌ ಆಗಿದ್ದರೂ, ಕೇಳುವ ಸಂಭಾವನೆ ಮತ್ತು ಸೌಕರ್ಯಗಳನ್ನು ಪೂರೈಸುವ ಹೊತ್ತಿಗೆ ದೊಡ್ಡ ಹೀರೋ ಸಿನಿಮಾದಷ್ಟೇ ಖರ್ಚಾಗುತ್ತೆ ಎಂದು ಯೋಚಿಸಿ, ಲೆಕ್ಕಾ ಹಾಕುವ ಕೆಲ ನಿರ್ಮಾಪಕರು ಹೊಸಬರ ಮೊರೆ ಹೋಗುತ್ತಾರೆ. ಹಾಗೊಂದು
ಸಿನಿಮಾವನ್ನೂ ಶುರು ಮಾಡುತ್ತಾರೆ. ಶುರುವಾದ ಬಳಿಕ ಬಿಡುಗಡೆ ಮಾಡಲೇಬೇಕು. ಆದರೆ, ಸಮಸ್ಯೆ ಇರೋದು ಅಲ್ಲೇ. ಯಾಕೆಂದರೆ ಹೊಸಬರಿಗೆ ಚಿತ್ರಮಂದಿರ ಸಿಗುವುದು ಕಷ್ಟ. ಸಿಕ್ಕರೂ ಬೋಣಿ ಆಗಲ್ಲ ಎಂಬ ಮಾತೂ ಕೂಡ ಗಾಂಧಿನಗರದಲ್ಲಿ ಜನಜನಿತ. ಹೀಗಾಗಿ ಸಿನಿಮಾ ಮಾಡಿದವರಿಗೂ ನಷ್ಟ. ಚಿತ್ರಮಂದಿರಗಳಲ್ಲಿ ಜನ ಬರದೆ ಖಾಲಿಯಾಗಿ ಆ ಚಿತ್ರಮಂದಿರದ ಚಾರ್ಮು ಕಡಿಮೆಯಾಗಿದೆ. ಇದಕ್ಕೆಲ್ಲಾ ಕಾರಣ ಏನು? ಈ ಬಗ್ಗೆ ನಿರ್ಮಾಪಕ ಕಂ ವಿತರಕ ಜಾಕ್‌ ಮಂಜು ಹೇಳುವುದಿಷ್ಟು.

“ಹೊಸದಾಗಿ ಬರುವ ನಿರ್ಮಾಪಕರು ಹೋಮ್‌ ವರ್ಕ್‌ ಮಾಡಲ್ಲ. ಇಲ್ಲಿ ಸ್ಟಾರ್‌ ಸಿನಿಮಾ ಮಾಡಿದರೆ ಏನಾಗುತ್ತೆ, ಹೊಸಬರ ಹಿಂದೆ ಬಂದರೆ ಏನಾಗುತ್ತೆ ಎಂದು ಯೋಚಿಸಲ್ಲ. ಹೊಸಬರಿಗೆ ಕಥೆ ರೆಡಿ ಮಾಡಿ, ಅವಸರದಲ್ಲೇ ಮುಹೂರ್ತ ಮುಗಿಸಿ ಚಿತ್ರ ಮಾಡುತ್ತಾರೆ. ಬಳಿಕ ರಿಲೀಸ್‌ ಸಮಸ್ಯೆಗೆ ಸಿಲುಕುತ್ತಾರೆ. ಅಂತಹ ಹೊಸಬರ ಚಿತ್ರಗಳಿಗೆ ಮಾರ್ನಿಂಗ್‌ ಶೋ ತಕ್ಕ ಮಟ್ಟಿಗೆ ಓಕೆ. ಎರಡನೇ ಪ್ರದರ್ಶನಕ್ಕೆ ಜನರೇ ಇರಲ್ಲ. ಚಿತ್ರಮಂದಿರಗಳಿಗೆ ಕಟ್ಟುವ ಬಾಡಿಗೆ ಕೂಡ ವಕೌìಟ್‌ ಆಗಲ್ಲ.
ಹೋಗಲಿ, ಆ ದಿನ ಖರ್ಚಾದ ಹಣವೂ ಸಿಗಲ್ಲ. ಇದರಿಂದ ನಿರ್ಮಾಪಕರಿಗೂ ನಷ್ಟ. ಅತ್ತ ಸರಿಯಾಗಿ ಬಾಡಿಗೆ ಸಂದಾಯ ಆಗದೆ ಚಿತ್ರಮಂದಿರಗಳಿಗೂ ಸಮಸ್ಯೆ ಎದುರಾಗುತ್ತಿರುವುದು ನಿಜ’ ಎಂಬುದುಅವರ ಮಾತು.

ಥಿಯೇಟರ್‌ ಮುಚ್ಚಿ ಏನ್ಮಾಡಬೇಕು?
ಚಿತ್ರಮಂದಿರಕ್ಕೆ ಪ್ರೇಕ್ಷಕರ ಕೊರತೆಯ ಬಗ್ಗೆ ಮಾತನಾಡುವ ಮಾಲೀಕರೊಬ್ಬರು, “ಸಾಮಾನ್ಯವಾಗಿ ಕೆಲ ಚಿತ್ರಮಂದಿರಗಳಿಗೆ ವಾರಕ್ಕೆ ಒಂದುವರೆ, ಎರಡು, ಮೂರು ಅಥವಾ ನಾಲ್ಕು ಲಕ್ಷ ರು. ಬಾಡಿಗೆ ಇರುತ್ತೆ. ಚಿತ್ರಮಂದಿರಗಳ ಮಾಲೀಕರಿಗೂ ಅವರದೇ ಆದಂತಹ ಕಮಿಟ್ಸ್‌ಮೆಂಟ್‌ ಇದ್ದೇ ಇರುತ್ತೆ. ಸ್ಟಾರ್‌ ಸಿನಿಮಾಗಳನ್ನು ಹಾಕಿದಾಗ ಎರಡು ವಾರಕ್ಕೆ ಇಂತಿಷ್ಟು ಗಳಿಕೆ ಫಿಕ್ಸ್‌ ಆಗಿರುತ್ತೆ. ಶೇ.18 ರಷ್ಟು ರೆವೆನ್ಯೂ ತೆಗೆದಿಟ್ಟರೆ, ಬಾಡಿಗೆ ಸಮಸ್ಯೆ ಇರಲ್ಲ. ಆದರೆ, ಸ್ಟಾರ್‌ ಸಿನಿಮಾ ಯಾವತ್ತೂ ಇರಲ್ಲ ಎಂಬುದನ್ನಿಲ್ಲಿ ಗಮನಿಸಬೇಕು. ಸ್ಟಾರ್‌ಗಳದ್ದು ವರ್ಷಕ್ಕೊಂದೇ ಸಿನಿಮಾ ಬರುತ್ತೆ. ಉಳಿದವರ ಸಿನಿಮಾಗಳಿಗೆ
ಗಳಿಕೆಯೂ ಇಲ್ಲ, ಶೇರ್‌ ವ್ಯವಸ್ಥೆಯಲ್ಲಿ ಚಿತ್ರಮಂದಿರ ಓಡಿಸುವುದಕ್ಕೂ ಆಗುವುದಿಲ್ಲ. ಹಾಗಾಗಿ, ಚಿತ್ರಮಂದಿರಗಳನ್ನು ಇಟ್ಟುಕೊಳ್ಳುವುದಕ್ಕಿಂತ ಅವುಗಳನ್ನು ಮುಚ್ಚಿ, ಕ್ರಮೇಣ ವಾಣಿಜ್ಯಕ್ಕೆ ಸಂಬಂಧಿಸಿದಂತೆ ಪರಿವರ್ತಿಸಬಹುದಾ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಎಂಬುದೇ ಈಗ ಅಚ್ಚರಿಯ ಸಂಗತಿ. ಇದು ಈಗಲೇ ಹೀಗೆ ಆಗಿಬಿಟ್ಟರೆ, ಮುಂದೆ ಹೇಗೆ ಎಂಬ ಪ್ರಶ್ನೆ ಅವರ ಮುಂದೆ ಗಿರಕಿ ಹೊಡೆಯುತ್ತಿದೆ.

ಈಗಾಗಲೇ ಗಾಂಧಿನಗರದಲ್ಲಿದ್ದ “ಕಪಾಲಿ’, “ತ್ರಿಭುವನ್‌’,”ಕೈಲಾಶ್‌’, ಎಂ.ಜಿ.ರಸ್ತೆಯಲ್ಲಿದ್ದ “ಶಂಕರ್‌ ನಾಗ್‌’,”ರೆಕ್ಸ್‌’ ಚಿತ್ರಮಂದಿರಗಳು ಮುಚ್ಚಿರುವ ಉದಾಹರಣೆ ಕಣ್ಣ ಮುಂದಿವೆ. ಜನರೇ ಬರದಿದ್ದರೆ, ಗಳಿಕೆ ಹೇಗೆ? ಅದೂ ಇಲ್ಲದೆ ಹೋದರೆ, ಕರೆಂಟ್‌ ಬಿಲ್‌, ಕಸಗೂಡಿಸಿದವರಿಗೆ ಕೂಲಿ, ವ್ಯವಸ್ಥಾಪಕರಿಗೆ ವೇತನ ಇತ್ಯಾದಿ ಎಲ್ಲಿಂದ ಕೊಡಬೇಕೆಂಬ ಪ್ರಶ್ನೆಯೂ ಕಾಡುತ್ತಿದೆ’ ಎಂದು ವಿವರಿಸುತ್ತಾರೆ.

Advertisement

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರ, ತಾಲೂಕು ಮಟ್ಟದ ಚಿತ್ರಮಂದಿರಗಳದ್ದೂ ಇದೇ ಸಮಸ್ಯೆ. ಹೀಗಾಗಿ ಅವರೆಲ್ಲರೂ ಚಿತ್ರಮಂದಿರ ಇಟ್ಟುಕೊಳ್ಳಬೇಕಾ, ಮುಚ್ಚಿ, ಬೇರೆ ಏನಾದರೂ ವ್ಯಾಪಾರ ಮಳಿಗೆ ಮಾಡಬೇಕಾ ಅಥವಾ ರಿಲಯನ್ಸ್‌ನಂತಹ ಕಂಪೆನಿಗಳಿಗೆ ಗೋದಾಮು ಮಾಡಲು ಬಿಟ್ಟುಕೊಡಬೇಕಾ, ಅಪಾರ್ಟ್‌ಮೆಂಟ್‌ ಕಟ್ಟಿಸಿ ಸೇಲ್‌ ಮಾಡಬೇಕಾ ಎಂಬಿತ್ಯಾದಿ ವಿಷಯಗಳನ್ನು ಚರ್ಚಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

ಈಗ ಡಿಜಿಟಲ್‌ವುಯ. ಸಿನಿಮಾ ಆನ್‌ ಲೈನ್‌ನಲ್ಲೇ ಪಬ್ಲಿಸಿಟಿ ಆಗುತ್ತಿದೆ. ಹೀಗಿದ್ದರೂ, ಜನ ಸಿನಮಾ ನೋಡಲು ಚಿತ್ರಮಂದಿರಕ್ಕೆ ಬರುವುದಿಲ್ಲವೇ? ಈ ಪ್ರಶ್ನೆಯನ್ನು ವಿತರಕರೊಬ್ಬರ ಮುಂದಿಟ್ಟರೆ, “ಪಬ್ಲಿಸಿಟಿ ಆನ್‌ ಲೈನ್‌ನಲ್ಲಿ ಆಗುವುದೇನೋ ನಿಜ. ಅದು ಒಳ್ಳೆಯ ಬೆಳವಣಿಗೆಯೂ ಹೌದು. ವಾರಕ್ಕೆ ಆರೇಳು ಸಿನಿಮಾ ರಿಲೀಸ್‌ ಆಗಿಬಿಟ್ಟರೆ ಜನ ಯಾವ ಸಿನಿಮಾ ನೋಡುತ್ತಾರೆ. ಡಿಜಿಟಲ್‌ ಪಬ್ಲಿಸಿಟಿ ಎಷ್ಟು ಜನರಿಗೆ ರೀಚ್‌ ಆಗುತ್ತೆ. ಲೈಕ್‌, ಕೋಟಿ, ಲಕ್ಷಗಟ್ಟಲೆ ವೀವ್ಸ್‌ ಆಯ್ತು ಎನ್ನುವ ಸಿನಿಮಾ ಮಂದಿಗೆ ಅಷ್ಟೇ ಜನ ಚಿತ್ರ ನೋಡಿದರೂ ಸಾಕಲ್ಲವೇ? ಇಲ್ಲಿ ಎಷ್ಟು ಜನ ನೋಡಿದ್ದಾರೆ ಎಂಬುದು ಇಂಟರ್‌ನಲ್‌ ಕಾಂಪಿಟೇಷನ್‌ ಅಷ್ಟೇ. ಅದ್ಯಾವುದೂ ಇಲ್ಲಿ ವರ್ಕೌಟ್‌ ಆಗಲ್ಲ’ ಎಂಬ ಸತ್ಯ ಬಿಚ್ಚಿಡುತ್ತಾರೆ.

ಸ್ಟಾರ್‌ಗಳು 3 ಚಿತ್ರ ಕೊಡಲೇಬೇಕು
ಚಿತ್ರಮಂದಿರಗಳಿಗೆ ಜನ ಬರಲು ಏನು ಮಾಡಬೇಕು? ಚಿತ್ರ ಪ್ರದರ್ಶಕರೊಬ್ಬರು ಹೇಳುವುದಿಷ್ಟು. “ಅದು ಸಿಂಪಲ್‌, ಸ್ಟಾರ್‌ ನಟರು ವರ್ಷಕ್ಕೆ ಒಂದೇ ಸಿನಿಮಾ ಮಾಡುವುದನ್ನು ಕೈ ಬಿಟ್ಟು, ವರ್ಷಕ್ಕೆ ಮಿನಿಮಮ್‌ ಮೂರು ಚಿತ್ರ ಮಾಡಲೇಬೇಕು. ಇಲ್ಲದಿದ್ದರೆ, ಚಿತ್ರರಂಗಕ್ಕೆ ಇನ್ನಷ್ಟು ತೊಂದರೆ ಗ್ಯಾರಂಟಿ . ಕನ್ನಡ ಚಿತ್ರರಂಗದಲ್ಲೀಗ ಡಬ್ಬಿಂಗ್‌ ಗಾಳಿ ಬೀಸಿಯಾಗಿದೆ. ಈಗಾಗಲೇ ಬಂದ ಸಿನಿಮಾಗಳು ಯಶಸ್ಸು ಪಡೆದಿಲ್ಲ. ಒಂದು ವೇಳೆ ಸಕ್ಸಸ್‌ ಪಡೆದರೆ? ಹಾಗೇನಾದರೂ ಆದರೆ, ಮುಂದೆ ಇಲ್ಲಿನ ತಂತ್ರಜ್ಞರಿಗೆ ಮತ್ತು ಒಕ್ಕೂಟದ ಕಾರ್ಮಿಕರಿಗೆ ಹೆಚ್ಚು ಕೆಲಸವೇ ಇರಲ್ಲ. ಹಾಗಾಗಿ, ಸ್ಟಾರ್‌ ನಟರು ವರ್ಷಕ್ಕೆ ಮೂರು
ಸಿನಿಮಾ ಮಾಡುವ ಮನಸ್ಸು ಮಾಡಿದರೆ, ಚಿತ್ರರಂಗದಲ್ಲಿ ಇನ್ನಷ್ಟು ದುಡಿಮೆಯ ಚಟುವಟಿಕೆ ಹೆಚ್ಚುತ್ತದೆ. ಇಲ್ಲಿ ಹೇಗೆ ಲೆಕ್ಕ ಹಾಕಿದರೂ, ಹತ್ತು ಮಂದಿ ಸ್ಟಾರ್‌ ನಟರು ಸಿಗುತ್ತಾರೆ. ಒಬ್ಬೊಬ್ಬರು ಮೂರು ಸಿನಿಮಾ ಮಾಡಿದರೆ ವರ್ಷಕ್ಕೆ ಮುವತ್ತು ಸ್ಟಾರ್ ಸಿನಿಮಾಗಳಾಗುತ್ತವೆ. ಆಗ ಇಂಡಸ್ಟ್ರಿಯೂ ಚೇತರಿಕೆಯಲ್ಲಿರುತ್ತೆ. ಉಳಿದಂತೆ ಸೆಕೆಂಡ್‌, ಥರ್ಡ್‌ ಲೈನ್‌ ಹೀರೋಗಳ ಚಿತ್ರಗಳು, ಹೊಸಬರ ಹೊಸ ಜಾನರ್‌ ಸಿನಿಮಾಗಳು ಎಂಟ್ರಿಯಾ ದರೆ ಚಿತ್ರಮಂದಿರಗಳು ರಂಗೇರುತ್ತವೆ.

ಸ್ಟಾರ್‌ ಸಿನಿಮಾ ನೋಡಲು ಬರುವ ಜನರು ಸಹ, ಮೆಲ್ಲನೆ ಎಲ್ಲಾ ನಟರ ಚಿತ್ರ ನೋಡುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಯಾವ ನಟರಿಗೆ ಜನರು ಮನ್ನಣೆ ಕೊಟ್ಟಿದ್ದಾರೋ, ಆ ನಟರು ವರ್ಷಕ್ಕೆ ಮೂರು ಚಿತ್ರ ಮಾಡುವತ್ತ ಮುಂದಾದರೆ, ಸಮಸ್ಯೆ ಇರಲ್ಲ. ಒಂದು ವೇಳೆ ಸ್ಟಾರ್‌ನಟರು ಒಂದೇ ಚಿತ್ರಕ್ಕೆ ಸುಮ್ಮನಾದರೆ, ಇಲ್ಲಿನ ಚಿತ್ರಣವೇ ಬದಲಾಗುತ್ತೆ. ಯಾಕೆಂದರೆ, ಪರಭಾಷೆ ಸಿನಿಮಾಗಳ ಹಾವಳಿ ಮೆಲ್ಲನೆ ಹೆಚ್ಚುತ್ತಿದೆ. “ಡಿಯರ್‌ ಕಾಮ್ರೇಡ್‌’ ಚಿತ್ರದ ನಿರ್ಮಾಪಕರೇ ಕನ್ನಡಕ್ಕೆ ಡಬ್‌ ಮಾಡಿ ಬಿಡುಗಡೆ ತಯಾರಿಯಲ್ಲಿದ್ದಾರೆ ಎಂಬ ಸುದ್ದಿ ಇದೆ. ಎಲ್ಲಿಯವರೋ ಇಲ್ಲಿಗೆ ಬಂದು, ಹೊರಗಿನ ಹೀರೋಗಳ ಚಿತ್ರ ತಂದು ಇಲ್ಲಿ ಬಿಡುಗಡೆ ಮಾಡಿ, ಹಣ ಮಾಡುವ ಪ್ರಯತ್ನದಲ್ಲಿದ್ದಾರೆ. ಆದರೆ, ನಮ್ಮಲ್ಲಿ ಯಾಕೆ ಆಗುತ್ತಿಲ್ಲ? ಈ ಬಗ್ಗೆ ಸಿನಿಮಾ ಉದ್ಯಮಕ್ಕೆ ಸಂಬಂಧಿಸಿದವರು ಚರ್ಚಿಸಿ, ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ. ಒಟ್ಟಾದರೆ, ಇಲ್ಲಿ ಎಲ್ಲಾ ಬದಲಾವಣೆ ಸಾಧ್ಯ. ಇಲ್ಲವಾದರೆ,  ಕೆಲವೇ ವರ್ಷಗಳಲ್ಲಿ ಸಿಂಗಲ್‌ ಚಿತ್ರಮಂದಿರಗಳು ಮಾಯವಾದರೂ ಅಚ್ಚರಿ ಇಲ್ಲ’ ಎನ್ನುತ್ತಾರೆ ಹೆಸರು ಹೇಳದ ಪ್ರದರ್ಶಕರು. ಚಿತ್ರಮಂದಿರಗಳನ್ನು ಮುಚ್ಚಿಬಿಡುವುದಾ? ಮಾಲೀಕರೆಲ್ಲರೂ ಇಂಥದ್ದೊಂದು ಯೋಚನೆಗೆ ಮುಂದಾಗಿದ್ದಾರೆ ಎಂಬ ಗುಸು ಗುಸು ಹೆಚ್ಚಾಗಿದೆ. ಸ್ಟಾರ್‌ ಸಿನಿಮಾಗಳಿಗೆ ಆದಾಯ ಬರುತ್ತೆ. ಹೆಚ್ಚೆಚ್ಚು ಚಿತ್ರ ಮಾಡಿದರೆ, ಇಲ್ಲಿಯವರಿಗೆ ಒಳಿತು.

ಬಾಲಿವುಡ್‌ನ‌ಲ್ಲಿ ಅಕ್ಷಯ್‌ಕುಮಾರ್‌, ಅಮಿತಾಭ್‌ ಬಚ್ಚನ್‌ ಮೂರು ಚಿತ್ರ ಮಾಡುತ್ತಾರೆ. ಅತ್ತ ರಜನಿಕಾಂತ್‌ ಕೂಡ ಎರಡು ಚಿತ್ರ ಮಾಡುತ್ತಾರೆ. ಆದರೆ ನಮ್ಮ ಸ್ಟಾರ್‌ಗಳು ಆ ಬಗ್ಗೆ ಮನಸ್ಸು ಮಾಡುತ್ತಿಲ್ಲ. ಇಲ್ಲಿ ಸ್ಟಾರ್‌ಗಳು ಡೇಟ್‌ ಕೊಡಲಿ, ಅವರ ಚಿತ್ರ ಮಾಡಲು ಕ್ಯೂ ನಿಲ್ಲುತ್ತಾರೆ. ಮೊದಲು ಡೇಟ್‌ ಕೊಟ್ಟು ಕಥೆ ಕೇಳಲು ರೆಡಿಯಾಗಿರಬೇಕು ಎಂದು ಹೇಳುವ ರ್ಮಾಪಕರೊಬ್ಬರು, ಕನ್ನಡದ ಮಾರುಕಟ್ಟೆ ಇನ್ನಷ್ಟು ವಿಸ್ತಾರ ಆಗಲು ಮೇಲ್ಪಂಕ್ತಿಯ ಹತ್ತು ನಟರು ಕನಿಷ್ಟ ಮೂರು ಚಿತ್ರ ಮಾಡಬೇಕು ಎನ್ನುವ ಅವರು, ಗುಡ್‌ ಸಿನಿಮಾ ಇನ್ವೆ„ಟ್‌ ಆಡಿಯನ್ಸ್‌ ಫಾರ್‌ ಥಿಯೇಟರ್‌, ಬ್ಯಾಡ್‌ ಸಿನಿಮಾ ರಿಜೆಕ್ಟ್ ಆಡಿಯನ್ಸ್‌ ಫ‌ಮ್‌ ಥಿಯೇಟರ್‌ ಎನ್ನುತ್ತಲೇ, ಇಷ್ಟೆಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ತುರ್ತು ಅಗತ್ಯವಿದೆ ಎನ್ನುತ್ತಾರೆ

ವಿಜಯ್‌ ಭರಮಸಾಗರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next