Advertisement

ಬೆಂಗಳೂರಿನ ಬಾನಲ್ಲೇ ರೆಕ್ಕೆ ಬಿಚ್ಚಲಿವೆ ಉಕ್ಕಿನ ಹಕ್ಕಿಗಳು

12:06 PM Oct 29, 2018 | Team Udayavani |

ರಾಜ್ಯ ಹಾಗೂ ರಾಜಧಾನಿಯ ಹೆಮ್ಮೆ ಎನಿಸಿರುವ ಪ್ರತಿಷ್ಠಿತ ಏರೋ ಇಂಡಿಯಾ ಪ್ರದರ್ಶನ ಸತತ 12ನೇ ಬಾರಿ ಬೆಂಗಳೂರಿನಲ್ಲೇ ಆಯೋಜನೆಗೊಂಡಿದೆ. ವೈಮಾನಿಕ ಪ್ರದರ್ಶನವನ್ನು ಉತ್ತರ ಪ್ರದೇಶಕ್ಕೆ ಹಾರಿಸಿಕೊಂಡು ಹೋಗುವ ಪ್ರಯತ್ನ ವಿಫ‌ಲವಾಗಿ, 2019ರ ಏರ್‌ ಶೋಗೆ ರೆಕ್ಕೆ ಕಟ್ಟುವ ಕಾರ್ಯ ಭರದಿಂದ ಸಾಗಿದೆ. ಲಾಂಛನ ವಿನ್ಯಾಸದಿಂದ ಆರಂಭವಾಗಿ ಬಹುತೇಕ ಕಾರ್ಯಗಳು ಮುಗಿದಿದ್ದು, ಬರುವ ಫೆಬ್ರವರಿ 20ರಿಂದ ಬೆಂಗಳೂರಿನ ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳು ರೆಕ್ಕೆ ಬಿಚ್ಚಲಿವೆ. ಈ ಬಾರಿಯಾ ವೈಮಾನಿಕ ಪ್ರದರ್ಶನದ ಪೂರ್ಣ ಮಾಹಿತಿ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…  

Advertisement

ಬೆಂಗಳೂರು: ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ, ರಕ್ಷಣಾ ಕ್ಷೇತ್ರದ ಸುಧಾರಿತ ಉತ್ಪನ್ನಗಳ ಪ್ರದರ್ಶನ, ಮಾರಾಟ ಹಾಗೂ ಹೊಸ ಸಂಶೋಧನೆ, ಯಶಸ್ವಿ ಪ್ರಯೋಗಗಳ ಬಗ್ಗೆ ಮಾಹಿತಿ ವಿನಿಮಯಕ್ಕೆ ಸಾಕ್ಷಿಯಾಗುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ-2019ಕ್ಕೆ ಸಕಲ ಸಿದ್ಧತೆ ಆರಂಭವಾಗಿದೆ.

ರಕ್ಷಣಾ ಸಚಿವಾಲಯ ಹಾಗೂ ರಕ್ಷಣಾ ವಸ್ತುಗಳ ಪ್ರದರ್ಶನಾ ಸಂಸ್ಥೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ “ಏರೋ ಇಂಡಿಯಾ’ ಏರ್‌ ಶೋ, 2019ರ ಫೆ.20ರಿಂದ 24ರವರೆಗೆ ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ನಡೆಯಲಿದೆ. 71 ದೇಶೀಯ ಸಂಸ್ಥೆ ಹಾಗೂ 31 ವಿದೇಶಿ ಸಂಸ್ಥೆಗಳು ವಸ್ತು ಪ್ರದರ್ಶನಕ್ಕೆ ನೋಂದಾಯಿಸಿಕೊಂಡಿವೆ. “ಏರೋ ಇಂಡಿಯಾ 2019’ಕ್ಕೆ ಸಂಬಂಧಪಟ್ಟಂತೆ ವೆಬ್‌ಸೈಟ್‌, ಲಾಂಛನ ಹಾಗೂ ಟ್ಯಾಗ್‌ಲೈನ್‌ ಕೂಡ ಬಿಡುಗಡೆಯಾಗಿದೆ.

1996ರಲ್ಲಿ ಆರಂಭವಾದ ಏರೋ ಇಂಡಿಯಾ ಯಶಸ್ವಿಯಾಗಿ 11 ಪ್ರದರ್ಶನಗಳನ್ನು ಮುಗಿಸಿದ್ದು, 12ನೇ ವೈಮಾನಿಕ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ. 2017ರಲ್ಲಿ ನಡೆದ ಏರ್‌ ಶೋನಲ್ಲಿ 22 ದೇಶಗಳ 213 ಕಂಪನಿಗಳು ಹಾಗೂ ದೇಶೀಯ ಮಟ್ಟದ 234 ಕಂಪನಿಗಳು ಹಾಗೂ 46 ದೇಶಗಳಿಂದ 500 ಮಂದಿ ವಿಶೇಷ ಆಹ್ವಾನಿತರು ಪಾಲ್ಗೊಂಡಿದ್ದರು.

ವಾಣಿಜ್ಯ ಉದ್ದೇಶಕ್ಕಾಗಿ 60 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಮತ್ತು 1 ಲಕ್ಷಕ್ಕೂ ಅಧಿಕ ಸಾರ್ವಜನಿಕರು ಸಾಕ್ಷಿಯಾಗಿದ್ದರು. 2019ರ ಏರೋ ಇಂಡಿಯಾ ಮೂಲಕ ವಾಯುಯಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯೋದ್ದೇಶಕ್ಕೆ ವೇದಿಕೆ ಕಲ್ಪಿಸುವ ಜತೆಗೆ ಕ್ಷಿಪ್ರ ಆರ್ಥಿಕ ಬೆಳವಣಿಗೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ವಲಯದ ಉತ್ಪನ್ನಗಳ ತೆರೆದುಕೊಳ್ಳುವಿಕೆಯ ಸದುಪಯೋಗ ಪಡೆದುಕೊಳ್ಳುವುದು ಪ್ರದರ್ಶನದ ಉದ್ದೇಶ.

Advertisement

ಆ ಮೂಲಕ ಭಾರತವು ಏಷ್ಯಾದಲ್ಲೇ ರಕ್ಷಣಾ ಕ್ಷೇತ್ರದ ಔದ್ಯೋಗಿಕ ಹಬ್‌ ಆಗಿ ಹೊರಹೊಮ್ಮುವ ಗುರಿ ಹೊಂದಿದೆ. ಏರ್‌ ಶೋನಲ್ಲಿ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ 10,219 ಚದರ ಮೀ. ಪ್ರದೇಶ ಮೀಸಲಿಡಲಾಗಿದೆ. ಅದರಲ್ಲಿ 148 ಮಳಿಗೆಗಳಿಗೆ ಈಗಾಗಲೇ ನೋಂದಣಿ ಪೂರ್ಣಗೊಂಡಿದೆ. ವಾಣಿಜ್ಯೋದ್ದೇಶಕ್ಕಾಗಿ 8 ಮಂದಿ ಉದ್ಯಮಿಗಳು ಮುಂಗಡ ಕಾಯ್ದಿರಿಸಿಕೊಂಡಿದ್ದಾರೆ.  

ತೇಜಸ್‌ ಪ್ರೇರಿತ ವಿಶಿಷ್ಟ ಲಾಂಛನ: 2019ರ ಏರೋ ಇಂಡಿಯಾ ಪ್ರದರ್ಶನಕ್ಕೆ ಲೋಗೋ ಬಿಡುಗಡೆ ಮಾಡಲಾಗಿದೆ. “ತೇಜಸ್‌’ ಲಘು ಯುದ್ಧ ವಿಮಾನ (ಎಲ್‌ಸಿಎ) ಪ್ರೇರಣೆಯೊಂದಿಗೆ ಲಾಂಛನ ಸಿದ್ಧಪಡಿಸಲಾಗಿದೆ. ತೇಜಸ್‌ ಯುದ್ಧ ವಿಮಾನವು ಸಣ್ಣ ಮತ್ತು ಬೃಹತ್‌ ಬಹುಪಯೋಗಿ ಸೂಪರ್‌ಸೋನಿಕ್‌ ಯುದ್ಧ ವಿಮಾನವಾಗಿದೆ. ಇದರ ಸಿಂಗಲ್‌ ಎಂಜಿನ್‌ ಕಂಪೌಂಡ್‌-ಡೆಲ್ಟಾ-ವಿಂಗ್‌, ಟೈಲೆಸ್‌ ಏರ್‌ಕ್ರಾಫ್ಟ್ ವಿನ್ಯಾಸ ಹಾಗೂ ಅಭಿವೃದ್ಧಿಯು ಭಾರತೀಯ ವಾಯುಸೇನೆ ಮತ್ತು ನೌಕಾಪಡೆಗೆ ಹೆಚ್ಚು ಅನುಕೂಲವಾಗಿದೆ.

ತೇಜಸ್‌ ಯುದ್ಧ ವಿಮಾನವು ಈಗಾಗಲೇ 4 ಸಾವಿರ ಯಶಸ್ವಿ ಪರೀಕ್ಷೆ ಪೂರೈಸಿದೆ. ಇದೆಲ್ಲದರ ಪ್ರೇರಣೆಯೊಂದಿಗೆ ಏರ್‌ಶೋ ಲಾಂಛನ ಸಿದ್ಧವಾಗಿದೆ. ಮೂರು ಬಣ್ಣಗಳ ಸಮ್ಮಿಳಿತ ತೇಜಸ್‌ ಯುದ್ಧ ವಿಮಾನದ ಪ್ರತಿಕೃತಿ ಮಧ್ಯದಲ್ಲಿ ಅಶೋಕ ಚಕ್ರ ಇರುವುದು ಈ ಬಾರಿಯ ಏರೋ ಇಂಡಿಯಾ ಲಾಂಛನದ ವಿಶೇಷ. “ಎ’ ಚಿಹ್ನೆಯು ಜೆಟ್‌ ಯುದ್ಧ ವಿಮಾನ ಮತ್ತು ಏರೋ ಇಂಡಿಯಾ ಜಾಗತಿಕ ಪ್ರದರ್ಶನದ ಭಾರತದ ಹೆಮ್ಮೆಯನ್ನು ಎತ್ತಿ ತೋರಿಸಲಿದೆ ಮತ್ತು ನವ ಭಾರತಕ್ಕೆ ಸ್ಫೂರ್ತಿ ನೀಡಲಿದೆ.  

ಅತ್ಯಾಕರ್ಷಕ ಟ್ಯಾಗ್‌ ಲೈನ್‌: 2019ರ ಏರೋ ಇಂಡಿಯಾ ಶೋಗೆ ಟ್ಯಾಗ್‌ಲೈನ್‌ ಸಿದ್ಧಪಡಿಸಲಾಗಿದೆ. ಭಾರತದ ಏರೋಸ್ಪೇಸ್‌ ಹಾಗೂ ವಿಮಾನ ಯಾನ ಕ್ಷೇತ್ರದಲ್ಲಿ ಇರುವ ವಿಫ‌ುಲ ಅವಕಾಶ ಮತ್ತು ಭಾರತೀಯ ಮೌಲ್ಯಗಳ ಸಂವಹನ ಮಾಧ್ಯಮವಾಗಿಟ್ಟುಕೊಂಡು “ದಿ ರನ್‌ವೇ ಟು ಎ ಬಿಲಿಯನ್‌ ಅಪರ್ಚುನಿಟೀಸ್‌’ ಎಂಬ ಟ್ಯಾಗ್‌ಲೈನ್‌ ನೀಡಲಾಗಿದೆ.

ಭಾರತವು ಜಾಗತಿಕ ಮಟ್ಟದಲ್ಲಿ ಏರೋಸ್ಪೇಸ್‌ ಹಬ್‌ ಆಗುತ್ತಿದೆ ಮತ್ತು ಮೇಕ್‌ ಇನ್‌ ಇಂಡಿಯಾ ಕಲ್ಪನೆಯಡಿ ಈ ಕ್ಷೇತ್ರದಲ್ಲಿ ಹೂಡಿಕೆಗಿರುವ ಅವಕಾಶಗಳನ್ನು ತೆರೆದಿಡುವ ಅಡಿಬರಹವು ಟ್ಯಾಗ್‌ಲೈನ್‌ ಕೆಳಗಿದೆ. ಭಾರತದ ನಾಗರಿಕ ವಿಮಾನಯಾನ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಟ್ಯಾಗ್‌ಲೈನ್‌ ರೂಪಿಸಲಾಗಿದೆ. ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ವಲಯ ಇದಾಗಿದ್ದು, 2020ರ ವೇಳೆಗೆ ನಾಗರಿಕ ವಿಮಾನಯಾನ ಸೇವೆ ಬಳಸುವವರ ಸಂಖ್ಯೆ 350 ದಶಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.

ಆ ಮೂಲಕ ಭಾರತ ವಿಶ್ವದ ಮೂರನೇ ಅತಿ ದೊಡ್ಡ ವಿಮಾನಯಾನ ಮಾರುಕಟ್ಟೆಯಾಗುವ ಸಾಧ್ಯತೆ ಇದೆ. ದೇಶದಲ್ಲಿ ಸದ್ಯ 430 ನಾಗರಿಕ ವಿಮಾನಗಳಿದ್ದು, ಮುಂದಿನ ಐದರಿಂದ ಏಳು ವರ್ಷದಲ್ಲಿ ಅವುಗಳ ಸಂಖ್ಯೆ ದುಪ್ಪಟ್ಟಾಗಲಿದೆ. ಹಾಗೆಯೇ ಎಂಒಆರ್‌ ಸೆಕ್ಟರ್‌ ಪ್ರಾಜೆಕ್ಟ್ 2020ರ ವೇಳೆಗೆ 700 ಡಾಲರ್‌ನಿಂದ 1.5 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಲಿದೆ. ಲಾಂಛನ ಮತ್ತು ಟ್ಯಾಗ್‌ಲೈನ್‌ ಭಾರತದ ಏರೋಸ್ಪೇಸ್‌ ಹಾಗೂ ವಿಮಾನಯಾನ ಕ್ಷೇತ್ರದ ಮಾರುಕಟ್ಟೆ ವಿಸ್ತರಣೆ ಹಾಗೂ ಬ್ರ್ಯಾಂಡ್‌ ಕ್ರಿಯೆಷನ್‌ಗೆ ಸಹಕಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.  

ಭಾಗವಹಿಸಲಿರುವ ದೇಶೀಯ ಸಂಸ್ಥೆಗಳು: ಹಿಂದುಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌), ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌), ಅಪೊಲೋ ಏರೋಸ್ಪೇಸ್‌, ಅಲ್ಫಾ, ಸೊಸೈಟಿ ಆಫ್ ಇಂಡಿಯನ್‌ ಏರೋಸ್ಪೇಸ್‌ ಟೆಕ್ನಾಲಜಿ, ಜೆನ್ಸೇರ್‌ ಏರೋಸ್ಪೇಸ್‌, ವಿಪ್ರೋ ಎಟರ್‌ಪ್ರೈಸಸ್‌, ಇಂಡೋ ಏರೋಸ್ಪೇಸ್‌ ಸಲ್ಯೂಷನ್‌, ಬೆಮೆಲ್‌ ಲಿಮಿಟೆಡ್‌ ಸೇರಿದಂತೆ ದೇಶದ ವಿವಿಧ ರಾಜ್ಯಗಳ 71 ಸಂಸ್ಥೆಗಳು ಪ್ರದರ್ಶನದಲ್ಲಿ ಭಾಗವಹಿಸಲು ಈಗಾಗಲೇ ನೋಂದಣಿ ಮಾಡಿಕೊಂಡಿವೆ.  

ವಿದೇಶಿ ಸಂಸ್ಥೆಗಳು ಯುಎಸ್‌ ಮೂಲದ ಎಎಂಐ ಮೆಟಲ್ಸ್‌, ಬೋಯಿಂಗ್‌, ಲಾರ್ಡ್‌ ಕಾರ್ಪೊರೇಷನ್‌, ಏರ್‌ಬೋರ್ನ್, ಯುಕೆ ಮೂಲದ ಏರೋ ಮೆಟಲ್ಸ್‌ ಅಲಯನ್ಸ್‌, ಎಡಿಎಸ್‌ ಗ್ರೂಪ್‌ ಸೇರಿದಂತೆ ಯುಎಇ, ಸ್ವೀಡನ್‌, ಬೆಲ್ಜಿಯಂ, ಫ್ರಾನ್ಸ್‌, ಇಟಲಿ, ಇಸ್ರೇಲ್‌, ರಷ್ಯಾ ಮೊದಲಾದ ದೇಶಗಳ ಸುಮಾರು 31 ಸಂಸ್ಥೆಗಳು ಏರ್‌ ಶೋನಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿವೆ.  

ಏರೋ ಶೋ ನಡೆದುಬಂದ ಹಾದಿ: ಭಾರತೀಯ ಸೇನೆ, ರಕ್ಷಣಾ ವಸ್ತುಗಳ ಪ್ರದರ್ಶನಾ ಸಂಸ್ಥೆಯು ಆಯೋಜಿಸುವ ದ್ವೆ„ವಾರ್ಷಿಕ ಏರೋ ಇಂಡಿಯಾ ಪ್ರದರ್ಶನಕ್ಕೆ (ವೈಮಾನಿಕ ಪ್ರದರ್ಶನ) 22 ವರ್ಷಗಳ ಇತಿಹಾಸವಿದೆ. ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ 1996ರಲ್ಲಿ ಮೊದಲ ಏರ್‌ ಶೋ ನಡೆದಿತ್ತು. ಇದಾದ ನಂತರ 1998ರಲ್ಲಿ  ನಡೆದಿದ್ದ ಏರ್‌ ಶೋಗೆ ಅಂದಿನ ರಕ್ಷಣಾ ಸಚಿವ ಜಾರ್ಜ್‌ ಫ‌ರ್ನಾಂಡಿಸ್‌ ಚಾಲನೆ ನೀಡಿದ್ದರು. ನಂತರ 2001, 2003 ಹೀಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಫೆಬ್ರುವರಿ ತಿಂಗಳಲ್ಲಿ ಏರೋ ಇಂಡಿಯಾ ಶೋ ನಡೆದುಕೊಂಡು ಬಂದಿದೆ. ಈವರೆಗೆ 11 ಏರ್‌ ಶೋ ಯಲಹಂಕದಲ್ಲೇ ನಡೆದಿದೆ.

ವಿವಾದದ ಸುತ್ತ ರಕ್ಷಣಾ ಕ್ಷೇತ್ರದ ಸುಧಾರಿತ ಉತ್ಪನ್ನಗಳ ಪ್ರದರ್ಶನ, ಹೊಸ ಸಂಶೋಧನೆಗಳ ಮಾಹಿತಿ ವಿನಿಮಯ ಹಾಗೂ ವ್ಯವಹಾರ ಉತ್ಪನ್ನಗಳ ಖರೀದಿ, ಮಾರಾಟಕ್ಕೆ ಸಾಕ್ಷಿಯಾಗುವ ಏರೋ ಇಂಡಿಯಾ ಪ್ರದರ್ಶನವನ್ನು ಈ ಬಾರಿ ಬೆಂಗಳೂರಿನ ಬದಲಿಗೆ ಉತ್ತರ ಪ್ರದೇಶದಲ್ಲಿ ನಡೆಸುವ ಬಗ್ಗೆ ತೀವ್ರ ಚರ್ಚೆಯಾಗಿತ್ತು. ಅಂತಿಮವಾಗಿ ಬೆಂಗಳೂರಿನಲ್ಲೇ ನಡೆಸುವುದಾಗಿ ರಕ್ಷಣಾ ಸಚಿವಾಲಯ ಸ್ಪಷ್ಪಡಿಸಿದೆ. 2017ರಲ್ಲಿ ವೈಮಾನಿಕ ಪ್ರದರ್ಶನ ನಡೆಯುವ ನಾಲ್ಕೈದು ತಿಂಗಳ ಮೊದಲೂ ಇದೇ ರೀತಿಯ ಗೊಂದಲ ಸೃಷ್ಟಿಯಾಗಿತ್ತು.

ಅಂದಿನ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌, ಏರ್‌ ಶೋ ಗೋವಾಕ್ಕೆ ಸ್ಥಳಾಂತರಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಅದು ಸಾಧ್ಯವಾಗಿರಲಿಲ್ಲ. 2019ರ  ಏರ್‌ ಶೋವನ್ನು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸಮೀಪದ ಬಕ್ಷಿ ಕಾ ತಾಲಾಬ್‌ ವಾಯುನೆಲೆಗೆ ಸ್ಥಳಾಂತರಿಸುವ ಬಗ್ಗೆಯೂ ಚರ್ಚೆ ನಡೆದಿತ್ತು. ಏರೋ ಶೋ ಬೆಂಗಳೂರಿನಲ್ಲೇ ಉಳಿಸಿಕೊಳ್ಳುವ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಸ್ಥಳಾಂತರಿಸದಂತೆ ಕೋರಿದ್ದರು.  

ಬೆಂಗಳೂರಿನಲ್ಲೇ ಏಕೆ?: ಯಲಹಂಕದ ವಾಯುನೆಲೆಯಲ್ಲಿ ಏರ್‌ಶೋಗೆ ಬೇಕಾದ ಎಲ್ಲ ವ್ಯವಸ್ಥೆಯೂ ಇದೆ. ಪ್ರದರ್ಶನಗಳು ನಡೆದಂತೆ ವಿಶ್ವ ಮನ್ನಣೆಯನ್ನೂ ಪಡೆದು ಕೊಳ್ಳುತ್ತಿದೆ. ಏರ್‌ಶೋಗೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ. ದೇಶದ ಬೇರೆ ಭಾಗದಲ್ಲಿ ವಾಯುಸೇನೆ ನೆಲೆಗಳಿವೆ. ಆದರೆ, ದೇಶ- ವಿದೇಶದ ಯುದ್ಧ ವಿಮಾನ, ಹೆಲಿಕಾಪ್ಟರ್‌ ನಿಲುಗಡೆಗೆ ಬೇಕಾದ ಹ್ಯಾಂಗರ್‌ ವ್ಯವಸ್ಥೆ ಇಲ್ಲ. ಹೊಸ ಜಾಗದಲ್ಲಿ ಏರೋ ಇಂಡಿಯಾ ಆಯೋಜಿಸಬೇಕಾದರೆ ಅಗತ್ಯ ಮೂಲ ಸೌಕರ್ಯವನ್ನು ಹೊಸದಾಗಿಯೇ ಕಲ್ಪಿಸಬೇಕಾಗುತ್ತದೆ. ಇದಕ್ಕೆ ವೆಚ್ಚವೂ ಹೆಚ್ಚಾಗಲಿದೆ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next