Advertisement

ಡಿ.4ರೊಳಗೆ ಸ್ಥಾಯಿ ಸಮಿತಿ ಚುನಾವಣೆ

12:31 AM Nov 05, 2019 | Lakshmi GovindaRaju |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಹನ್ನೆರಡು ಸ್ಥಾಯಿ ಸಮಿತಿಗಳ ಚುನಾವಣೆ ಡಿ. 4ರೊಳಗೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ತಿಳಿಸಿದ್ದಾರೆ. ಅವಧಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಚುನಾವಣೆ ನಡೆಸದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದ 9 ಸ್ಥಾಯಿ ಸಮಿತಿ ಸೇರಿ 12 ಸಮಿತಿಗಳಿಗೂ ಚುನಾವಣೆ ನಡೆಯಲಿದ್ದು, ಹತ್ತು ದಿನಗಳಲ್ಲಿ ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.

Advertisement

ಮೇಯರ್‌ ಆಯ್ಕೆ ಸಂದರ್ಭದಲ್ಲಿಯೇ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆಗೆ ನಡೆಸಬೇಕಾಗಿದ್ದ ಚುನಾವಣೆ ಗೊಂದಲದಿಂದಾಗಿ ಮುಂದೂಡಲಾಗಿತ್ತು. ಈ ವೇಳೆ ಒಂಬತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಹೈಕೋರ್ಟ್‌ ಮೊರೆ ಹೋಗಿ “ಡಿಸೆಂಬರ್‌ವರೆಗೆ ನಮ್ಮ ಕಾಲಾವಧಿ ಇದ್ದು, ಸೆಪ್ಟೆಂಬರ್‌ನಲ್ಲೇ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸುವುದರಿಂದ ನಮ್ಮ ಹಕ್ಕುಗಳು ಮೊಟಕಾಗುತ್ತದೆ’ ಎಂದು ಹೇಳಿದ್ದರು.

ಆದ್ದರಿಂದ ಒಂಬತ್ತು ಸ್ಥಾಯಿ ಸಮಿತಿಗಳ ಚುನಾವಣೆಗೆ ಕೋರ್ಟ್‌ ತಡೆ ನೀಡಿ, ಅವಧಿ ಪೂರ್ಣಗೊಳ್ಳುವವರೆಗೂ ಚುನಾವಣೆ ನಡೆಸದಂತೆ ತಿಳಿಸಿತ್ತು. ಹೀಗಾಗಿ ಒಂಬತ್ತು ಸ್ಥಾಯಿ ಸಮಿತಿ ಹೊರತು ಪಡಿಸಿ ಮೂರು ಸ್ಥಾಯಿ ಸಮಿತಿಗಳ ಚುನಾವಣೆಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದರು. ಆದರೆ, ಪ್ರತಿ ಸ್ಥಾಯಿ ಸಮಿತಿಗೆ ಹನ್ನೊಂದು ಸದಸ್ಯರು ನಾಮಪತ್ರ ಸಲ್ಲಿಸಬೇಕಿತ್ತಾದರೂ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಸಿರಲಿಲ್ಲ. ಈಗ ಡಿ. 4ರೊಳಗೆ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ಮುಂದಾಗಿದ್ದಾರೆ.

ಯಾವ್ಯಾವು ಸ್ಥಾಯಿ ಸಮಿತಿ?: ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ನಗರ ಯೋಜನೆ ಸ್ಥಾಯಿ ಸಮಿತಿ, ಬೃಹತ್‌ ಕಾಮಗಾರಿ ಸ್ಥಾಯಿ ಸಮಿತಿ, ವಾರ್ಡ್‌ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ, ಶಿಕ್ಷಣ ಸ್ಥಾಯಿ ಸಮಿತಿ, ಅಪೀಲು ಸ್ಥಾಯಿ ಸಮಿತಿ, ತೋಟಗಾರಿಕೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಆಡಳಿತ ಸುಧಾರಣಾ ಸ್ಥಾಯಿ ಸಮಿತಿ, ಆಯೋಗ್ಯ ಸ್ಥಾಯಿ ಸಮಿತಿ, ಮಾರುಕಟ್ಟೆ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಮತ್ತು ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ.

ಎಂಟು ತಿಂಗಳು: ಮೇಯರ್‌ ಮತ್ತು ಉಪಮೇಯರ್‌ ಅವಧಿಯಷ್ಟೇ ಸ್ಥಾಯಿ ಸಮಿತಿ ಸದಸ್ಯರ ಅವಧಿ ಇದ್ದು, ಮೇಯರ್‌ ಚುನಾವಣೆ ವೇಳೆ ನಡೆಯಬೇಕಾಗಿದ್ದ ಚುನಾವಣೆ ಮುಂದೂಡಲಾಗಿದ್ದು, ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಿದರೆ ಸದಸ್ಯರ ಅಧಿಕಾರಾವಧಿ ಏಂಟು ತಿಂಗಳು ಮಾತ್ರ ಇರಲಿದೆ. 2020 ಸೆಪ್ಟಂಬರ್‌ ತಿಂಗಳಾಂತ್ಯದಲ್ಲಿ ಮೇಯರ್‌ ಅವಧಿ ಮುಗಿಯಲಿದ್ದು, ಚುನಾವಣೆ ನಡೆಯಲಿದೆ.

Advertisement

ಹತ್ತು ದಿನಗಳಲ್ಲಿ ಚುನಾವಣೆ ಅಧಿಸೂಚನೆ: ಹನ್ನೆರಡು ಸ್ಥಾಯಿ ಸಮಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದುವಾರ ಅವಕಾಶ ನೀಡಲಾಗುವುದು. ಒಬ್ಬರು ಅಧ್ಯಕ್ಷರು ಸೇರಿ 11 ಮಂದಿ ಸದಸ್ಯರು ನಾಮಪತ್ರ ಸಲ್ಲಿಸಬೇಕು. ಡಿ. 4ರೊಳಗೆ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಲುಸ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಪಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಯಾದರೂ, 12 ಸ್ಥಾಯಿ ಸಮಿತಿ ಚುನಾವಣೆಗೆ ಅಡ್ಡಿಯಾಗುವುದಿಲ್ಲ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ ಎಂದು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next