ಬೆಂಗಳೂರು: ನಿಷೇಧಿತ ಛಾಪಾಕಾಗದ ದಂಧೆಯನ್ನು ಬಯಲಿಗೆಳೆದಿರುವ ಶಿವಾಜಿನಗರ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸರಸ್ವತಿಪುರಂ ನಿವಾಸಿ ಎಂ.ರಾಘವನ್, ಆತನ ಸಹೋದರ ಮುರುಗೇಶ್, ಹನುಮಂತನಗರ ನಿವಾಸಿ ಕುಮಾರ್ ಬಂಧಿತರು. ದಂಧೆಯ ಪ್ರಮುಖ ಸೂತ್ರಧಾರ ಎನ್ನಲಾದ ಗೋಪಾಲರಾವ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.
ಕೆಲ ದಿನಗಳ ಹಿಂದೆ ಶಿವಾಜಿನಗರದ ರಸಲ್ ಮಾರ್ಕೆಟ್‌ನಲ್ಲಿ ನಿಷೇಧಿತ ಛಾಪಾ ಕಾಗದಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಆಧರಿಸಿ ಮಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಮುರುಗನ್ ಸಿಕ್ಕಿಬಿದ್ದಿದ್ದು, ಆತನ ಬಳಿ 1987ರ ಆಗಸ್ಟ್ ತಿಂಗಳ ಸೀಲು ( ಮೊಹರು) ಹೊಂದಿರುವ ಛಾಪಾ ಕಾಗದ ಸಿಕ್ಕಿತು. ಕೂಡಲೇ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಇತರೆ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ.
ಈ ಮಾಹಿತಿ ಆಧರಿಸಿ ರಾಘವನ್ ಹಾಗೂ ಕುಮಾರ್‌ನನ್ನು ಬಂಧಿಸಲಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಆರೋಪಿಗಳಿಂದ ಹತ್ತು ರೂ. ಮೌಲ್ಯದ 1 ಹಾಗೂ ಐದು ರೂ. ಮೌಲ್ಯದ 2 ನಿಷೇಧಿತ ಛಾಪಾ ಕಾಗದಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಆರೋಪಿಗಳು 1 ಛಾಪಾ ಕಾಗದಕ್ಕೆ ಸಾವಿರದಿಂದ ಎರಡು ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಯಾರು ಛಾಪಾ ಕಾಗದಗಳನ್ನು ಖರೀದಿಸುತ್ತಿದ್ದರು, ಯಾವ ಉದ್ದೇಶಕ್ಕೆ ಬಳಕೆಯಾಗುತ್ತಿದ್ದವು ಎಂಬುದು ಗೊತ್ತಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ ಎಂದು ಅಧಿಕಾರಿ ಹೇಳಿದರು.
ನೋಟರಿಯಾಗಿದ್ದ ಕಿಂಗ್‌ಪಿನ್: ತಲೆಮರೆಸಿಕೊಂಡಿರುವ ಆರೋಪಿ ಗೋಪಾಲರಾವ್, ನಗರದ ನ್ಯಾಯಾಲಯಗಳ ಸಮೀಪ ನೋಟರಿ ಕೆಲಸ ಮಾಡುತ್ತಿದ್ದು, ಆತನೇ ಛಾಪಾ ಕಾಗದಗಳನ್ನು ನೀಡುತ್ತಿದ್ದ ಎಂದು ಆರೋಪಿಗಳು ಹೇಳಿದ್ದಾರೆ. ಆತನ, ಬಂಧನದ ಬಳಿಕ ದಂಧೆಯ ಕುರಿತು ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.