ಬೆಳಗ್ಗೆಯಿರಲಿ, ಸಂಜೆಯಿರಲಿ ನಮಗೆ ಒಂದು ಲೋಟ ಚಹಾವೋ, ಕಾಫಿಯನ್ನೋ ಹೀರದಿದ್ದರೆ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಕಾಫಿ, ಚಹಾ ಇವೆರಡು ಪ್ರತೀ ಮನೆಯ ಮುಖ್ಯ ಪಾತ್ರವೇ ಆಗಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಅದಲ್ಲದೇ ಈ ಕಾಫಿ ಪ್ರಿಯರೂ ಹಾಗೂ ಚಹಾ ಪ್ರಿಯರ ನಡುವೆ ಯಾವುದು ಮೇಲು ಎಂಬುದರ ಕುರಿತು ಕೆಲವೊಮ್ಮೆ ಪೈಪೋಟಿಯೇ ನಡೆದುಬಿಡುತ್ತದೆ. ನಮಗೆ ಹೇಗೆ ಫಿಲ್ಟ್ರ್ ಕಾಫಿ ಜೀವವೋ ಹಾಗೇ ಅಮೆರಿಕನ್ನರಿಗೆ ಅಲ್ಲಿನ ಸ್ಟಾರ್‌ಬಕ್ಸ್ ಸಹ ನಿತ್ಯದ ಬೆಳಗು. ಜಗತ್ತಿನ ದೊಡ್ಡಣನ ನಾಡಿನಲ್ಲಿರುವ ಸ್ಟಾರ್‌ಬಕ್ಸ್‌ಗೆ ಮರುಳಾದವರೇ ಇಲ್ಲ…ಸ್ಟಾರ್‌ಬಕ್ಸ್‌ನ ಒಳಗೆ ಏನಿದೆ ಎನ್ನುವುದು ಈ ಬಾರಿಯ ಅಂಕಣದಲ್ಲಿ.
ಚಹಾ, ಕಾಫಿ ವಿಷಯಕ್ಕೆ ಬಂದರೆ ನಾವು ಭಾರತೀಯರು ಎಂತಹ ಸ್ಪರ್ಧೆಗೂ ಸಿದ್ಧ. ಚಹಾ ಮತ್ತು ಕಾಫಿಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು. ನಮ್ಮ ಬೆಳಗು ಶುರುವಾಗುವುದು ಒಂದು ಕಪ್ ಚಹಾನಿಂದ. ಎಂತಹ ತಲೆನೋವಿಗೂ ಮದ್ದು ಬಿಸಿಬಿಸಿ ಫಿಲ್ಟರ್ ಕಾಫಿ. ಅತಿಥಿಗಳಿಗೆ ಚಹಾ ಅಥವಾ ಕಾಫಿ ಎರಡರಲ್ಲಿ ಒಂದನ್ನು ನೀಡಿ ಆದರಿಸದೇ ಹೋದರೆ ಅದು ಅವರಿಗೆ ಅಪಮಾನ ಮಾಡಿದಂತೆ ಎಂಬಂತೆ ನಮ್ಮೊಳಗೆ ಬೆರೆತು ಹೋಗಿದೆ ಈ ಚಹಾ ಮತ್ತು ಕಾಫಿಗಳ ವ್ಯಾಮೋಹ.
ಚಹಾ ಮತ್ತು ಕಾಫಿ ಇವೆರಡರ ಮಧ್ಯದಲ್ಲಿ ಯಾವುದು ಶ್ರೇಷ್ಠ ಎಂಬ ವಾದವನ್ನು ನಾವಿನ್ನೂ ಗೆದ್ದಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ಟೀಂ ಚಹಾ, ಟೀಂ ಕಾಫಿ ಎಂಬ ಗುಂಪು ಕಾಣಿಸಿಕೊಳ್ಳುತ್ತ ತಾವೇ ಅತ್ಯುತ್ತಮ ಎಂಬಂತೆ ವಾದಗಳನ್ನು ಮಂಡಿಸುತ್ತಾರಾದರೂ ಅದಕ್ಕೆ ತೀರ್ಪು ಹೊರಬರದೇ ವರ್ಷಾನುಗಟ್ಟಲೇ ಕೋರ್ಟ್‌ನಲ್ಲಿ ನಡೆಯುತ್ತಲೇ ಇರುವ ಕೇಸ್‌ನಂತೆ ಅದು ಮುಂದುವರೆಯುತ್ತಲೇ ಇರುತ್ತದೆ. ಎರಡು ಕಣ್ಣುಗಳಲ್ಲಿ ಯಾವುದು ಶ್ರೇಷ್ಠ ಎಂದರೆ ಏನೆಂದು ಉತ್ತರಿಸುವುದು ಅಲ್ಲವೇ?
ಇಂತಹ ದೇಶದಿಂದ ಬಂದ ನಮಗೆ ಇಲ್ಲಿ ಅಮೆರಿಕಾದವರ ಕಾಫಿ ಹುಚ್ಚು ನೋಡಿ ಅಗಾಧವಾಗಿತ್ತು. ನಮ್ಮ ಹಾಗೆ ಇವರು ಪುಟ್ಟ ಸ್ಟೀಲ್ ಲೋಟದಲ್ಲಿ ಒಂದೆರಡು ಗುಟುಕು ಕುಡಿದು ಅದರ ಬಿಸಿಯನ್ನು ಗಂಟಲಿಗೆ ತಾಗಿಸಿಕೊಂಡು ಮುಂದಿನ ಎರಡೂ¾ರು ತಾಸಿನವರೆಗೆ ನಾಲಿಗೆಗೆ ತಾಗಿದ ಸವಿಯನ್ನು ಚಪ್ಪರಿಸುತ್ತ ಕೂರುವ ಮಂದಿಯಲ್ಲ. ಉದ್ದನೆಯ ಪೇಪರ್ ಲೋಟದಲ್ಲಿ ದಂಡಿಯಾಗಿ ಕಾಫಿ ಸುರಿದುಕೊಂಡು ಅದನ್ನು ಇಷ್ಟಿಷ್ಟೇ ಗುಟುಕರಿಸುತ್ತ ಗಂಟೆಗಟ್ಟಲೇ ಕುಡಿಯುವವರು. ಅದು ಆರಿದಾಗಲೆಲ್ಲ ಓವನ್ನಿನಲ್ಲಿ ಮತ್ತೆ ಬಿಸಿ ಮಾಡಿಕೊಂಡು ಕುಡಿಯುತ್ತಲೇ ಇರುವವರು. ಕೆಲವರಂತೂ ಹಾಲು ಹಾಕಿರದ ಬ್ಲ್ಯಾಕ್ ಕಾಫಿಯನ್ನು ಬಹಳ ಇಷ್ಟ ಪಟ್ಟು ಕುಡಿಯುತ್ತಾರೆ. ಒಂದೇ ಗುಟುಕಿಗೆ ಬಾಯೆಲ್ಲ ಕಹಿಯಾಗಿ ಇಡೀ ಜೀವವನ್ನು ನಡುಗಿಸುವ ಈ ಕಾಫಿ ಅದು ಹೇಗೆ ಪ್ರಿಯವಾಗುತ್ತದೆ ಎಂಬ ನನ್ನ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕೆಲವರಿಗಂತೂ ಇದು ಚಟ. ಬಿಡಲಾಗದ ಚಟ. ವೈದ್ಯರು ಕ್ಯಾಫೀನ್ ಅನ್ನು ಅತಿಯಾಗಿ ಸೇವಿಸಬೇಡಿ ಎಂದು ಹೇಳಿದಾಗ ಈ ಸಿಗರೇಟು, ಮದ್ಯ ವ್ಯಸನವನ್ನು ಬಿಡುವಾಗ ಒದ್ದಾಡುವಷ್ಟೇ ಕಾಫಿಯನ್ನು ಸೇವಿಸದಿರಲು ಒದ್ದಾಡುತ್ತಾರೆ.
ಸ್ಟಾರಬಕ್ಸ್ ಅಂಗಡಿಯಂತೂ ಅಮೆರಿಕನ್ನರ ಪಾಲಿನ ಜೀವನಾಡಿ. ತರಾವರಿ ಕಾಫಿಗಳನ್ನು ಮಾರಾಟ ಮಾಡುವ ಈ ಅಂಗಡಿಗೆ ಪ್ರತೀ ದಿನ ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ಭೇಟಿ ಕೊಟ್ಟು ಲ್ಯಾಟೆ, ಕ್ಯಾಪಚಿನೋ, ಅಮೆರಿಕಾನೋ, ಬ್ರಿವ್ಡ್ ಕಾಫೀ ಎಂದೆಲ್ಲ ಕಿವಿಗೆ ಫ್ಯಾನ್ಸಿಯಾಗಿ ಕೇಳುವಂತಹ ಹೆಸರುಗಳನ್ನು ಹೇಳುತ್ತ ಆಡರ್ ಮಾಡಿ, ಅವರು ಸಿದ್ಧಪಡಿಸಿ ಕೊಡುವ ಕಾಫಿ ಕಪ್ಪನ್ನು ಕೈಯ್ಯಲ್ಲಿ ಹಿಡಿದುಕೊಂಡು ಆಫೀಸಿಗೆ ಹೋಗುವುದು ಪ್ರತಿಷ್ಠಯ ವಿಷಯ ಎನ್ನುವಷ್ಟು ಪ್ರಸಿದ್ಧ ಈ ಸ್ಟಾರಬಕ್ಸ್. ಬರೀ ಕಾಫಿಗಳಲ್ಲದೇ ಕೋಲ್ಡ್ ಕಾಫೀ, ಭಿನ್ನ ಹೆಸರುಗಳನ್ನಿಟ್ಟು ಕೂಗುವ ತರಾವರಿ ಜ್ಯೂಸ್‌ಗಳು ಸಹ ಇಲ್ಲಿ ಜನಜನಿತ.
ಮನುಷ್ಯರಿಗಷ್ಟೇ ಅಲ್ಲದೇ ನಾಯಿಗಳಿಗೆ ಪಪ್ಪುಚಿನೋ ಎಂಬ ಹೆಸರಿನಲ್ಲಿ ಕಪ್ಪಿನಲ್ಲಿ ಬಿಳಿಯ ಕ್ರೀಂ ಹಾಕಿ ಉಚಿತವಾಗಿ ಕೊಡುತ್ತಾರೆ. ಹಾಗಾಗಿ ಈ ಅಂಗಡಿ ನಾಯಿಗಳಿಗೂ ಬಲುಪ್ರೀತಿ. ಕಾಫಿಯನ್ನು ಅಂಗಡಿಯವರು ತಮ್ಮ ಕೈಯ್ನಾರೆ ಸಿದ್ಧಪಡಿಸಿ ಆ ಕಪ್ಪಿನ ಮೇಲೆ ಆಡರ್ ಮಾಡಿದವರ ಹೆಸರನ್ನು ಬರೆದು ಕೂಗಿ ಕರೆಯುತ್ತಾರೆ. ಎಷ್ಟೇ ಸರಿಯಾಗಿ ಹೆಸರು ಬರೆಸಿದರೂ ಕೊನೆಗೆ ಏನೋ ಒಂದು ಬರೆದು ಹೆಸರನ್ನು ಅಯೋಮಯವಾಗಿ ಮಾಡಿ ಈ ಅಂಗಡಿ ಆಗಾಗ ಟ್ರೋಲ್‌ಗೆ ಒಳಗಾಗುತ್ತಿರುತ್ತದೆ. ನಮ್ಮ ಭಾರತೀಯರ ಹೆಸರುಗಳಂತೂ ಅತೀ ಕಷ್ಟವೇ.. ಹಾಗಾಗಿ ನಮ್ಮ ಜನ ಸ್ಟಾರಬಕ್ಸ್‌ಗೆ ಅಂತಲೇ ಚಿಕ್ಕದಾಗಿಸಿಕೊಂಡ ಹೆಸರನ್ನು ಬಳಸುತ್ತಾರೆ. ಒಂದು ಕಾಫಿ ಹೇಳಿ ಸಂಜೆಯವರೆಗೂ ಈ ಅಂಗಡಿಯಲ್ಲಿ ಕೂತು ಉಚಿತವಾಗಿ ಸಿಗುವ ವೈ-ಫೈ ಅನ್ನು ಬಳಸಿಕೊಂಡು ಕೆಲಸ ಮಾಡುತ್ತ ಕೂರಲಿಕ್ಕೂ ಅವಕಾಶವಿದೆಯಾದ್ದರಿಂದ ಸ್ಟಾರಬಕ್ಸ್ ಎಲ್ಲ ವರ್ಗದ ಜನರಿಗೆ ಹ್ಯಾಂಗಿಂಗ್ ಸ್ಪಾಟ್.
ಹೀಗೆ ಅಮೆರಿಕದ ಗಲ್ಲಿಗೊಂದರಂತೆ ತಲೆಯೆತ್ತಿರುವ ಈ ಸ್ಟಾರಬಕ್ಸ್ ಅಂಗಡಿ ನಮಗೂ ನಿಧಾನವಾಗಿ ಆತ್ಮೀಯವಾಗತೊಡಗಿತ್ತು. ಶಿಕಾಗೋದಲ್ಲಿ ಅತೀ ದೊಡ್ಡ ಸ್ಟಾರಬಕ್ಸ್ ಅಂಗಡಿಯನ್ನು ಕಟ್ಟಿದ್ದಾರೆ ಮತ್ತು ಅದು ಜಗತ್ತಿನಲ್ಲಿಯೇ ಅತೀ ದೊಡ್ಡದಾದ ಸ್ಟಾರಬಕ್ಸ್ ಕಾಫಿಯ ಅಂಗಡಿ ಎಂದು ಗೊತ್ತಾದಾಗ ಅಂತಹದ್ದೇನಿರಬಹುದು ಎಂದು ಕುತೂಹಲವಾಗಿ ನೋಡಲಿಕ್ಕೆ ಹೋಗಿದ್ದೆವು.
ನಾವು ಎರಡು ಸಲ ಹೋದರೂ ಒಳಗೇ ಹೋಗಲಿಕ್ಕಾಗದೇ ಹಿಂತಿರುಗಬೇಕಾಯಿತು. ಯಾಕೆಂದರೆ ಅಂಗಡಿಯ ಮುಂದೆ ಉದ್ದನೆಯ ಸಾಲು! ಅದು ಕೋವಿಡ್ ಸಮಯವಾದ್ದರಿಂದ ಒಳಗೆ ಇಂತಿಷ್ಟೇ ಜನರು ಎಂದು ಲೆಕ್ಕ ಮಾಡಿ ಬಿಡುತ್ತಿದ್ದರಾದ್ದರಿಂದ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗಿತ್ತು. ಮೂರನೇಯ ಸಲವೂ ಅಷ್ಟೇ ಗದ್ದಲವಿದ್ದರೂ ನೋಡಿಯೇ ಬಿಡೋಣ ಎಂದು ಅರ್ಧ ತಾಸು ಕಾದು ಒಳ ಹೊಕ್ಕಿದ್ದೆವು. ಸಾಮಾನ್ಯವಾಗಿ ಸ್ಟಾರಬಕ್ಸ್ ಒಂದು ಪುಟ್ಟ ಅಂಗಡಿಯಲ್ಲಿ ಇರುತ್ತದೆ.
ಅಲ್ಲೇ ಕಾಫಿ ಮಷಿನ್‌ಗಳು, ಬಿಲ್ ಕೌಂಟರ್, ಕುಳಿತುಕೊಳ್ಳಲು ಜಾಗ ಎಲ್ಲವೂ ಇರುತ್ತದೆ. ಆದರೆ ಇದು ನಾಲ್ಕು ಮಜಲಿಯ (ನೆಲಹಂತವನ್ನು ಸೇರಿಸಿ), ಅತೀ ವಿಸ್ತಾರವಾದ, ಜಗಮಗಿಸುವ ಬೆಳಕನ್ನು ಹೊಂದಿದ ಕಟ್ಟಡ. ಇಡೀ ಕಟ್ಟಡವನ್ನು ಕಾಫಿಯ ತಯಾರಿಕೆಗೆ ಹೊಂದುವಂತಹ ವಿನ್ಯಾಸದಲ್ಲಿ ಕಲಾತ್ಮಕವಾಗಿ ಕಟ್ಟಿದ್ದಾರೆ. ನಾಲ್ಕು ಮಜಲಿಗೂ ಉದ್ದಕ್ಕೆ ಚಾಚಿರುವ ಬಂಗಾರ ಬಣ್ಣದ ಪೀಪಾಯಿ. ಸೂರಿಗೆ ಜೋಡಿಸಿರುವ ದೊಡ್ಡ ದೊಡ್ಡ ಪೈಪುಗಳಲ್ಲಿ ಕಾಫಿ ಬೀಜಗಳು ಓಡುತ್ತಿರುವ ಸದ್ದು ಕೇಳಿಸುತ್ತಿರುತ್ತದೆ. ಕಾಫಿ ಬೀಜದಿಂದ ಕಾಫಿ ಪುಡಿಯನ್ನು ಹೇಗೆ ತಯಾರಿಸಲಾಗುತ್ತದೆ ಎಂದು ತೋರಿಸಲಿಕ್ಕೆ ಪುಡಿ ಮಾಡುವ ಯಂತ್ರ, ಶುದ್ಧೀಕರಿಸುವ ಯಂತ್ರ ಇತ್ಯಾದಿಗಳ ಡೆಮೋ ಇದೆ.
ಮೊದಲನೇ ಮಜಲಿಯಲ್ಲಿ ದೊಡ್ಡದಾದ ಕಾಫಿ ಬಾರ್, ರೋಸ್ಟರಿರ್, ಕಲಾತ್ಮಕ ವಿನ್ಯಾಸಗಳು, ಎರಡನೇ ಮಜಲಿಯಲ್ಲಿ ಬೇಕರಿ, ಮೂರನೇಯ ಮಜಲಿಯಲ್ಲಿ ಇನ್ನೂ ದೊಡ್ಡದಾದ ಕಾಫಿ ಬಾರ್, ತಿನ್ನಲಿಕ್ಕೆ, ಕೂತು ಕುಡಿಯಲಿಕ್ಕೆ ಚೆಂದನೆಯ ಜಾಗ, ನಾಲ್ಕನೆಯ ಮಜಲಿಯಲ್ಲಿ ಕಾಕಟೇಲ್ ಬಾರ್‌ಗಳಿವೆ. ಕೊನೆಗೆ ಟೇರೆಸಿಗೆ ಹೋದರೆ ಶಿಕಾಗೋ ಡೌನ್‌ಟೌನಿನ ಗಗನಚುಂಬಿ ಕಟ್ಟಡಗಳು ಸುತ್ತುವರೆದಿದ್ದು, ಇಲ್ಲಿ ಕೂತು ಕಾಫಿ ಕುಡಿಯಲಿಕ್ಕೂ ಸಹ ಅವಕಾಶವಿರುವುದರಿಂದ ಸಂಜೆಗಳು ಇಲ್ಲಿ ತೀರಾ ಅಪ್ಯಾಯಮಾನವೆನ್ನಿಸುತ್ತವೆ. ಇಡೀ ಕಟ್ಟಡದ ತುಂಬ ಕಾಫಿಯ ಬೆಚ್ಚನೆಯ ಸುವಾಸನೆ ಆವರಿಸಿರುತ್ತದೆ. ಇಲ್ಲಿ ತರಾವರಿ ಕಾಫಿ ಬೀಜಗಳ ಸಂಗ್ರಹವೇ ಇದ್ದು, ನಾವು ಆಯ್ದುಕೊಂಡಂತಹ ಬೀಜವನ್ನು ನಮ್ಮ ಮುಂದೆಯೇ ಪುಡಿ ಮಾಡಿ ನೊರೆಯುಕ್ಕುವಂತಹ ಹಬೆಯಾಡುವ ಕಾಫಿಯನ್ನು ತಯಾರಿಸಿ ಕೊಡುತ್ತಾರೆ.
ಅಲ್ಲಿ ಇಲ್ಲಿ ಓಡಾಡುತ್ತ, ಕಾಫಿಯನ್ನು ಸವಿಯುತ್ತ ಅರ್ಧ ದಿನವನ್ನು ಹಾಯಾಗಿ ಇಲ್ಲಿ ಕಳೆಯಬಹುದು. ಕಾಫೀ ಎಂಬ ವಿಸ್ಮಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತ ಎಲ್ಲರನ್ನೂ ಮೋಡಿ ಮಾಡುವ ಈ ಬೆಚ್ಚನೆಯ ಪೇಯದ ಬಗ್ಗೆ ಇನ್ನಷ್ಟು ವಿಸ್ಮಯ ಪಡುತ್ತ, ಅದರ ಪರಿಮಳವನ್ನು ಕಣ್ಣು ಮೂಗು ಬಾಯಿಗಳಲ್ಲಿ ತುಂಬಿಸಿಕೊಂಡು ಹೊರ ಬಂದಾಗ ಅದೆಂತಹದೋ ಸಂತೃಪ್ತಿ.
-ಸಂಜೋತಾ ಪುರೋಹಿತ್,
ಸ್ಯಾನ್ ಫ್ರಾನ್ಸಿಸ್ಕೋ