ನೆಲಮಂಗಲ: ತಾಲೂಕಿನ ಅರೇಬೊಮ್ಮನ ಹಳ್ಳಿ ಗ್ರಾಪಂ ಸಿಬ್ಬಂದಿಗೆ ಕಳೆದ 8 ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ಪಿಡಿಒ ಪಾರ್ವತಿ ಅವರ ವಿರುದ್ಧ ಸಿಬ್ಬಂದಿ ಪಂಚಾಯ್ತಿ ಮುಂಭಾಗ ಪ್ರತಿಭಟಿಸಿದರು.
ಗ್ರಾಮಗಳ ವಿಕಾಸಕ್ಕೆ ಅಧಿಕಾರಿಗಳು ಪಂಚಾಯ್ತಿನೌಕರರಿಗೆ 8ತಿಂಗಳಿನಿಂದ ಸಂಬಳ, ಆರೋಗ್ಯ ಸೌಲಭ್ಯ, ಆರೋಗ್ಯ ಭದ್ರತೆ ಸುರಕ್ಷತಾ ಸಾಧನ ನೀಡದೆ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆಂದು ದೂರಿದರು. ತಾಲೂಕಿನ ಅರೆಬೊಮ್ಮನಹಳ್ಳಿ ಗ್ರಾಪಂ ಗಡಿಭಾಗದಲ್ಲಿದ್ದರೂ ಅನು ದಾನದಲ್ಲಿ ಬಹುಪಾಲು ತನ್ನದಾಗಿಸಿಕೊಂಡಿದೆ. ಆದರೆ, ಪಂಚಾಯ್ತಿ ಅಧಿಕಾರಿಗಳು, ಕೆಲ ಮಾಜಿ ಸದಸ್ಯರ ಏಕಪಕ್ಷೀಯ ನಿರ್ಧಾರಗಳಿಂದ ಅನೇಕ ಗ್ರಾಮಗಳಲ್ಲಿನ ಸಮಸ್ಯೆಯನ್ನು ಯಾರೊ ಬ್ಬರೂ ಕೇಳುತ್ತಿಲ್ಲ ಎಂದು ದೂರಿದರು.
ಮನವಿ: ಪಂಚಾಯ್ತಿ ಸದಸ್ಯರ ಕಾಲಾವಧಿ ಮುಗಿಯುತ್ತಿದ್ದಂತೆ ಆಡಳಿತಾಧಿಕಾರಿಯಾಗಿನೇಮಕವಾಗಿದ್ದ ಅಧಿಕಾರಿ ವರ್ಗಾವಣೆಯಾಗಿದ್ದು ಪ್ರಸ್ತುತ ಆಡಳಿತಾಧಿಕಾರಿ ಕಾರ್ಯನಿರ್ವಹಿಸುತ್ತಿಲ್ಲ. ಪರಿಣಾಮ ಅರೆಬೊಮ್ಮನಹಳ್ಳಿ ಗ್ರಾಪಂಗೆ ಪಿಡಿಒ ಪಾರ್ವತಿ ಅವರು ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ಇವರು ನಮಗೆ ಬೇಡ ಎಂದು ಹೇಳಿದರು.
ನೌಕರರಿಗೆ ಸಂಬಳವಿಲ್ಲ: ಗ್ರಾಪಂನಲ್ಲಿ ಕೋವಿಡ್ ಆತಂಕದಲ್ಲಿಯೂ ಜೀವ ಪಣ ಕಿಟ್ಟು ಕೆಲಸ ನಿರ್ವಹಿಸುತ್ತಿರುವ ವಾಟರ್ ಮೆನ್, ಅಟೆಂಡರ್, ಕಂಪ್ಯೂಟರ್ ಆಪರೇಟರ್, ಬಿಲ್‌ಕಲೆಕ್ಟರ್ 8ತಿಂಗಳಿಂದ ವೇತನ ಹಾಗೂ 14ನೇ ಹಣಕಾಸು ಯೋಜನೆಯ ಶೇ.10 ಹಣ ನೀಡಿಲ್ಲ. ಕೇಳಿದರೆ ಪಿಡಿಒ ಪಾರ್ವತಿ ಅವರು ಇಲ್ಲಸಲ್ಲದ ಸಬೂಬು ಹೇಳಿ ಕಳುಹಿಸುತ್ತಿದ್ದಾರೆಂದರು. ಇನ್ನು ಪಿಡಿಒ ಪಾರ್ವತಿ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಿಲ್ಲ. ತಾಪಂ ಇಒ ಲಕ್ಷ್ಮೀ ನಾರಾಯಣ್, ಹಿಂದುಳಿದ ಗ್ರಾಪಂ ಆಗಿದ್ದು ಕೊರೊನಾ ಆರಂಭವಾದ ನಂತರ ತೆರಿಗೆ ವಸೂಲಿ ಆಗಿಲ್ಲ. 14ನೇ ಹಣಕಾಸಿನ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಶೀಘ್ರ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ನುಡಿದರು.
ಗ್ರಾಮಸ್ಥ ನಾರಾಯಣ್, ಆಡಳಿತಾಧಿಕಾರಿ ನೇಮಕವಾದ ನಂತರ ಪಿಡಿಒ ವರ್ತನೆಯಿಂದ ಬಹಳ ಸಮಸ್ಯೆಯಾಗಿದೆ. ಮೊದಲು ಚುನಾವಣೆ ನಡೆದರೆ ಸದಸ್ಯರ ಮೂಲಕವಾದರೂ ಸಮಸ್ಯೆ ಕೇಳಬಹುದು ಎಂದರು.