ನೆಲಮಂಗಲ : ಕ್ಷೇತ್ರದ ಶಾಸಕ ಡಾ.ಕೆ.ಶ್ರೀನಿವಾಸ್ ಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಕ್ರೀಡಾಪಟುಗಳು ಮತ್ತು ಕ್ರೀಡಾ ಪ್ರೋತ್ಸಾಹಕರು, ಕ್ರೀಡಾ ಇಲಾಖೆಯ ಅಧಿಕಾರಿಗಳ ವಿರುದ್ಧ ಗರಂ ಆಗಿ ಸಮಸ್ಯೆಗಳ ಸುರಿಮಳೆಗೈದರು.
ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪೂರ್ವ ನಿಗದಿಯಂತೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು. ಇದೇವೇಳೆ ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಖೋಖೋ ಅಸೋಸಿಯೇಷನ್ ಪ್ರದಾನ ಕಾರ್ಯದರ್ಶಿ ಶರವಣ, ಪುರಸಭೆ ಮಾಜಿಸದಸ್ಯ ಎನ್.ಎಸ್. ಮೂರ್ತಿ, ಜಯಕರ್ನಾಟಕ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ವೆಂಕಟೇಶ್, ಕರ್ನಾಟಕ
ಜನಸೈನ್ಯದ ಅಧ್ಯಕ್ಷ ಡಾ.ನರಸಿಂಹಯ್ಯ ಮತ್ತಿತರರು ಕ್ರೀಡಾಂಗಣದಲ್ಲಿ ತಾಲೂಕಿನ ಕ್ರೀಡಾರ್ಥಿಗಳಿಗೆ ತರಬೇತಿ ನೀಡಲು ಯಾವುದೇ ತರಬೇತಿದಾರರು ಹಾಜರಾಗುತ್ತಿಲ್ಲ. ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾಗಿದ್ದು ಕುಡಿಯುವ ನೀರು, ಶೌಚಾಲಯ ಮತ್ತಿತರ ಸೌಲಭ್ಯಗಳು ಒದಗಿಸಬೇಕಿದೆ. ಮಹಿಳಾ ಕ್ರೀಡಾಪಟುಗಳಿಗೆ ಬಟ್ಟೆಬದಲಾಯಿಸಲು ಸ್ಥಳಾವಕಾಶವಿಲ್ಲ, ಕ್ರೀಡಾಂಗಣದಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆಯಿಲ್ಲ, ಕಾವಲುಗಾರರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಅಂಬೇಡ್ಕರ್ ಕ್ರೀಡಾಂಗಣಕ್ಕೆ ನಾಮಫಲಕವಿಲ್ಲದೆ ಅನಾಮ ದೇಯವಾಗಿದೆ. 2016ರಿಂದ ಇಲ್ಲಿಯವರೆಗೂ ಸ್ಥಳೀಯ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯ ಸಭೆಯನ್ನು ನಡೆಸದೆ ನಿರ್ಲಕ್ಷತೆಯನ್ನು ತೋರಲಾಗಿದೆ.
ಇದನ್ನೂ ಓದಿ:337 ರಸ್ತೆ ವಾರ್ಷಿಕ ನಿರ್ವಹಣೆಗೆ ಟೆಂಡರ್ : ರಸ್ತೆಗಳ ಸ್ವಚ್ಛತೆಗೆ ಆದ್ಯತೆ
ದಸರಾ ಕ್ರೀಡೆಗೆ ಯಾವುದೇ ತರಬೇತಿ ನೀಡುತ್ತಿಲ್ಲ ಹಾಗೂ ಹೋಗಿಬರಲು ಸೂಕ್ತರೀತಿಯ ಅನುಕೂಲ ಮತ್ತು ಸಮವಸ್ತ್ರದ ವ್ಯವಸ್ಥೆಯನ್ನು ಮಾಡುತ್ತಿಲ್ಲ. ಕೇಳಿದರೆ ತಾವುಗಳು ಸಭೆಗೆ ಬರುವಂತಿಲ್ಲ, ಅನುದಾನಗಳನ್ನು ಹೊಸಕೋಟೆ ಮತ್ತು ದೇವನ ಹಳ್ಳಿಗೆ ಮಾತ್ರ ಸೀಮಿತಗೊಳಿಸಿ ಪಟ್ಟಣದ ಕ್ರೀಡಾಂಗಣದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಸಮಸ್ಯೆಗಳ ಸುರಿಮಳೆಗೈದರು.
ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶೌಚಾಲಯಗಳ ಕಾಮಗಾರಿ ಕಳಪೆಯಿಂದ ಕೂಡಿರುವುದನ್ನು ಪರಿಶೀಲಿಸಿದ ಶಾಸಕರು ಗುತ್ತಿಗೆದಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗದು ಕೊಂಡರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ವೃತ್ತನಿರೀಕ್ಷಕ ಹರೀಶ್, ಸಬ್ ಇನ್ಸ್‌ಪೆಕ್ಟರ್ ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್, ದೈಹಿಕ ಶಿಕ್ಷಣ ನಿರೀಕ್ಷಕ ನಾರಾಯಣ್ ಇತರರಿದ್ದರು.