Advertisement

ಸ್ಟೇಡಿಯಂ ಬಾಂಬ್‌ ಕೇಸ್‌: ಇಬ್ಬರಿಗೆ ಜೈಲು

06:33 AM Jul 01, 2020 | Lakshmi GovindaRaj |

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳಿಗೆ 8 ವರ್ಷ ಜೈಲು ಶಿಕ್ಷೆ ಹಾಗೂ 4 ಲಕ್ಷ ದಂಡ ವಿಧಿಸಿ ನಗರದ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.  ಇಂಡಿಯನ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆ ಸದಸ್ಯರಾದ ಅಫ್ತಾಬ್‌ ಆಲಂ ಅಲಿಯಾಸ್‌ ಫಾರೂಕ್‌ ಹಾಗೂ ಅಹಮ್ಮದ್‌ ಜಮಾಲ್‌ ಶಿಕ್ಷೆಗೆ ಗುರಿಯಾಗಿದ್ದಾರೆ.

Advertisement

2010 ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಬಾಂಬ್‌ ಸ್ಫೋಟ  ಪ್ರಕರಣದಲ್ಲಿ ಅಫ್ತಾಬ್‌ ಹಾಗೂ ಜಮಾಲ್‌ ಆರೋಪಿಗಳಾಗಿದ್ದರು. ಈ ಹಿಂದೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಲಯದ ಮುಂದೆ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಇಡೀ ಸ್ಫೋಟ ಪ್ರಕರಣದ ಸಂಚಿನ  ಬಗ್ಗೆ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿಕೊಂಡು ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಮಂಗಳವಾರ ಆದೇಶ ಪ್ರಕಟಿಸಿದ್ದು, ಆರೋಪಿಗಳಿಬ್ಬರಿಗೂ ತಲಾ ಎಂಟು ವರ್ಷ  ಜೈಲು ಹಾಗೂ ನಾಲ್ಕು ಲಕ್ಷ ರೂ. ದಂಡ ವಿಧಿಸಿದೆ.

ಆರು ಜನರಿಗೆ ಶಿಕ್ಷೆ !: ಬಂಧಿತರಾಗಿದ್ದ ಆರೋಪಿಗಳ ಪೈಕಿ ಆರು ಮಂದಿಗೆ ಶಿಕ್ಷೆ ಆದಂತಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಯಾಸೀನ್‌ ಭಟ್ಕಳ್‌ ಸಹಚರ ಸೇರಿದಂತೆ ನಾಲ್ವರು ಕೂಡ ನ್ಯಾಯಾಲಯದ ಮುಂದೆ  ತಪ್ಪೊಪ್ಪಿಕೊಂಡಿದ್ದರು. ಅವರಿಗೆ 2018ರಲ್ಲೇ 7 ವರ್ಷಗಳ ಜೈಲು ಶಿಕ್ಷೆ ಆಗಿತ್ತು. ಇದೀಗ ಅಫ್ತಾಬ್‌ ಮತ್ತು ಅಹಮದ್‌ ಕೂಡ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇನ್ನು ಪ್ರಕರಣದ ನಾಲ್ವರು ಆರೋಪಿಗಳಿದ್ದು, ಅವರ ವಿರುದ್ಧದ ನ್ಯಾಯಾಲಯದ ವಿಚಾರಣೆ ಮುಂದುವರಿದಿದೆ ಎಂದು  ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಆರೋಪಿಗಳು ಹೇಳಿದ್ದೇನು?: ಆರೋಪಿಗಳು ತಾವು ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆ ಸದಸ್ಯರಾಗಿದ್ದು, ದೆಹಲಿಯ ಜಾಮೀಯಾನಗರದ ಮನೆಯೊಂದರಲ್ಲಿ ವಾಸವಿದ್ದುಕೊಂಡು ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟಿಸಲು ಸಂಚು  ರೂಪಿಸಲಾಗಿತ್ತು. ಆರೋಪಿಗಳು ಇಟ್ಟಿದ್ದ ಬಾಂಬ್‌ ಸ್ಫೋಟಗೊಂಡು 15 ಮಂದಿ ಗಾಯಗೊಂಡಿದ್ದರು. ಉಳಿದ ಮೂರು ಬಾಂಬ್‌ಗಳನ್ನು ಪೊಲೀಸರೇ ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದರು ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next