ಹನುಮಸಾಗರ: ಇಂದು ವಿಶ್ವ ರಂಗಭೂಮಿ ದಿನ. ರಂಗಭೂಮಿಯಲ್ಲಿ ಪ್ರಯೋಗಗಳಿಗೆ ಕೊರತೆ ಇಲ್ಲ. ಅದರಲ್ಲೂ ಹೊಸ ಪ್ರಯೋಗಗಳಂತೂ ನಡೆಯುತ್ತಲೇ ಇರುತ್ತವೆ. ನೂತನ ಪ್ರಯೋಗದ ಹೆಸರಿನಲ್ಲಿ 2012ರಲ್ಲಿ ರೂಪುಗೊಂಡ ತಿರುಗುವ ರಂಗಮಂದಿರ ಇಂದು ನಿಂತಿದೆ.
ವೃತ್ತಿ ರಂಗಭೂಮಿ ಉಳಿಸಿಕೊಳ್ಳಲು ಬೇರೆ ಏನೇನೊ ಪ್ರಯತ್ನಗಳು ಆಗುತ್ತಲೇ ಇರುತ್ತವೆ. ರಂಗಕರ್ಮಿಗಳು ಸುಮ್ಮನೆ ಕೂರುವವರಲ್ಲ ತಿರುಗಾಡುತ್ತಾರೆ, ಪ್ರಯೋಗ ಮಾಡುತ್ತಾರೆ, ಜೀವನವೆಂಬ ನಾಟಕ ರಂಗದಲ್ಲಿ ಪ್ರಯೋಗ ಮಾಡಿದರೆ ಮಾತ್ರ ಉಳಿಯಬಹುದು ಎಂಬುದನ್ನು ನಂಬಿ ಬದುಕುತ್ತಾರೆ.
ಅಲೆಯುವುದರಿಂದ ಉಳಿಯಬಹುದು ಎಂಬ ಸೂತ್ರ ಎಲ್ಲ ರಂಗಗಳಲ್ಲೂ ಬಳಕೆಗೆ ಬರುವುದುಂಟು. ನಾಟಕ ರಂಗದಲ್ಲಿ ತಿರುಗಾಟ ಬಹಳ ಮುಖ್ಯ ಕಾಯಕ. ಈ ರಂಗದಲ್ಲಿ ಓಡಿದಷ್ಟು ಉಸಿರಾಟ! ಓದಿದಷ್ಟು ಆಟ! ಸಿನಿಮಾಗಳು ಬಂದು ನಾಟಕ ನೋಡೋರಿಲ್ಲವೆಂದು ದೂರಿದರೆ ಅದು ಕ್ಲಿಷೆಯೇ ಸರಿ. ಈಗ ವೃತ್ತಿ ರಂಗಭೂಮಿ ಹೆಸರಿಗೆ ಮಾತ್ರ ಉಳಿದಿದೆ. ಅದನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಕೈ ಹಾಕುವುದರ ಜತೆಗೆ ಗ್ರಾಮೀಣ ಪ್ರದೇಶದ ನವನಟರಿಗೆ ಅವಕಾಶ ಕಲ್ಪಿಸುವುದು ಈ ವೃತ್ತಿ ರಂಗಭೂಮಿ. ಹಲವು ಕಲೆಗಳ ಮೂಲ ನಾಟಕರಂಗ.
ಎಕ್ಸೆಲ್ ಮೇಲೆ ರಂಗಮಂದಿರ: ರಂಗಮಂದಿರವೆಂದರೆ ಒಂದು ವೇದಿಕೆ, ಸ್ಟೇಜ್‌ನಲ್ಲಿ ನಾಟಕ ಪ್ರದರ್ಶನವಾಗುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಆದರೆ ತಿರುಗುವ ರಂಗಮಂದಿರ! ಎಂದರೆ ಅದು ಹೇಗೆ ಎಂಬ ಪ್ರಶ್ನೆ ಕಾಡುವುದು.
ಅಂತಹ ವಿಶೇಷ ಸಾಧನೆಯನ್ನು 2012 ರಲ್ಲಿ ಸಮೀಪದ ಹನುಮನಾಳ ಗ್ರಾಮದ ಕಲಾವಿದ ಗುರುನಾಥ ಪತ್ತಾರ ಮಾಡಿ ತೋರಿಸಿದರು. ದೇಶದಲ್ಲಿ ಪ್ರಥಮ ಮತ್ತು ವೃತ್ತಿ ರಂಗಭೂಮಿಯ ಇತಿಹಾದಲ್ಲಿಯೆ ಪ್ರಥಮವಾಗಿ ತಿರುಗುವ ರಂಗಮಂದಿರ ನಿರ್ಮಿಸಿ ನಾಟಕವಾಡಿದ್ದು ಅದ್ಬುತ ಸಾಧನೆ. ಈ ತಿರುಗುವ ರಂಗಮಂದಿರದಲ್ಲಿ ನಡೆಯುವ ನಾಟಕ ನೋಡಲು ಸಾವಿರಾರು ಪ್ರೇಕ್ಷಕರು ತಂಡೋಪತಂಡವಾಗಿ ಬಂದು ವೀಕ್ಷಿಸಿದ್ದು ಇದಕ್ಕೆ ಸಾಕ್ಷಿ. ಆಳವಾದ ಹೊಂಡದಲ್ಲಿ ಹುಗಿದ ಕಬ್ಬಿಣದ ಎಕ್ಸೆಲ್. ಮೇಲೆ ಈ ಎಲ್ಲ ಸೆಟ್‌ಗಳನ್ನು ನಿಲ್ಲಿಸಲಾಗಿರುವುದು. ಎಕ್ಸೆಲ್‌ಗೆ ಹೊಂದಿಸಿ ಬಿಗಿದ ಚಕ್ಕಡಿ ಗಾಲಿ, ಗಾಲಿಯ ಮೇಲೆ ರಂಗಕ್ಕೆ ಅವಶ್ಯವಿರುವಷ್ಟು ವೇದಿಕೆ. ನಿರ್ಮಿಸಿಕೊಳ್ಳಲು ಹಲಗೆ, ಹಲಗೆಯ ಮೇಲೆ ಎಲ್ಲ ಸನ್ನಿವೇಶಗಳು ಹೊಂದಿಸಲಾಗಿರುತ್ತದೆ. ಹೀಗೆ ಒಂದೊಂದು ಸನ್ನಿವೇಶವು ತಿರುಗುತ್ತಾ ಬರುವಾಗ ಪ್ರೇಕ್ಷಕರಿಗೆ ಮಾಂಚನವಾಗಿರುತ್ತಿತ್ತು. ಚಪ್ಪಾಳೆ ಸಿಳ್ಳೆ ಹೀಗೆ ಸಾಕಷ್ಟು ಸಂಭ್ರಮಿಸುತ್ತಿದ್ದರು.
ಈ ತಿರುಗುವ ರಂಗಮಂದಿರ ನಿರ್ಮಾಣಕ್ಕೆ ಸುಮಾರು 3 ಲಕ್ಷ ರೂ. ವೆಚ್ಚವಾಗಿತ್ತು. ಇಲ್ಲಿ ಅಂತಾರಾಷ್ಟ್ರೀಯ ತಾಂತ್ರಿಕ ನಿಪುಣರಿಲ್ಲ. ಖ್ಯಾತ ನಿರ್ದೇಶಕರೂ ಇಲ್ಲ. ಇಲ್ಲಿರುವುದು ಸ್ಥಳೀಯ ಕಲಾವಿದರೂ, ಮತ್ತು ಬಡಿಗ, ಕಮ್ಮಾರರು. ಈ ಗ್ರಾಮೀಣ ಪ್ರತಿಭೆಗಳು ಸೇರಿ ಮಾಡಿದ ತಿರುಗುವ ರಂಗಮಂದಿರ ಯಶಸ್ವಿ ಪ್ರಯೋಗವಾಗಿ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು. ವೃತ್ತಿ ರಂಗಭೂಮಿಯ ಇತಿಹಾದಲ್ಲಿಯೆ ಸದ್ದಿಲ್ಲದೆ ದಾಖಲೆಯೊಂದನ್ನು ರೂಪಿಸಿ ಮಾಯವಾಗಿ ಈಗ ನೆನಪು ಮಾತ್ರ ಎಂಬಂತಾಗಿದೆ. ಭೂಮಿ ತಿರುಗುತ್ತದೆ. ರಂಗವೂ ಚಲಿಸುತ್ತದೆ. ರಂಗಭೂಮಿ ನಿಂತ ನೀರಾಗಬಾರದು, ಹರಿಯುವ ನದಿಯಾಗಬೇಕು ಎನ್ನುವುದು ಕಲಾಪ್ರೇಮಿಗಳ ಒತ್ತಾಸೆ.
ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ನಾಟಕಗಳು, ರಂಗಮಂದಿರ ಎಂಬ ಕಲ್ಪನೆ ಮಾಯವಾಗುತ್ತಿವೆ. ವೃತ್ತಿ ರಂಗಭೂಮಿಗೆ ಚೈತನ್ಯ ನೀಡಲು ದೇಶದಲ್ಲಿ ಪ್ರಥಮವಾಗಿ ಹೊಸತನದ ತಿರುಗುವ ರಂಗಮಂದಿರ ನಿರ್ಮಿಸಲು ಮುಂದಾಗಿ ಯಶಸ್ವಿಯೂ ಆಗಿ ದಾಖಲೆ ನಿರ್ಮಿಸಿತು. ಆದರೆ ಪ್ರೋತ್ಸಾಹದ ಕೊರತೆಯಿಂದ ಹಿಂದೆ ಸರಿಯಬೇಕಾಯಿತು.
ಗುರುನಾಥ ಪತ್ತಾರ, ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗನಟ,ಹನುಮನಾಳ.
ವಿಶೇಷ ವರದಿ