ಚೆನ್ನೈ: ಅಣ್ಣ ಎಂ.ಕೆ.ಅಳಗಿರಿಯ ವಿರೋಧದ ನಡುವೆಯೇ ತಮ್ಮ ಎಂ.ಕೆ.ಸ್ಟಾಲಿನ್ ಡಿಎಂಕೆಯ ಹೊಸ ಅಧ್ಯಕ್ಷರಾಗಿ ಚುನಾಯಿ ತರಾಗಿದ್ದಾರೆ. ಈ ಮೂಲಕ ಅರ್ಧ ಶತಮಾನದ ಕಾಲ ಡಿಎಂಕೆಯನ್ನು ಆಳಿದ್ದ ಕರುಣಾನಿಧಿಯವರ ರಾಜಕೀಯ ಉತ್ತರಾಧಿಕಾರಿ ಪಟ್ಟವನ್ನು ಅವರ ಕಿರಿಯ ಪುತ್ರ ಸ್ಟಾಲಿನ್ ಅಲಂಕರಿಸಿದ್ದಾರೆ.
ಕುಟುಂಬದೊಳಗೆ ಸ್ಟಾಲಿನ್ ಅವರ ಪದೋನ್ನತಿಗೆ ಪ್ರತಿರೋಧ ವ್ಯಕ್ತವಾದರೂ ಪಕ್ಷದೊಳಗೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ಮಂಗಳವಾರ ಸಭೆ ಸೇರಿದ್ದ ಡಿಎಂಕೆಯ ಸಾಮಾನ್ಯ ಸಮಿತಿಯು ಡಿಎಂಕೆ ಕಾರ್ಯಾಧ್ಯಕ್ಷರಾಗಿದ್ದ ಸ್ಟಾಲಿನ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿತು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಅನºಳಗನ್ ಘೋಷಿಸಿದ್ದಾರೆ.
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಟಾಲಿನ್ ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ದಳಪತಿಯ ಪದೋನ್ನತಿಯ ಘೋಷಣೆಯಾಗುತ್ತಿದ್ದಂತೆ ಡಿಎಂಕೆ ನಾಯಕರೆಲ್ಲರೂ ಗಟ್ಟಿ ಧ್ವನಿಯಲ್ಲಿ ಘೋಷಣೆ ಕೂಗುತ್ತಾ ಸ್ವಾಗತಿಸಿದರು ಎಂದು ಅನºಳಗನ್ ಹೇಳಿದ್ದಾರೆ. ಪಕ್ಷಾಧ್ಯಕ್ಷರಾಗಿ ನಿಯುಕ್ತಿಗೊಂಡ ಬಳಿಕ ಸ್ಟಾಲಿನ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
2014ರಲ್ಲಿ ಸ್ವತಃ ಕರುಣಾನಿಧಿ ಅವರಿಂದಲೇ ಡಿಎಂಕೆಯಿಂದ ಉಚ್ಚಾಟಿತಗೊಂಡಿದ್ದ ಅಳಗಿರಿ ಅವರು ಸ್ಟಾಲಿನ್ ವಿರುದ್ಧ ಬಂಡೆದ್ದಿದ್ದಾರೆ. ಸೆ.5ರಂದು ಚೆನ್ನೈನಲ್ಲಿ ತಮ್ಮ ಬೆಂಬಲಿಗರ ರ್ಯಾಲಿ ನಡೆಸಲು ಯೋಜಿಸಿದ್ದಾರೆ. ಮಧುರೈ ಭಾಗದಲ್ಲಿ ಅಳಗಿರಿ ಪ್ರಾಬಲ್ಯ ಹೊಂದಿದ್ದಾರೆ.
248 ಸಾವು: ಇದೇ ವೇಳೆ, ಕರುಣಾ ನಿಧನದಿಂದ ಆಘಾತಗೊಂಡು ಪಕ್ಷದ 248 ಕಾರ್ಯಕರ್ತರು ಅಸುನೀಗಿದ್ದಾರೆ ಎಂದು ಡಿಎಂಕೆ ಮಂಗಳವಾರ ಘೋಷಿಸಿದ್ದು, ಪ್ರತಿಯೊಬ್ಬರ ಕುಟುಂಬಕ್ಕೂ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದೆ.