ಹಟ್ಟಿ ಚಿನ್ನದ ಗಣಿ: ಸಮೀಪದ ಗುರುಗುಂಟಾ ಗ್ರಾಮದಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವಿದ್ದರೂ ಸಿಬ್ಬಂದಿ ಕೊರತೆ, ಅಗತ್ಯ ಔಷಧಗಳ ಕೊರತೆಯಿಂದಾಗಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಗಗನಕುಸುಮವಾಗಿದೆ.
ಗುರುಗುಂಟಾ, ಗೌಡೂರು, ಕೋಠಾ, ಐದಬಾವಿ, ರಾಮಲೂಟಿ, ಪೈದೊಡ್ಡಿ, ರಾಯದುರ್ಗ, ಗದ್ದಗಿ, ಗದ್ದಗಿ ತಾಂಡಾ, ಟಣಮಕಲ್, ಗೋಲಪಲ್ಲಿ, ಯರಜಂತಿ, ಬಂಡೇಬಾವಿ, ಯಲಗಟ್ಟಾ, ಮಾಚನೂರು, ಬೆಂಚಲದೊಡ್ಡಿ, ಗೌಡೂರು ತಾಂಡಾ, ಪೂಜಾರಿ ತಾಂಡಾ, ಬೆಂಚಲದೊಡ್ಡಿ ತಾಂಡಾ ಸೇರಿದಂತೆ ಸುತ್ತಮುತ್ತಲಿನ ನೂರಾರು ದೊಡ್ಡಿಗಳು ಈ ಕೇಂದ್ರದ ವ್ಯಾಪ್ತಿಗೆ ಬರುತ್ತಿದ್ದು, ಸುಮಾರು 40ರಿಂದ 50 ಸಾವಿರ ಜನಸಂಖ್ಯೆ ಇದೆ.
ಸಣ್ಣ-ಪುಟ್ಟ ಕಾಯಿಲೆ ಬಂದರೆ ಗ್ರಾಮಸ್ಥರು ಗುರುಗುಂಟಾ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರೆ ಸಿಬ್ಬಂದಿ ಕೊರತೆಯಿಂದಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ಇರುವ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಗರ್ಭಿಣಿಯರಿಗೆ ಮಡಿಲು ಕಿಟ್ ವಿತರಿಸುತ್ತಿಲ್ಲ. ಔಷಧ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಗರ್ಭಿಣಿಯರು, ಬಾಣಂತಿಯರು, ವೃದ್ಧರು ಚಿಕಿತ್ಸೆಗೆ ಲಿಂಗಸುಗೂರು ಪಟ್ಟಣಕ್ಕೆ ತೆರಳುವುದು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರಾದ ಚಂದ್ರಶೇಖರ ನಾಯಕ, ಅಮರೇಶ ನಾಯಕ ಹೇಳುತ್ತಾರೆ.
ಗುರುಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ. ವೈದ್ಯರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಆರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಓರ್ವ ವೈದ್ಯರು, ಪುರುಷ ಕಿರಿಯ ಆರೋಗ್ಯ ಸಹಾಯಕ 2 ಹುದ್ದೆ, ಕಿರಿಯ ಆರೋಗ್ಯ ಸಹಾಯಕಿ, ಹಿರಿಯ ಆರೋಗ್ಯ ಸಹಾಯಕಿ, ಮಿನಿ ಆ್ಯಂಬ್ಯುಲೆನ್ಸ್ ಚಾಲಕ, ಚಪರಾಸಿ ಸೇರಿದಂತೆ ಹುದ್ದೆಗಳು ಇವೆ. ಮಿನಿ ಆ್ಯಂಬ್ಯುಲೆನ್ಸ್ ವಾಹನ ಇದ್ದರೂ ಇದರ ಸೇವೆ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ದೊರಕುತ್ತಿಲ್ಲ.
ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಿದ್ದು, ಇಲ್ಲಿಗೆ ಆಗಮಿಸುವ ರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಇದಕ್ಕೆ ತಕ್ಕಂತೆ ಸಿಬ್ಬಂದಿ ಇಲ್ಲ. ಇರುವ ಸಿಬ್ಬಂದಿಯಿಂದಲೇ ಚಿಕಿತ್ಸೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಹೆಚ್ಚಿನ ಸಿಬ್ಬಂದಿ ಒದಗಿಸಿದರೆ ಸಮರ್ಪಕ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಸಿಬ್ಬಂದಿ
ಆಸ್ಪತ್ರೆಗೆ ಮಂಜೂರಾದ ಎಲ್ಲ ಹುದ್ದೆ ಭರ್ತಿ ಇವೆ. ಹೆಚ್ಚು ಜನಸಂಖ್ಯೆ ಇರುವುದರಿಂದ ರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ಸಮರ್ಪಕ ಸೇವೆ ಒದಗಿಸಲು ಆಗುತ್ತಿಲ್ಲ. ನಾನು ಅಧಿಕಾರ ವಹಿಸಿಕೊಂಡು ಕೆಲ ದಿನಗಳಾಗಿವೆ. ಮಡಿಲು ಕಿಟ್ ವಿತರಣೆ ವಿಳಂಬದ ಬಗ್ಗೆ ಸದ್ಯದಲ್ಲೇ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗಲಾಗುವುದು. ರುದ್ರಗೌಡ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಲಿಂಗಸುಗೂರು