Advertisement

ಬಿದಿರು ಕಂಬದಲ್ಲಿ ನಿಂತಿದೆ ಕಳಂಜ ಬಸ್‌ ನಿಲ್ದಾಣ

10:13 PM Oct 23, 2019 | Team Udayavani |

ಬೆಳ್ಳಾರೆ: ಕಳಂಜ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಕಳಂಜ ಮತ್ತು ಪಟ್ಟೆ ಪ್ರಯಾಣಿಕರ ಬಸ್‌ ತಂಗುದಾಣ ಬೀಳುವ ಸ್ಥಿತಿಯಲ್ಲಿದೆ. ಬಸ್‌ ನಿಲ್ದಾಣದ ಛಾವಣಿಯ ಮರದ ಪಕ್ಕಾಸು ಮುರಿದು ಹೋಗಿದೆ. ಛಾವಣಿಯ ಆಧಾರ ಕಂಬವೂ ಬೀಳುವ ಸ್ಥಿತಿಯಲ್ಲಿದೆ. ಬಿದಿರಿನ ಕಂಬವನ್ನು ಆಧಾರವಾಗಿ ನಿಲ್ಲಿಸಲಾಗಿದೆ. ಚೊಕ್ಕಾಡಿ, ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಹೋಗುವ ಪ್ರಯಾಣಿಕರು ಈ ತಂಗುದಾಣದಲ್ಲಿ ಬಸ್‌ ಹಾಗೂ ಇತರ ವಾಹನಗಳಲ್ಲಿ ತೆರಳಲು ವಿಶ್ರಾಂತಿ ಪಡೆಯುತ್ತಿದ್ದಾರೆ. ದುಸ್ಥಿತಿಯಿಂದಾಗಿ ರಸ್ತೆಯಲ್ಲೇ ಬಸ್‌ಗಳಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಂಜ ಗ್ರಾಮದ ಪಟ್ಟೆ ಬಸ್‌ ತಂಗುದಾಣವೂ ಬೀಳುವ ಸ್ಥಿತಿಯಲ್ಲಿದೆ.

Advertisement

ಶಾಲಾ – ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಳೆ, ಬಿಸಿಲಿಗೆ ಆಶ್ರಯಿಸುವ ತಂಗುದಾಣವಿದು. ಆದರೆ ಈಗ ತಂಗುದಾಣದೊಳಗೆ ಕುಳಿತು ತಲೆ ಎತ್ತಿ ನೋಡಿದರೆ ಬಿದಿರಿನ ಕಂಬ ಮಾತ್ರ ಇಡೀ ಬಸ್‌ ನಿಲ್ದಾಣಣವನ್ನು ಆಧರಿಸಿ ನಿಂತಿರುವುದು ಗೋಚರಿಸುತ್ತಿದೆ.

ಮರದ ಛಾವಣಿಯ ಪಕ್ಕಾಸು ಶಿಥಿಲಗೊಂಡು, ಛಾವಣಿ ಕುಸಿದು, ಕಂಬದ ಮೇಲೆ ನೀರು ಬಿದ್ದು, ಕಲ್ಲಿನಿಂದ ಕಟ್ಟಿದ ಕಂಬವೂ ಬೀಳುವಂತಿದೆ. ಸ್ಥಳೀಯರು ಛಾವಣಿಯ ಪಕ್ಕಾಸಿಗೆ ಆಧಾರವಾಗಿ ಬಿದಿರಿನ ಕಂಬವನ್ನು ಇಟ್ಟಿದ್ದಾರೆ.

ಮಳೆ-ಗಾಳಿಗೆ ಅಪಾಯ
ಗಾಳಿ-ಮಳೆಗೆ ಛಾವಣಿ ಪೂರ್ಣವಾಗಿ ಕುಸಿದು ಬೀಳುವ ಅಪಾಯದಲ್ಲಿದ್ದು, ಮುಖ್ಯ ರಸ್ತೆಯ ಬದಿಯಲ್ಲಿದ್ದರೂ ಹಲವು ವರ್ಷದಿಂದ ಇದೇ ರೀತಿ ಇದೆ. ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಬಿದಿರಿನ ಕಂಬ ಆಧರಿಸಿ ಇಟ್ಟಿರುವುದನ್ನು ನೋಡಿ ಬಸ್‌ ನಿಲ್ದಾಣದಲ್ಲಿ ಕುಳಿತುಕೊಳ್ಳದೆ ರಸ್ತೆ ಬದಿಯೇ ಬಸ್ಸುಗಳಿಗೆ ಕಾಯುತ್ತಿದ್ದಾರೆ. ಮಳೆಗಾಲ ಮುಗಿಯುತ್ತಿದ್ದು, ಇನ್ನಾದರೂ ಛಾವಣಿಗೆ ಸಿಮೆಂಟ್‌ ಶೀಟ್‌ ಹಾಕಿಯಾದರೂ ಸರಿಪಡಿಸಿ ಕೊಡಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಗ್ರಾಮಸಭೆಯಲ್ಲೂ ಪ್ರಸ್ತಾವ
ಬಸ್‌ ನಿಲ್ದಾಣದ ದುಸ್ಥಿತಿಯ ಬಗ್ಗೆ ಇಲ್ಲಿನ ಸ್ಥಳೀಯರು ಕಳೆದ ಗ್ರಾಮಸಭೆಯಲ್ಲಿ ಪ್ರಸ್ತಾವಿಸಿ ಸರಿಪಡಿಸಿಕೊಡುವಂತೆ ಒತ್ತಾಯಿಸಿದ್ದರು.

Advertisement

ಅದೇ ಸ್ಥಿತಿ
ಬಸ್‌ ನಿಲ್ದಾಣದಲ್ಲಿ ಅಂಗಡಿ ಕೋಣೆ ಸೇರಿದಂತೆ ಎರಡು ಕೋಣೆಗಳಿದ್ದು, ಬಸ್‌ ನಿಲ್ದಾಣವನ್ನು ವ್ಯವಸ್ಥಿತವಾಗಿ ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸ ಬೇಕೆಂದು ಆಗ್ರಹಿಸಿದ್ದರು. ಆದರೆ ಮಳೆಗಾಲ ಮುಗಿಯುತ್ತಿದ್ದರೂ ನಿಲ್ದಾಣ ಅದೇ ಸ್ಥಿತಿಯಲ್ಲಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಈ ಬೇಸಗೆಯಲ್ಲಾದರೂ ದುರಸ್ತಿಯಾಗಲಿ ಎಂದು ಆಶಿಸಿದ್ದಾರೆ.

ದುರಸ್ತಿಗೊಳಿಸಿ
ಹಲವು ವರ್ಷಗಳಿಂದ ಕಳಂಜ ಹಾಗೂ ಪಟ್ಟೆ ಸಾರ್ವಜನಿಕ ಬಸ್‌ ನಿಲ್ದಾಣ ರಿಪೇರಿಯಾಗದೆ ಬೀಳುವ ಸ್ಥಿತಿಯಲ್ಲಿದೆ. ಬಸ್‌ ನಿಲ್ದಾಣ ಕುಸಿದು ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟವರು ಸರಿಪಡಿಸಿ ಸಾರ್ವಜನಿಕ ಉಪಯೋಗಕ್ಕೆ ಸಿಗುವಂತೆ ಮಾಡಬೇಕಿದೆ.
– ಯು.ಕೆ. ಹನೀಫ್ ಕಳಂಜ, ಸ್ಥಳೀಯರು

 ಶೀಘ್ರ ದುರಸ್ತಿ
14ನೇ ಹಣಕಾಸು ಯೋಜನೆ ಅನುದಾನದಲ್ಲಿ ಕಳಂಜ ಹಾಗೂ ಪಟ್ಟೆ ಬಸ್‌ ನಿಲ್ದಾಣವನ್ನು ದುರಸ್ತಿಗೊಳಿಸಲು ಕ್ರಿಯಾ ಯೋಜನೆ ರೂಪಿಸಿದ್ದೇವೆ. ಅನುದಾನವನ್ನೂ ಬಸ್‌ ನಿಲ್ದಾಣದ ರಿಪೇರಿಗೆ ಮೀಸಲಿರಿಸಿದ್ದೇವೆ.
 - ಶ್ರೀಧರ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಳಂಜ

 ಉಮೇಶ್‌ ಮಣಿಕ್ಕಾರ

Advertisement

Udayavani is now on Telegram. Click here to join our channel and stay updated with the latest news.

Next