ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆ ಮತ ಎಣಿಕೆ ಇಂದು ಗುರುವಾರ ಬಿರುಸಿನಿಂದ ಸಾಗುತ್ತಿರುವಂತೆಯೇ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 341 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ.
ಬಿಜೆಪಿ ಪರ ಬರುತ್ತಿರುವ ಈ ಪರಿಯ ಪ್ರಬಲ ಜನಾದೇಶವನ್ನು ಸ್ವಾಗತಿಸಿರುವ ಭಾರತೀಯ ಉದ್ಯಮ ರಂಗ ( India Inc), ‘ಕೇಂದ್ರದಲ್ಲಿ ಸ್ಥಿರ ಸರಕಾರ ಬಂದರೆ ದೇಶದ ಆರ್ಥಿಕಾಭಿವೃದ್ಧಿಗೆ ನಾಗಲೋಟ ಒದಗುವುದಲ್ಲದೆ, ಜಿಡಿಪಿ ವೃದ್ಧಿ, ವಿದೇಶ ಬಂಡವಾಳ ಹೆಚ್ಚಳ ಸಾಧ್ಯವಾಗುವುದು’ ಎಂದು ಹೇಳಿದೆ.
ಹಿರಿಯ ಕೈಗಾರಿಕೋದ್ಯಮಿ ಮತ್ತು ಗೋದ್ರೇಜ್ ಸಮೂಹದ ಅಧ್ಯಕ್ಷ ಆದಿ ಗೋದ್ರೇಜ್ ಅವರು ಕೇಂದ್ರದಲ್ಲಿ ಬರಲಿರುವ ಹೊಸ ಸ್ಥಿರ ಸರಕಾರ ದೇಶದ ಜಿಡಿಪಿ ಯನ್ನು ಹೆಚ್ಚಿಸುವ ದಿಶೆಯಲ್ಲಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮತ್ತು ಮಿತ್ರ ಪಕ್ಷಗಳು ಕೇಂದ್ರದಲ್ಲಿ ಹೊಸ ಸರಕಾರ ರಚಿಸಿದಲ್ಲಿ ದೇಶದಲ್ಲಿ ವಿಶ್ವದಲ್ಲೇ ಅತ್ಯಧಿಕ ಪ್ರಮಾಣದಲ್ಲಿರುವ ಕಾರ್ಪೊರೇಟ್ ತೆರಿಗೆಯನ್ನು ಅದು ಇಳಿಸಬೇಕು ಎಂದು ಆದಿ ಗೋದ್ರೇಜ್ ಮಾದ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
ಹಿಂದಿನ ಬಿಜೆಪಿ ಸರಕಾರ ಕಾರ್ಪೊರೇಟ್ ತೆರಿಗೆಯನ್ನು ಶೇ.25ರಷ್ಟು ಇಳಿಸುವ ಭರವಸೆ ನೀಡಿತ್ತು. ಆದರೆ ಸರಕಾರ ಅದನ್ನು ಸಣ್ಣ ಕಂಪೆನಿಗಳ ಸಂದರ್ಭದಲ್ಲಿ ಮಾಡಿತೇ ಹೊರತು ದೊಡ್ಡ ಕಂಪೆನಿಗಳಿಗೆ ಮಾಡಲಿಲ್ಲ ಎಂದವರು ಹೇಳಿದರು.
ದೇಶದ ಆರ್ಥಿಕಾಭಿವೃದ್ಧಿಗೆ ಒತ್ತು ನೀಡುವಂತಹ ಅನೇಕ ಕ್ರಮಗಳನ್ನು ಹೊಸ ಸರಕಾರ ಈಗಿನ್ನು ತರಾತುರಿಯಿಂದ ತರಬೇಕು. ಆ ಮೂಲಕ ದೇಶದ ಜಿಡಿಪಿ ಹೆಚ್ಚಳಕ್ಕೆ, ವಿದೇಶೀ ಬಂಡವಾಳದ ಅಧಿಕ ಒಳ ಹರಿವಿಗೆ ಅನುಕೂಲ ಮಾಡಬೇಕು ಎಂದು ಆದಿ ಗೋದ್ರೇಜ್ ಹೇಳಿದರು.