ಅಫಜಲಪುರ: ಅಂತರ್ಜಲ ಮಟ್ಟ ಕುಸಿತದಿಂದಾಗಿ ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀರಿನ ಸಮಸ್ಯೆಯಾಗುವುದು ಸಹಜ. ಆದರೆ ಮಳೆಗಾಲದಲ್ಲೂ ನೀರಿನ ಸಮಸ್ಯೆಯಾಗುತ್ತಿದೆ ಎಂದರೆ ಜನರು ಎಲ್ಲಿಗೆ ಹೋಗಬೇಕು?
ತಾಲೂಕಿನ ಬಳೂರ್ಗಿ ಗ್ರಾಮದಲ್ಲಿಗ ಅಂತರ್ಜಲ ಪುನಶ್ಚೇತನವಾಗದೆ ನೀರಿನ ಸಮಸ್ಯೆಗೆ ಪರಿಹರವಿಲ್ಲವೇ ಎಂಬಂತಾಗಿದೆ. ಬಳೂರ್ಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಕೋಪಕ್ಕೆ ತಲುಪಿದೆ. ಗ್ರಾಮದಿಂದ ಒಂದು ಕಿಲೋ ಮೀಟರ್ ದೂರವಿರುವ ಫಲಾಲ್‌ಸಿಂಗ್ ತಾಂಡಾದ ನಿವಾಸಿಗಳು ನಿತ್ಯ ನೀರಿಗಾಗಿ ಊರಿಗೆ ಬರಬೇಕು. ಇಲ್ಲದಿದ್ದರೆ ನೀರು ಸಿಗುವುದಿಲ್ಲ. ನಿತ್ಯ ನೀರಿಗಾಗಿ ತಾಂಡಾ ಜನರು ಕೊಡ ಬಿಂದಿಗೆಗಳನ್ನು ಹಿಡಿದುಕೊಂಡು ಗ್ರಾಮದ ಮಸೀದಿ ಬಳಿ ಇರುವ ತೆರೆದ ಬಾವಿಗೆ ಬಂದು ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನೂ ತಾಂಡಾ ನಿವಾಸಿಗಳು ಗ್ರಾಮಕ್ಕೆ ನೀರಿಗಾಗಿ ಬರುವುದು ಮಾಮೂಲಿಯಾಗಿದೆ.
ಆದರೆ ಗ್ರಾಮಸ್ಥರು ಕೂಡ ಕುಡಿಯುವ ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ. ನೀರಿನ ಮೂಲಗಳೆಲ್ಲ ಖಾಲಿಯಾಗಿದ್ದರಿಂದ ತೆರೆದ ಬಾವಿ, ಕೊಳವೆ ಬಾವಿಗಳು ನಿಂತು ಹೋಗಿವೆ. ಹೀಗಾಗಿ ಸದ್ಯ ಕುಡಿಯುವ ನೀರಿಗಾಗಿ ಮಸೀದಿ ಬಳಿಯ ತೆರೆದ ಬಾವಿಯನ್ನೇ ಗ್ರಾಮಸ್ಥರು ಅವಲಂಬಿಸಿದ್ದಾರೆ. ಆದರೆ ಅಷ್ಟು ಜನರಿಗೆ ಇದೊಂದು ಬಾವಿ ನೀರು ಸಾಕಾಗುವುದಿಲ್ಲ. ತಾಂಡಾದಿಂದ ಊರಿಗೆ ಬಂದು ನೀರು ತೆಗೆದುಕೊಂಡು ಹೋಗಲು ಸಮಸ್ಯೆಯಾಗುತ್ತಿದೆ.
ಹೀಗಾಗಿ ಗ್ರಾಪ ಊರಿನಿಂದ ತಾಂಡಾದ ವರೆಗೆ ಪೈಪ್‌ಲೈನ್ ವ್ಯವಸ್ಥೆ ಮಾಡಿ ಕುಡಿಯುವ ನೀರು ಪೂರೈಕೆ ಮಾಡಿಸಬೆಕಾಗಿದೆ. ಗ್ರಾಮದ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕಾಗಿರುವ ಗ್ರಾಪಂ ಸಮಸ್ಯೆ ನಿವಾರಿಸುವಲ್ಲಿ ಎಡವಿದ್ದಾರೆ. ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಇದ್ದರೂ ಸರಿಯಾಗಿ ಸ್ಪಂದಿಸುವ ಕೆಲಸ ಮಾಡಿಲ್ಲ. ಸ್ಥಳೀಯವಾಗಿಯೇ ಗ್ರಾಪಂ ಕಚೇರಿ ಇದ್ದರೂ ಕೂಡ ನೀರಿನ ಸಮಸ್ಯೆಗೆ ಪರಿಹಾರ ನೀಡಲಾಗುತ್ತಿಲ್ಲ. ಹೀಗಾಗಿ ಸಮಸ್ಯೆ ಇನ್ನಷ್ಟು ಹೆಚ್ಚುವಂತಾಗಿದೆ.
ಬೇಸಿಗೆಯಲ್ಲಿ ಮಳೆ ಮತ್ತು ಅಂತರ್ಜಲ ಮಟ್ಟದ ಕೊರತೆಯಿಂದಾಗಿ ನೀರಿನ ಸಮಸ್ಯೆಯಾಗುವುದು ಮಾಮೂಲಿಯಾಗಿರುತ್ತದೆ. ಆದರೆ ಮಳೆಗಾಲದಲ್ಲೂ ನೀರಿನ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ ಎಂದರೆ ಎಂತಹ ಭೀಕರ ಬರ ಆವರಿಸಿದೆ ಎಂದು ಅಂದಾಜಿಸಬಹುದಾಗಿದೆ. ಬಳೂರ್ಗಿ ಗ್ರಾಮದಲ್ಲಿರುವ ಬಹುತೇಕ ಅಂತರ್ಜಲ ಮಟ್ಟ ಕುಸಿದಿದ್ದರಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಮುಂಗಾರು ಆರಂಭದ ಮಳೆಗಳು ಒಳ್ಳೆಯ ರೀತಿಯಲ್ಲಿ ಬಂದಿದ್ದರೆ ನೀರಿನ ಸಮಸ್ಯೆ ಆಗುತ್ತಿರಲಿಲ್ಲ. ಈಗ ಸ್ವಲ್ಪ ಮಳೆಯಾಗುತ್ತಿದೆ. ಇದರಿಂದ ಅಂತರ್ಜಲಮಟ್ಟ ವೃದ್ಧಿಯಾಗುವುದಿಲ್ಲ. ಇನ್ನೂ ಹೆಚ್ಚಿನ ಮಳೆ ಬಂದರೆ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.
-ಮಲ್ಲಿಕಾರ್ಜುನ ಹಿರೇಮಠ