Advertisement

ಸ್ಥಾಯಿ ಸಮಿತಿ ಚುನಾವಣೆ ಇಂದು

11:52 AM Dec 05, 2018 | Team Udayavani |

ಬೆಂಗಳೂರು: ಬಿಬಿಎಂಪಿ ಉಪಮೇಯರ್‌ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಬುಧವಾರ ಬೆಳಗ್ಗೆ 11.30ಕ್ಕೆ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

Advertisement

ಪ್ರಾದೇಶಿಕ ಆಯುಕ್ತರು ಹೊರಡಿಸಿರುವ ಅಧಿಸೂಚನೆಯಂತೆ ಮೊದಲಿಗೆ ಉಪಮೇಯರ್‌ ಚುನಾವಣೆ ನಡೆಯಲಿದ್ದು, ಬಳಿಕ ಸ್ಥಾಯಿ ಸಮಿತಿಗೆ ತಲಾ 12 ಸದಸ್ಯರಂತೆ ಒಟ್ಟು 132 ಸದಸ್ಯರನ್ನು ಆಯ್ಕೆ ನಡೆಯಲಿದೆ. ಬುಧವಾರ ನಡೆಯುವ ಚುನಾವಣೆಯಲ್ಲಿ ಆಯ್ಕೆಯಾಗುವ ಸ್ಥಾಯಿಸಮಿತಿ ಸದಸ್ಯರು ಹಾಗೂ ಅಧ್ಯಕ್ಷರು ಮುಂದಿನ 10 ತಿಂಗಳು ಅಧಿಕಾರದಲ್ಲಿರಲಿದ್ದಾರೆ.

ಚುನಾವಣೆ ಹಿನ್ನೆಲೆ ಮಂಗಳವಾರ ವಿಶೇಷ ಆಯುಕ್ತ ರಂದೀಪ್‌ ಅವರು ಮಂಗಳವಾರ ಚುನಾವಣೆ ನಡೆಯುವ ಕೆಂಪೇಗೌಡ ಪುರ ಭವನ ಪರಿಶೀಲನೆ ನಡೆಸಿದರು. ಕೌನ್ಸಿಲ್‌ ಸಭಾಂಗಣದೊಳಗೆ ಪೊಲೀಸ್‌ರಿಗೆ ಪ್ರವೇಶವಿಲ್ಲದಿರವ ಕಾರಣ ಭದ್ರತೆಗಾಗಿ ಐದು ಸಿವಿಲ್‌ ಮಾರ್ಷಲ್‌ಗ‌ಳನ್ನು ನೇಮಕ ಮಾಡಲಾಗಿದೆ. ಮೇಯರ್‌ ಚುನಾವಣೆ ವೇಳೆ ವೆಬ್‌ಸೈಟ್‌ನಲ್ಲಿ ನೇರಪ್ರಸಾರ ಮಾಡಿದಂತೆ ಈ ಚುನಾವಣೆ ಕೂಡಾ ನೇರ ಪ್ರಸಾರವಾಗಲಿದೆ.

ಈಗಾಗಲೇ ಮೈತ್ರಿಕೂಟದ ಉಪಮೇಯರ್‌ ಅಭ್ಯರ್ಥಿಯಾಗಿ ನಾಗಪುರ ವಾರ್ಡ್‌ನ ಸದಸ್ಯ ಭದ್ರೇಗೌಡ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಕೂಟ ಪಕ್ಷೇತರರಿಗೆ ಕೆಲವು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ನೀಡುವುದಾಗಿ ಮೇಯರ್‌ ಚುನಾವಣೆಯಲ್ಲಿ ಭರವಸೆ ನೀಡಿತ್ತು.

ಒಂದು ವೇಳೆ ಭರವಸೆ ಈಡೇರದಿದ್ದರೆ ಪಕ್ಷೇತರರು ಬಂಡಾಯವಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಪಕ್ಷಗಳಿಗೆ ಸ್ಥಾನ ಹಂಚಿಕೆ ಕುರಿತು ಪಕ್ಷದ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ಅದರಂತೆ, 12 ಸ್ಥಾಯಿ ಸಮಿತಿಗಳಲ್ಲಿ ಕಾಂಗ್ರೆಸ್‌ಗೆ 5, ಜೆಡಿಎಸ್‌ಗೆ 4 ಹಾಗೂ ಪಕ್ಷೇತರರಿಗೆ 3 ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಿಗಲಿದೆ.

Advertisement

ಇನ್ನು ಬಿಬಿಎಂಪಿ ಪ್ರಮುಖ ಸಮಿತಿಯಾಗಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಜೆಡಿಎಸ್‌ನವರಿಗೆ ನೀಡಲಾಗಿದೆ. ಜತೆಗೆ ವಾರ್ಡ್‌ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ, ಶಿಕ್ಷಣ ಸ್ಥಾಯಿ ಸಮಿತಿ, ತೋಟಗಾರಿಕೆ ಸ್ಥಾಯಿ ಸಮಿತಿ ಜೆಡಿಎಸ್‌ಗೆ ನೀಡುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಉಳಿದಂತೆ ಅಪೀಲು ಸ್ಥಾಯಿ ಸಮಿತಿ, ನಗರ ಯೋಜನೆ ಸ್ಥಾಯಿ ಸಮಿತಿ, ಮಾರುಕಟ್ಟೆ ಸ್ಥಾಯಿ ಸಮಿತಿ, ಬೃಹತ್‌ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ, ಆರೋಗ್ಯ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಕಾಂಗ್ರೆಸ್‌ ಹಾಗೂ ಪಕ್ಷೇತರಿಗೆ ನೀಡಲಾಗುತ್ತಿದೆ ಎಂದು ಆಡಳಿತ ಪಕ್ಷದ ಮುಖಂಡರೊಬ್ಬರು ಮಾಹಿತಿ ನೀಡಿದರು.

ಚುನಾವಣೆ ಪ್ರಕ್ರಿಯೆ: ನಾಮಪತ್ರ ಸಲ್ಲಿಕೆಗೆ ಬೆಳಗ್ಗೆ 8ರಿಂದ 9.30ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಗ್ಗೆ 11.30ಕ್ಕೆ ಚುನಾವಣೆ ಪ್ರಾರಂಭವಾಗುತ್ತದೆ. ಆರಂಭದಲ್ಲಿ ಸದಸ್ಯರ ಹಾಜರಾತಿ ಪ್ರಕ್ರಿಯೆ ನಡೆಯುತ್ತದೆ. ಹಾಜರಾತಿ ಪಡೆದ ಬಳಿಕ ಮುಖ್ಯದ್ವಾರ ಮುಚ್ಚಲಿದ್ದು, ಆ ಬಳಿಕ ಪ್ರವೇಶ ನಿರ್ಬಂಧ.

ಮೊದಲು ಉಪಮೇಯರ್‌ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯಲು ಕಾಲಾವಕಾಶ, ಅವಕಾಶವಿದ್ದಲ್ಲಿ ಚುನಾವಣೆ, ಆನಂತರ ಫಲಿತಾಂಶ ಪ್ರಕಟವಾಗುತ್ತದೆ. ಇದೇ ಮಾದರಿಯಲ್ಲಿ ಸ್ಥಾಯಿ ಸಮಿತಿಗಳ ಚುನಾವಣೆ ನಡೆಯಲಿದೆ.

ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು
ಕಾಂಗ್ರೆಸ್‌ ಸದಸ್ಯರು:
ಸೌಮ್ಯ ಶಿವಕುಮಾರ್‌ (ಶಾಂತಿನಗರ ವಾರ್ಡ್‌), ಲಾವಣ್ಯ (ಲಿಂಗರಾಜಪುರ ವಾರ್ಡ್‌), ಉದಯಕುಮಾರ್‌ (ಹಗದೂರು ವಾರ್ಡ್‌),ಕೇಶವಮೂರ್ತಿ (ಮಹಾಲಕ್ಷ್ಮೀ ಲೇಔಟ್‌), ವೇಲುನಾಯ್ಕರ್‌ (ಲಕ್ಷ್ಮೀದೇವಿ ನಗರ ವಾರ್ಡ್‌).

ಜೆಡಿಎಸ್‌ ಸದಸ್ಯರು: ಹೇಮಲತಾ ಗೋಪಾಲಯ್ಯ (ಗಾಯಿತ್ರಿ ನಗರ ವಾರ್ಡ್‌), ರಾಜಶೇಖರ್‌, ವಿ. (ನಾಗೇನಹಳ್ಳಿ ವಾರ್ಡ್‌), ಐಶ್ವರ್ಯ (ಬಿನ್ನಿಪೇಟೆ ವಾರ್ಡ್‌), ಇಮ್ರಾನ್‌ ಪಾಷಾ(ಪಾದರಾಯನಪುರ ವಾರ್ಡ್‌)

ಪಕ್ಷೇತರ ಸದಸ್ಯರು: ಮುಜಾಹಿದ್‌ಪಾಷಾ (ಸಿದ್ಧಾಪುರ ವಾರ್ಡ್‌), ಚಂದ್ರಪ್ಪರೆಡ್ಡಿ (ಕೋನೇನ ಅಗ್ರಹಾರ ವಾರ್ಡ್‌), ಲಕ್ಷ್ಮೀನಾರಾಯಣ್‌ (ದೊಮ್ಮಲೂರು ವಾರ್ಡ್‌). 

Advertisement

Udayavani is now on Telegram. Click here to join our channel and stay updated with the latest news.

Next