Advertisement

ಮರೆಯಾಯ್ತು ಸ್ಟಾನ್ಸ್‌ ಡೋನಟ್‌ ಸವಿ

05:00 PM May 26, 2020 | sudhir |

ಲಾಸ್‌ ಏಂಜಲಿಸ್‌: ಉದ್ಯಮಗಳ ಮೇಲೆ ಕೋವಿಡ್‌ ಪ್ರಹಾರ ಭಾರೀ ಎನಿಸಿದೆ. ಹಲವು ವ್ಯವಹಾರಗಳು ಮತ್ತೆ ತೆರೆದುಕೊಳ್ಳುವ ಸಾಧ್ಯತೆ ಇಲ್ಲದಂತೆ ಶಾಶ್ವತವಾಗಿ ಬಾಗಿಲು ಹಾಕಿವೆ. ಅಮೆರಿಕವೊಂದರಲ್ಲೇ ಒಂದು ಲಕ್ಷ ಸಣ್ಣ ಉದ್ದಿಮೆಗಳು ನೆಲಕಚ್ಚಿವೆ ಎಂದು ಅಂದಾಜಿಸಲಾಗಿದೆ. ಲಾಸ್‌ ಏಂಜಲಿಸ್‌ನಲ್ಲಿರುವ ಸ್ಟಾನ್ಸ್‌ ಡೋನಟ್ಸ್‌ ಎಂಬ ಖಾದ್ಯ ತಯಾರಕ ಸಂಸ್ಥೆ ಈ ಪೈಕಿ ಒಂದು.

Advertisement

ಸ್ಟಾನ್ಸ್‌ ಬರ್ಮನ್‌ ಪ್ರಕಾರ, ಅವರ ಡೋನಟ್‌ಗಳು ಸ್ವಾದಿಷ್ಟವಾಗಿರಲು ಮೂರು ಕಾರಣಗಳಿದ್ದವು. ಪೆಸಿಫಿಕ್‌ ಮಹಾಸಾಗರದಿಂದ ಬೀಸುತ್ತಿದ್ದ ತಂಗಾಳಿಯ ಕಾರಣಕ್ಕಾಗಿ ಅವರೆಂದೂ ಏರ್‌ ಕಂಡೀಷನರ್‌ ಬಳಸುವ ಅಗತ್ಯ ಬರಲಿಲ್ಲ. ಬೇಸಗೆಯಲ್ಲೂ ಅವರ ಮಳಿಗೆಯ ವಾತಾವರಣ ಹಿತಕರವಾಗಿರುತ್ತಿತ್ತು. ಎರಡನೆಯದಾಗಿ, ಡೋನಟ್‌ಗಳನ್ನು ಮಾಡುವುದರಲ್ಲಿ ಅವರು ಸಿದ್ಧಹಸ್ತರಾಗಿದ್ದರು. ಅವುಗಳನ್ನು ಅವರು ಪ್ರೀತಿಯಿಂದ ತಯಾರಿಸುತ್ತಿದ್ದರು ಎನ್ನುವುದು ಮೂರನೇ ಕಾರಣ. ಐವತ್ತೈದು ವರ್ಷಗಳಿಂದ ಈ ಖಾದ್ಯಗಳು ಜನಪ್ರಿಯವಾಗಿದ್ದವು. ಎರಡು ಜನನಿಬಿಡ ಬೀದಿಗಳ ನಡುವಿನ ಈ ಚಿಕ್ಕ ಅಂಗಡಿ ಸದಾ ಗಿಜಿಗುಡುತ್ತಿತ್ತು.

1963-64ರಲ್ಲಿ ಆರಂಭವಾದ ಸ್ಟಾನ್‌ ಅವರ ಮಳಿಗೆ ಬಹುಬೇಗನೆ ತನ್ನ ಛಾಪು ಮೂಡಿಸಿತು. ಡೋನಟ್‌ಗಳಲ್ಲದೆ ಪೇಸ್ಟ್ರೀ, ಪೈ, ಕುಕೀಸ್‌ ಇತ್ಯಾದಿಗಳನ್ನೂ ತಯಾರಿಸಿ ಮಾರುತ್ತಿದ್ದರು. ಅಪ್ಪನ ಬೇಕರಿಯಲ್ಲಿ ಸೂರ್ಯೋದಯಕ್ಕೂ ಪೂರ್ವದಲ್ಲಿ ಈ ಖಾದ್ಯಗಳನ್ನು ತಯಾರಿಸಿ, ಬಣ್ಣದ ಸಕ್ಕರೆಯ ಲೇಪ ಹಚ್ಚುತ್ತಿದ್ದರು. ಮುಂಜಾನೆ ಬ್ರೆಡ್‌ ಖರೀದಿಸಲು ಬರುತ್ತಿದ್ದ ಜನರು ಡೋನಟ್‌ಗಳನ್ನೂ ಒಯ್ಯುತ್ತಿದ್ದರು. ಮುಂದೆ ಯುರೋಪಿಯನ್‌ ಶೈಲಿಯ ಪೇಸ್ಟ್ರಿ ಮಾಡುವುದನ್ನೂ ಕಲಿತರು.

ವಾಸ್ತವವಾಗಿ ಬೇಕರಿ ಉತ್ಪನ್ನಗಳಲ್ಲಿ ಡೋನಟ್‌ಗಳು ಕಡಿಮೆ ದರ್ಜೆಯವು. ಆದರೆ, ಸ್ಟಾನ್‌ ಅವರ ಕೌಶಲದಿಂದಾಗಿ ಅವು ಜನಪ್ರಿಯವಾದವು. ಚೆರ್ರಿ, ಚಾಕ್ಲೆಟ್‌, ಸಿನಾಮನ್‌, ಪೀನಟ್‌ ಬಟರ್‌ ಮುಂತಾದ ವೈವಿಧ್ಯಗಳು ಮನೆಮಾತಾದವು. ಎಲಿಜಬೆತ್‌ ಟೇಲರ್‌, ಅಲಿ ಮೆಕ್‌ಗ್ರಾ, ಸ್ಟಿವ್‌ ಮೆಕ್‌ಕ್ವೀನ್‌, ಗೆನಾ ವೈಲ್ಡರ್‌, ಮೆಲ್‌ ಬ್ರೂಕ್ಸ್‌ ಸಹಿತ ಹಾಲಿವುಡ್‌ನ‌ ಜನಪ್ರಿಯ ತಾರೆಯರೂ ಇವರ ಗ್ರಾಹಕರಾಗಿದ್ದರು ಎನ್ನುವುದು ವಿಶೇಷ. “ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಹಾಲಿವುಡ್‌’ನಲ್ಲಿ ಸ್ಟಾನ್‌ ಅವರ ಅಂಗಡಿಯನ್ನು ಚಿತ್ರೀಕರಿಸಲಾಗಿದೆ. ಲಾಸ್‌ ಏಂಜಲಿಸ್‌ ನಗರವು ಮೇ 3, 2014ನ್ನು ಸ್ಟಾನ್ಸ್‌ ಡೋನಟ್‌ ದಿನವಾಗಿ ಘೋಷಿಸಿತು. ಹಾಗೂ ಅವರ ಮಳಿಗೆಯನ್ನು ಪಾರಂಪರಿಕ ಉದ್ಯಮವಾಗಿ ಗೌರವಿಸಿತು.

ಮೂರು ವರ್ಷಗಳ ಹಿಂದೆ ಸ್ಟಾನ್‌ ಅವರಿಗೆ ಹೃದಯಾಘಾತವಾಯಿತು. ಸದ್ಯ ವಾರಕ್ಕೊಮ್ಮೆ ಮಗನೊಂದಿಗೆ ಮಳಿಗೆಗೆ ಹೋಗುತ್ತಿದ್ದರು. ಈಗ ಶೇ. 40ರಷ್ಟು ಮಾತ್ರ ವ್ಯಾಪಾರವಾಗುತ್ತದೆ. ಅದು ಕೆಲಸದವರ ಸಂಬಳಕ್ಕೂ ಸಾಲದು. ಮಹಾಮಾರಿ ಕೋವಿಡ್‌ ತಮ್ಮ ವ್ಯವಹಾರವನ್ನು ಕೊಂದು ಹಾಕಿತೆಂದು ಪುತ್ರಿ ನೋವಿನಿಂದಲೇ ನುಡಿಯುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next