Advertisement

ಸ್ಟಾರ್‌ ಕನ್ಸರ್ನ್: ಒಂದೇ ಕಥೆ, ಮೂರು ಚಿತ್ರಗಳು!

11:41 AM May 20, 2017 | Team Udayavani |

ನಾಯಕ ವಿದೇಶದಲ್ಲೋ ಅಥವಾ ಪರವೂರಿನಲ್ಲೋ ಇರುತ್ತಾನೆ. ಸಡನ್ನಾಗಿ ಅವನ ಜೀವನದಲ್ಲಿ ಒಂದು ಬದಲಾವಣೆಯಾಗುತ್ತದೆ. ಆಗ ಅವನಿಗೊಂದು ವಿಷಯ ಜ್ಞಾನೋದಯವಾಗುತ್ತದೆ. ಹಾಗಾಗುತ್ತಿದ್ದಂತೆ ಆತ ಇರುವುದೆಲ್ಲವನ್ನು ಬಿಟ್ಟು ಇನ್ನೆಲ್ಲಾ ಹೋಗುತ್ತಾನೆ. ಜನರ ಕಷ್ಟಗಳಿಗೆ ಸ್ಪಂದಿಸುವುದರ ಜೊತೆಗೆ ಅವರ ಪರವಾಗಿ ದೊಡ್ಡ ಹೋರಾಟವನ್ನೇ ಮಾಡುತ್ತಾನೆ ಮತ್ತು ಆ ಮೂಲಕ ಒಂದು ಕ್ರಾಂತಿಯನ್ನೇ ಮಾಡುತ್ತಾನೆ …

Advertisement

ಈ ಕಥೆ ಎಲ್ಲೋ ಕೇಳಿದ ಹಾಗಿದೆಯಲ್ಲಾ ಎಂದನಿಸಬಹುದು. ಕೇಳಿರುವುದಷ್ಟೇ ಅಲ್ಲ, ನೋಡಿರಲೂಬಹುದು. ಇತ್ತೀಚೆಗೆ ಬಂದ ಸುದೀಪ್‌ ಅಭಿನಯದ “ಹೆಬ್ಬುಲಿ’ ಮತ್ತು ಪುನೀತ್‌ ರಾಜಕುಮಾರ್‌ ಅಭಿನಯದ “ರಾಜಕುಮಾರ’ ಚಿತ್ರಗಳ ಕಥೆ ಇದೇ. ಅಷ್ಟೇ ಅಲ್ಲ, ನಿನ್ನೆ ಬಿಡುಗಡೆಯಾದ ಶಿವರಾಜಕುಮಾರ್‌ ಅಭಿನಯದ “ಬಂಗಾರ – ಸನ್‌ ಆಫ್ ಬಂಗಾರದ ಮನುಷ್ಯ’ ಚಿತ್ರದ ಕಥೆಯೂ ಹೀಗೆ ಸಾಗುತ್ತದೆ. ಕಥೆಗಳೇನೋ ಒಂದೇ ರೀತಿ ಕೇಳಿಸಬಹುದು. ಆದರೆ, ಮೂರು ಚಿತ್ರಗಳ ಆಶಯ, ಉದ್ದೇಶ, ಕಾಳಜಿ ಎಲ್ಲವೂ ಬೇರೆಬೇರೆ. 

ಒಂದರಲ್ಲಿ ನಾಯಕ, ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ಸಿಗಬೇಕು ಎಂದು ಜನರಿಕ್‌ ಮೆಡಿಸನ್‌ಗಾಗಿ ಹೋರಾಟ ಮಾಡುತ್ತಾನೆ. ಇನ್ನೊಂದರಲ್ಲಿ ನಾಯಕ ವೃದ್ಧರಿಗೆ ನೆಮ್ಮದಿಯ ಜೀವನ ಕಲ್ಪಿಸಿಕೊಡುವುದರ ಜೊತೆಗೆ, ಅವರ ಕೊನೆಯ ದಿನಗಳ ಉಜ್ವಲವಾಗಿರಬೇಕೆಂದು ಹೋರಾಡುತ್ತಾನೆ. ಇನ್ನು “ಬಂಗಾರ – ಸನ್‌ ಆಫ್ ಬಂಗಾರದ ಮನುಷ್ಯ’ದಲ್ಲಿ ನಾಯಕ ರೈತರ ಪರವಾಗಿ ನಿಂತು, ಅವರ ಹೋರಾಟಗಳಲ್ಲಿ ಭಾಗಿಯಾಗುವುದರ ಜೊತೆಗೆ ಆ ಹೋರಾಟದಲ್ಲೂ ಗೆದ್ದು,

-ರೈತರಿಗೆ ನ್ಯಾಯ ಕೊಡಿಸುತ್ತಾನೆ. ಮೂರೂ ಚಿತ್ರಗಳು ಬೇರೆ ದೇಶಗಳಲ್ಲಿ ಶುರುವಾಗಿ ಇಲ್ಲಿ ಮುಗಿಯುವುದಷ್ಟೇ ಅಲ್ಲ, ಒಂದು ಸಾಮಾಜಿಕ ಕ್ರಾಂತಿಯಾಗಿ, ಜನರೆಲ್ಲಾ ಪರಿವರ್ತನೆಯಾಗುವುದರ ಮೂಲಕ ಮುಗಿಯುತ್ತದೆ. ಹೀಗೂ ಆಗುವುದಕ್ಕೆ ಸಾಧ್ಯವಾ ಎಂಬ ಲಾಜಿಕಲ್‌ ಪ್ರಶ್ನೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ, ಆಗ ಕನ್ನಡದಲ್ಲೊಂದು ಹೊಸ ತರಹದ ಪ್ರಯತ್ನ ಆಗುತ್ತಿರುವುದು ಗೊತ್ತಾಗುತ್ತದೆ. ಇದು ಹಿಂದೆ ಆಗಿಲ್ಲ ಅಂದೇನಲ್ಲ.

ಹಿಂದೆ ಸಹ ಎಲ್ಲಾ ಹೀರೋಗಳು ರಾಜಕೀಯ ಹಿನ್ನೆಲೆಯ, ಸಾಮಾಜಿಕ ಕಳಕಳಿಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಕ್ರಾಂತಿ ಮಾಡುವ ಚಿತ್ರಗಳಲ್ಲಿ ಅಭಿನಯಿಸಿದ ಸಾಕಷ್ಟು ಉದಾಹರಣೆಗಳಿವೆ. ಆದರೆ, ಇತ್ತೀಚೆಗೆ ಅಂತಹ ಚಿತ್ರಗಳು ಕಡಿಮೆಯೆಂದೇ ಹೇಳಬಹುದು. ಒಂದು ಸಾಮಾಜಿಕ ಕ್ರಾಂತಿಗಿಂತ ವೈಯಕ್ತಿಕ ದ್ವೇಷ-ಕಲಹದ ಚಿತ್ರಗಳೇ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಶಿವರಾಜಕುಮಾರ್‌, ಸುದೀಪ್‌ ಮತ್ತು ಪುನೀತ್‌ ಬೇರೆ ತರಹದ ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿ ಮಾದರಿಯಾಗಿದ್ದಾರೆ.

Advertisement

ಬೇರೆಯವರು ಮಾಡುವುದಕ್ಕಿಂತ ದೊಡ್ಡ ಸ್ಟಾರ್‌ಗಳು ಇಂಥದ್ದೊಂದು ಪ್ರಯತ್ನ ಮಾಡಿದರೆ, ಆಗ ಚಿತ್ರಗಳ ರೀಚ್‌ ಚೆನ್ನಾಗಿರುವುದರ ಜೊತೆಗೆ ಜನರಲ್ಲಿ ಜಾಗೃತಿ ಸಹ ಮೂಡುತ್ತದೆ. ಇನ್ನು ಇಂಥದ್ದೊಂದು ವಿಷಯವನ್ನು ಕಮರ್ಷಿಯಲ್‌ ಚೌಕಟ್ಟಿನಲ್ಲಿ ಹೇಳುವುದು ಅಷ್ಟು ಸುಲಭದ ವಿಷಯವಲ್ಲ. ಆ ಪ್ರಯತ್ನವನ್ನು ಕೃಷ್ಣ, ಸಂತೋಷ್‌ ಆನಂದ್‌ರಾಮ್‌ ಮತ್ತು ಯೋಗಿ ಮಾಡಿದ್ದಾರೆ. ಹಾಗೆ ನೋಡಿದರೆ, ಈ ಮೂರೂ ಚಿತ್ರಗಳು ಅವರು ನಿರ್ದೇಶನ ಮಾಡಿದ ಎರಡನೆಯ ಚಿತ್ರಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸ್ವಮೇಕ್‌ ಚಿತ್ರಗಳು ಎಂಬುದು ಗಮನಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next