Advertisement
ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ನೀಡಿದ ಪಂಚ ಗ್ಯಾರಂಟಿಗಳನ್ನು ಈಡೇರಿಸಲು ವಿತ್ತೀಯ ಕೊರತೆ ಸರಿದೂಗಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಆದಾಯ ಹೆಚ್ಚಿಸಿಕೊಳ್ಳಲು ಈಗಾಗಲೇ ಮುಂದ್ರಾಂಕ ಹಾಗೂ ನೋಂದಣಿ ಶುಲ್ಕ ಹೆಚ್ಚಿಸಿದೆ. ಇದೀಗ ಬಾಂಡ್ ಪೇಪರ್ (ಛಾಪಾ ಕಾಗದ) ಮೇಲೆ ರಾಜ್ಯ ಸರ್ಕಾರದ ಕಣ್ಣು ಬಿದ್ದಿದ್ದು, ಎಲ್ಲ ವಿಧದ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಭಾರೀ ಹೊರೆಯಾಗಿದೆ. ಮೊದಲೇ ಕೊಬ್ಬರಿ ಬೆಲೆ ನೆಲ ಕಚ್ಚಿದೆ, ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮಾಡುವಲ್ಲಿ ಸಾಕಷ್ಟು ಲೋಪಗಳಾಗಿವೆ. ಇಂತಹ ವೇಳೆ ಕೃಷಿಕರು ಬದುಕುವುದೇ ಸವಾಲಾಗಿದೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜೀವನ ವೆಚ್ಚ ದುಬಾರಿಯಾಗಿದೆ. ಈಗ ಬಾಂಡ್‌ಗೆ ಹೆಚ್ಚಿನ ತೆರಬೇಕಿದೆ.
Related Articles
Advertisement
ಮುಚ್ಚಳಿಕೆ ಪತ್ರ, ಪ್ರಮಾಣ ಪತ್ರ, ಮಾಸಾಶನ, ಶಿಷ್ಯವೇತನ, ವಸತಿ ಶಾಲೆಗಳ ಪ್ರವೇಶ, ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರು ಪಡೆಯುವ ಸವಲತ್ತುಗಳು, ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಪಡೆಯುವ ಸಾಲ, ಪಡೆದ ಸಾಲ ನವೀಕರಣ ಹಾಗೂ ಬೀದಿ ಬದಿ ವ್ಯಾಪಾರಸ್ಥರು ಸಣ್ಣ ಪುಟ್ಟ ಬ್ಯಾಂಕ್ ಲೋನ್ ಪಡೆಯಲು, ಮನೆಯ ಬಾಡಿಗೆ, ಭೋಗ್ಯ ಸೇರಿದಂತೆ ಹಲವು ಕೆಲಸಗಳಿಗೆ ಈ ಮೊದಲು ಛಾಪ ಕಾಗದಕ್ಕೆ 20 ರೂ..ನಿಂದ 50 ರೂ. ಪಾವತಿಸಬೇಕಿತ್ತು. ಇದೀಗ ಅವುಗಳ ಮೂಲ ದರ 100 ರೂ., ನಿಂದ 500 ಕ್ಕೇರಿದ್ದು, ಚಿಕ್ಕಪುಟ್ಟ ಕೆಲಸಕ್ಕೂ 100 ರೂ. ಮುಖಬೆಲೆಯ ಬಾಂಡ್ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಛಾಪಾ ಕಾಗದ ದರ ಐದು ಪಟ್ಟು ಹೆಚ್ಚಳ ಮಾಡಿರುವುದು ಸಾರ್ವಜನಿಕರಿಗೆ ಭಾರೀ ಹೊರೆಯಾಗಿದೆ. ರಾಜ್ಯ ಸರ್ಕಾರ ಮುದ್ರಾಂಕ, ನೋಂದಣಿ ಶುಲ್ಕ ಏರಿಕೆ ಮರುಪರಿಶೀಲನೆ ನಡೆಸಿ ಜನಸಾಮಾನ್ಯರಿಗೆ ಕಡಿಮೆ ದರ ನಿಗದಿ ಮಾಡಬೇಕು. -ಕೇಶವಮೂರ್ತಿ, ವೆಂಡರ್
ಕೃಷಿಕರ ಸುಲಭ ವ್ಯವಹಾರಕ್ಕೆ 20 ರೂ. ಸ್ಟಾಂಪ್ ಅವಶ್ಯವಿದ್ದವು. ಇದೀಗ ಕನಿಷ್ಠ 100 ರೂ.ಗೆ ಏರಿಕೆ ಮಾಡಿರುವುದು ಖಂಡನೀಯ, ರೈತರಿಗಾದರೂ ಪರ್ಯಾಯ ವ್ಯವಸ್ಥೆ ಮೂಲಕ ಈ ಮೊದಲಿನಂತೆ 20 ರೂ.ಗೆ ಸ್ಟಾಂಪ್ ದೊರಕುವ ವ್ಯವಸ್ಥೆ ಮಾಡಬೇಕು. ನಗರದಲ್ಲಿ ಲಕ್ಷಾಂತರ ಹಣ ಕೊಟ್ಟು ನಿವೇಶನ ಮನೆ ಭೋಗ್ಯ ಮಾಡಿಸಿಕೊಳ್ಳುವವರಿಗೆ ತೊಂದರೆ ಇಲ್ಲ. ಕೃಷಿಕರು ಸಣ್ಣ ಪುಟ್ಟ ವ್ಯವಹಾರಕ್ಕೆ ತೊಂದರೆ ಆಗುತ್ತಿದೆ. -ಕಾಂತರಾಜು, ಕೃಷಿಕ, ಕುರುವಂಕ ಗ್ರಾಮ
-ಶಾಮಸುಂದರ್ ಕೆ. ಅಣ್ಣೇನಹಳ್ಳಿ