Advertisement
ಸೇತುಬಂಧವೆನ್ನುವುದು ರಾಮಾಯಣದ ಮಹತ್ತಮ ಸಂಭೂತಿ. ಅದು ಎರಡು ಭೂಖಂಡಗಳನ್ನು ಬೆಸೆದ ಭೌತಿಕ ಕಟ್ಟೋಣವಷ್ಟೇ ಅಲ್ಲ, ಕೆಡುಕನ್ನು ಕಟ್ಟಿಹಾಕುವ ಮಾನವ ಪ್ರಯತ್ನದ ಪ್ರತೀಕವದು ಮತ್ತು ಧ್ಯೇಯ ಸಾಧನೆಗಾಗಿ ಸಾಗರದಲ್ಲೂ ಸಾಗಬಲ್ಲ ಇಚ್ಛಾಶಕ್ತಿಯ ಗುರುತೂ ಹೌದು, ತಲೆಮಾರುಗಳು ನೆನಪಿಡಬಹುದಾದ ಸೇತುಬಂಧದ ಮಹಾಕಾರ್ಯ ಆರಂಭವಾದದ್ದು ರಾಮೇಶ್ವರಂ ನಗರದಿಂದ ಸುಮಾರು 25 ಕಿ.ಮೀ. ದೂರವಿರುವ ಧನುಷ್ಕೋಡಿಯಲ್ಲಿ.
Related Articles
Advertisement
ಆಗ ಇಂಡೋ- ಸಿಲೋನ್ ಸಂಪರ್ಕಕ್ಕೆ ಕೊಂಡಿಯಾಗಿ ನಿಂತಿದ್ದು ಮದ್ರಾಸಿನಿಂದ (ಚೆನ್ನೆ) ಕೊಲಂಬೋ ತನಕ ಹಬ್ಬಿಕೊಂಡ ಬೋಟ್ ಮೇಲ್ ಎಂಬ ಹೆಸರಿನ ರೇಲ್ವೆ ಫೆರಿ ವ್ಯವಸ್ಥೆ. ಮದ್ರಾಸಿನಿಂದ ಧನುಷ್ಕೋಡಿಯವರೆಗೆ ರೈಲ್ವೆಯಲ್ಲಿ ಸಂಚರಿಸಿ, ಅಲ್ಲಿಂದ ಶ್ರೀಲಂಕೆಯ ತಲೈಮನ್ನಾರ್ ತೀರದವರೆಗೆ ಬೋಟ್‌ನಲ್ಲಿ ಸಂಚರಿಸಿ ಅಲ್ಲಿಂದ ಮುಂದೆ ಕೊಲಂಬೋಗೆ ಮತ್ತೆ ರೇಲ್ವೆಯಲ್ಲಿ ಸಂಚರಿಸುವ ವಿಶಿಷ್ಟ ವಾದ ಸಾರಿಗೆ ವ್ಯವಸ್ಥೆ ಇದಾಗಿತ್ತು. ಪೂರ್ಣ ಪ್ರಯಾಣಕ್ಕೆ ಮದ್ರಾಸಿನಿಂದ ಕೊಲಂಬೋಗೆ ನೇರ ಟಿಕೆಟ್ ಕೊಡಲಾ ಗುತ್ತಿತ್ತು. ದುರದೃಷ್ಟವಶಾತ್, ಇದೆಲ್ಲವನ್ನೂ ಗತಕಾಲದ ನೆನಪಿನಂತೆ ಮಾತ್ರವೇ ಹೇಳುವ ಸ್ಥಿತಿ ಇವತ್ತಿನದು.
1964ರ ಡಿಸೆಂಬರ್ 3ನೇ ವಾರದವರೆಗೂ ಧನುಷ್ಕೋಡಿ ಈಗಿನಂತಿಲ್ಲದೇ ಒಂದು ಸಜೀವವಾದ ಪಟ್ಟಣವಾಗಿತ್ತು. ಅಲ್ಲಿ ರೇಲ್ವೆ ನಿಲ್ದಾಣವಿತ್ತು, ಅಂಚೆ ಕಛೇರಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳು ಮತ್ತು ರಸ್ತೆ ಸಂಪರ್ಕವಿದ್ದವು, ಎಲ್ಲಕ್ಕಿಂತ ಹೆಚ್ಚಾಗಿ ಸಹಜವಾದ ಮಾನವ ಆವಾಸ ಇತ್ತು. ಆದರೆ, 1964ರ ಡಿಸೆಂಬರ್ 22ರ ಅಪರಾತ್ರಿ ಯಲ್ಲಿ ಗಂಟೆಗೆ 280 ಕಿ.ಮೀ. ವೇಗದಲ್ಲಿ ಬಂದಪ್ಪಳಿಸಿದ ಚಂಡಮಾರುತವೊಂದು ಎಲ್ಲವನ್ನೂ ಬುಡಮೇಲುಗೊಳಿಸಿತು.
7 ಮೀ. ಎತ್ತರಕ್ಕೆದ್ದ ಅಲೆಗಳು ರೇಲ್ವೆ ಹಳಿಗಳನ್ನು, ನಿಲ್ದಾಣವನ್ನು, ಮನೆ ಮಠಗಳನ್ನು, ರಸ್ತೆಯನ್ನು ಮತ್ತು ಜನಜೀವನವನ್ನು ಎತ್ತಿ ಬದಿಗೆಸೆದವು. ಸರಕಾರಿ ಲೆಕ್ಕದಲ್ಲಿ 1800 ಜನ ಕೊನೆಯುಸಿರೆಳೆದರು. ಆ ರಾತ್ರಿ ಪಾಂಬನ್ ನಿಲ್ದಾಣದಿಂದ ಧನುಷ್ಕೋಡಿಗೆ ಹೊರಟಿದ್ದ ಪ್ಯಾಸೆಂಜರ್ ರೈಲಿಗೆ ರೈಲೇ ಚಂಡಮಾರುತಕ್ಕೆ ಬಲಿಯಾಗಿ ಅದರಲ್ಲಿದ್ದ 115 ಜನ ಮರಣಿಸಿದರು. ಸುತ್ತಲಿನ ಮೈಲುಗಟ್ಟಲೆ ಭೂಭಾಗ ಶಾಶ್ವತವಾಗಿ ನೀರಲ್ಲಿ ಮುಳುಗಿತು.
ಅಂದಿನಿಂದ ಧನುಷ್ಕೋಡಿಯೆಂಬುದು ಮಾನವ ಆವಾಸಕ್ಕೆ ಯೋಗ್ಯವಲ್ಲದ ಪ್ರೇತನಗರಿಯಾಗಿ ಬದಲಾಯ್ತು. 1964ರ ಬಳಿಕ 2015ರವರೆಗೂ ಅಲ್ಲಿ ಹೆಚ್ಚಾಗಿ ರಾಜ್ಯಭಾರ ಮಾಡಿದ್ದು ನಿರ್ಜನ ನಿಶ್ಶಬ್ದ ಮತ್ತು ಸಮುದ್ರದಲೆಗಳಷ್ಟೇ. ರಾಮಸೇತುವಿನ ಆರಂಭಭಾಗ ಎಂದೆಲ್ಲ ಗುರುತಿಸಬಹುದಾದ ಜಾಗವೇನೂ ಇವತ್ತಿಗೆ ಧನುಷ್ಕೋಡಿ ಯಲ್ಲಿಲ್ಲ. ಉಪಗ್ರಹಚಿತ್ರದಲ್ಲಿ ತೋರುವಷ್ಟು ವಿಶದವಾದ ರಾಮಸೇತುವಿನ ಚಿತ್ರಣ ಇಲ್ಲಿ ದೊರಕಲಾರದು. ಆದರೆ, ಭಾರತೀಯರ ಎದೆಯಲ್ಲಿ ರಾಮನಿರ್ಮಿತವಾದ ಸೇತುವೆ ಇವತ್ತಿಗೂ ದೃಢವಾಗಿ ನಿಂತಿದೆ.
* ನವೀನ ಗಂಗೋತ್ರಿ