ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುವ ಸಿ ಮತ್ತು ಡಿ ದರ್ಜೆ ನೌಕರರಿಗೆ ಯುಜಿಸಿ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ವಿಶ್ವವಿದ್ಯಾನಿಲಯ ಅಧ್ಯಾಪಕೇತರ ಉದ್ಯೋಗಿಗಳ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ವಿಶ್ವವಿದ್ಯಾಲಯದ ಕಾರ್ಯಸೌಧ ಕ್ರಾಫರ್ಡ್ ಭವನದ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು, ವಿವಿಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಸಮಾಧಾನ: ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಕಾಯಂಗೊಳಿಸಿ, ಯುಜಿಜಿ ವೇತನ ನೀಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುಜಿಸಿ ವೇತನ ಜಾರಿಗೊಳಿಸಿ: ವಿಶ್ವವಿದ್ಯಾನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ ಮತ್ತು ಡಿ ದರ್ಜೆಯ ನೌಕರರಿಗೂ ಯುಜಿಸಿಯ ವೇತನ ಜಾರಿಗೊಳಿಸುವಂತೆ ಹಾಗೂ ಯುಜಿಸಿಯಿಂದ 2016ರಿಂದ ಅನ್ವಯವಾಗುವಂತೆ ಎ ಹಾಗೂ ಬಿ ವರ್ಗದ ಅಧ್ಯಾಪಕೇತರ ಉದ್ಯೋಗಿಗಳಿಗೆ ಯುಜಿಸಿ ವೇತನ ಜಾರಿಗೊಳಿಸುವಂತೆ ಆದೇಶ ಹೊರಡಿಸಲಾಗಿತ್ತು.
ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ಈ ಸೌಲಭ್ಯಗಳನ್ನು ನಮ್ಮ ವಿವಿಯ ಎಲ್ಲಾ ಉದ್ಯೋಗಿಗಳಿಗೂ ವಿಸ್ತರಿಸಬೇಕು. ವಿವಿಯಲ್ಲಿ ಹಲವಾರು ವರ್ಷಗಳಿಂದ ಸಂಚಿತ ವೇತನ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳನ್ನು ಖಾಯಂಗೊಳಿಸಬೇಕು. ಸುಮಾರು ವರ್ಷಗಳಿಂದಲೂ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ನಿಯಮಾನುಸಾರ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ನೌಕರರ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ವಿಳಂಬ ಧೋರಣೆ ತೋರದೇ ತ್ವರಿಗತಿಯಲ್ಲಿ ಕ್ರಮ ಕೈಗೊಳ್ಳಬೇಕು. ವಿವಿಧ ಸೌಲಭ್ಯ ನೀಡಿ ಭದ್ರತೆ ಒದಗಿಸಬೇಕು. ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ಪ್ರತಿಭಟನಾನಿರತ ನೌಕರರು ಆಗ್ರಹಿಸಿದರು.
ವಿಶ್ವವಿದ್ಯಾನಿಲಯದ ಅಧ್ಯಾಪಕೇತರ ಉದ್ಯೋಗಿಗಳ ಸಂಘದ ಅಧ್ಯಕ್ಷ ಎಂ.ಎನ್.ಹರೀಶ್ ಬಾಬು, ಉಪಾಧ್ಯಕ್ಷ ಚನ್ನಬಸಪ್ಪ, ಕಾರ್ಯದರ್ಶಿ ಪ್ರಕಾಶ್, ಹೇಮಲತಾ, ಮಂಜುಳ, ಪುರುಷೋತ್ತಮ.ಸಿ, ವಿಶ್ವಮಾನವ ವೇದಿಕೆಯ ಅಧ್ಯಕ್ಷ ಆರ್.ವಾಸುದೇವ್, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ವಿನೋದ್, ಮಂಜುನಾಥ್, ಚೇತನ್ ಕುಮಾರ್, ಶಿವಕುಮಾರ್, ವಿಷಕಂಠೇಗೌಡ, ಮಹೇಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.