Advertisement

ಶಿರ್ವ ಅಂಚೆ ಕಚೇರಿಯಲ್ಲಿ ಸಿಬಂದಿ ಕೊರತೆ

02:45 AM Jun 01, 2018 | Team Udayavani |

ಶಿರ್ವ: ಗ್ರಾಮೀಣ ಪ್ರದೇಶವಾದರೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಶಿರ್ವ ಉಪ ಅಂಚೆ ಕಚೇರಿಯು ಅತ್ಯಧಿಕ ಗ್ರಾಹಕರನ್ನು ಹೊಂದಿದೆ. ಪ್ರಮುಖ ವ್ಯವಹಾರ ಕೇಂದ್ರವಾಗಿರುವ ಅಂಚೆ ಕಚೇರಿಯಲ್ಲಿ ಸಿಬಂದಿ ಕೊರತೆಯಿಂದ ಸಕಾಲದಲ್ಲಿ ಸೇವೆ ಸಿಗದೆ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಟ್ಟಾರು,ಪಡುಬೆಳ್ಳೆ, ಕೋಡು-ಪಂಜಿಮಾರು, ಕುತ್ಯಾರು, ಪೆರ್ನಾಲು ಮತ್ತು ಸೂಡಾ ಶಾಖೆಗಳು ಶಿರ್ವ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿವೆ. 

Advertisement

ಬದಲಿ ವ್ಯವಸ್ಥೆಯಿಲ್ಲ
ಸಿಬಂದಿ ರಜೆಯಲ್ಲಿ ತೆರಳಿದರೆ ಬದಲಿ ವ್ಯವಸ್ಥೆಯಿಲ್ಲದೆ ಯಾವುದಾದರೊಂದು ವಿಭಾಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಹಿರಿಯ ನಾಗರಿಕರಿಗೆ ಸಿಗುವ ಸೇವಾ ಸೌಲಭ್ಯಗಳ ಕುರಿತು ಮಾಹಿತಿ ಬಗ್ಗೆ ಸಹಾಯವಾಣಿ, ಪ್ರತ್ಯೇಕ ಬ್ಯಾಂಕಿಂಗ್‌ ವಿಭಾಗ ಇಲ್ಲಿ ಅಗತ್ಯವಿದ್ದು, ಗ್ರಾಹಕರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕಿದೆ. 

ಆಧಾರ್‌ ತಿದ್ದುಪಡಿ ಸ್ಥಗಿತ
ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಶಿರ್ವ ಅಂಚೆ ಕಚೇರಿಯಲ್ಲಿಯೂ ಆಧಾರ್‌ ತಿದ್ದುಪಡಿ ಕೇಂದ್ರವನ್ನು ತೆರೆಯಲಾಗಿತ್ತು.ಆದರೆ ತರಬೇತಿ ಹೊಂದಿದ ನುರಿತ ಸಿಬಂದಿಯ ನೇಮಕವಾಗದೆ ಇರುವ ಸಿಬಂದಿಯೇ ತಿದ್ದುಪಡಿ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಇದೀಗ ಆಧಾರ್‌ ತಿದ್ದುಪಡಿಯ ಸಾಫ್ಟ್‌ವೇರ್‌ ಬದಲಾಗಿದ್ದು ತರಬೇತಿ ಹೊಂದಿದ ಸಿಬಂದಿ ಕೊರತೆಯಿಂದ ಆಧಾರ್‌ ತಿದ್ದುಪಡಿ ಕೇಂದ್ರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಜನರು ದೂರದ ಉಡುಪಿ, ಪಡುಬಿದ್ರಿ ಯಾ ಇನ್ನಿತರ ಪ್ರದೇಶಗಳಿಗೆ ಅಲೆದಾಡಬೇಕಾಗಿದೆ.

ಸಿಬಂದಿ ಕೊರತೆ
ಶಿರ್ವದ ಹೆಚ್ಚಿನ ನಿವಾಸಿಗಳು ವಿದೇಶದಲ್ಲಿದ್ದು, ಅಂಚೆ ಕಚೇರಿಯು ಪ್ರಮುಖ ವ್ಯವಹಾರ ಕೇಂದ್ರವಾಗಿದೆ. ಅಂಚೆ ಸೇವೆಯೊಂದಿಗೆ ಬ್ಯಾಂಕಿಂಗ್‌ ವ್ಯವಹಾರ ಮತ್ತು ಪೋಸ್ಟಲ್‌ ಇನ್ಶೂರೆನ್ಸ್‌ ಸೌಲಭ್ಯವಿದ್ದು ಗ್ರಾಹಕರ ಸಂಖ್ಯೆ ಅಧಿಕವಾಗಿದೆ. ಆದರೆ ಸಿಬಂದಿ ಕೊರತೆಯಿಂದಾಗಿ ಜನರು ಸಕಾಲದಲ್ಲಿ ಸೇವೆ ದೊರೆಯದೆ ಪರದಾಡುತ್ತಿದ್ದಾರೆ.ಅಂಚೆ ಕಚೇರಿಯ ಕೆಲಸ ಮಾತ್ರವಲ್ಲದೆ ಆಧಾರ್‌ ತಿದ್ದುಪಡಿ, ಸುಕನ್ಯಾ ಸಮೃದ್ಧಿ, ಬ್ಯಾಂಕಿಂಗ್‌, ಇನ್ಶೂರೆನ್ಸ್‌ ಜೊತೆಗೆ ವಿದ್ಯುತ್‌ ಬಿಲ್‌, ದೂರವಾಣಿ ಬಿಲ್‌ ಪಾವತಿಗಳ ಸೇವೆಯನ್ನು ಕೂಡಾ ಲಭ್ಯವಿದ್ದ ಸಿಬಂದಿಯೇ ಮಾಡಬೇಕಾಗಿದೆ. ಸುಮಾರು 30ರಿಂದ 40 ಅಂಚೆ ಉಳಿತಾಯ ಯೋಜನೆಯ ಪ್ರತಿನಿಧಿಗಳಿದ್ದು ಅವರ ಖಾತೆಗಳ ನಿರ್ವಹಣೆಯನ್ನೂ ಲಭ್ಯ ಸಿಬಂದಿಯೇ ಮಾಡಬೇಕಿದೆ.

ಬೇರೆ ಕಡೆಯಿಂದ ಸಿಬಂದಿ ನಿಯೋಜನೆ
ಅಂಚೆ ಇಲಾಖೆಯ 2016-17ರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶಿರ್ವ ಅಂಚೆ ಕಚೇರಿಯ ಸಿಬಂದಿ ಕೊರತೆಗಾಗಿ ಬೇರೆ ಕಡೆಯಿಂದ ಸಿಬಂದಿ ನಿಯೋಜನೆ ಮಾಡಿ ಜನರ ಸೇವೆಗೆ ಯಾವುದೇ ಕುಂದು ಬಾರದಂತೆ ಪ್ರಯತ್ನ ಮಾಡುತ್ತೇವೆ. 
– ರಾಜಶೇಖರ ಭಟ್‌, ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ

Advertisement

ಪ್ರತ್ಯೇಕ ಬ್ಯಾಂಕಿಂಗ್‌ ವಿಭಾಗ ತೆರೆಯಲಿ
ಸುಮಾರು 30-40 ಪೋಸ್ಟಲ್‌ ಏಜಂಟ್‌ ಗಳಿದ್ದು ಅತ್ಯಧಿಕ ವ್ಯವಹಾರ ಕೇಂದ್ರವಾಗಿರುವುದರಿಂದ ಸಿಬಂದಿ ಕೊರತೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಸೂಕ್ತ ಸಿಬಂದಿ ನೇಮಿಸಿ ಪ್ರತ್ಯೇಕ ಬ್ಯಾಂಕಿಂಗ್‌ ವಿಭಾಗ ತೆರೆದು ಜನರಿಗೆ ಉತ್ತಮ ಸೇವೆ ನೀಡುವಂತಾಗಲಿ. 
– ರೊನಾಲ್ಡ್‌ ಸಿಕ್ವೇರಾ, ಶಿರ್ವ, ಗ್ರಾಹಕ

— ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next