Advertisement

ಮಾಲ್‌ ಸದೃಢತೆ ಪರೀಕ್ಷೆಗೆ ತಜ್ಞರ ಸಮಿತಿ

11:54 AM Jan 18, 2017 | Team Udayavani |

ಬೆಂಗಳೂರು: ಮಂತ್ರಿಮಾಲ್‌ ಕಟ್ಟಡದ ಗೋಡೆ ಕುಸಿತ ಪ್ರಕರಣದ ಹಿನ್ನೆಲೆಯಲ್ಲಿ ಮಾಲ್‌ನ ಸದೃಢತೆ ಪರೀಕ್ಷೆಗೆ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ನೇತೃತ್ವದಲ್ಲಿ ಆರು ಜನರ ತಜ್ಞರ ಸಮಿತಿ ರಚಿಸಲಾಗಿದೆ. ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಾನದಂಡಗಳ ಅನುಸಾರ ಕೂಲಂಕಷ ಪರೀಕ್ಷೆ ನಡೆಸಿ ಹದಿನೈದು ದಿನಗಳಲ್ಲಿ ತಾಂತ್ರಿಕ ವರದಿ ನೀಡಲು ಆದೇಶಿಸಿದ್ದು ಅಲ್ಲಿವರೆಗೆ ಮಾಲ್‌ “ಬಂದ್‌’ ಆಗಲಿದೆ. 

Advertisement

ಘಟನೆ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಮೇಯರ್‌, ಆಯುಕ್ತರು ಹಾಗೂ ಪಾಲಿಕೆಯ ಇತರೆ ಪ್ರಮುಖ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಸಾರ್ವಜನಿಕ ಹಿತದೃಷ್ಟಿಯಿಂದ ಮಾಲ್‌ನ ಸದೃಢತೆ ಪರೀಕ್ಷೆ ನಡೆಸುವ ಅಗತ್ಯತೆ ಹಿನ್ನೆಲೆಯಲ್ಲಿ 6 ಜನರ ತಜ್ಞರ ತಂಡ ರಚಿಸುವ ತೀರ್ಮಾನಕ್ಕೆ ಬರಲಾಯಿತು.

ವರದಿ ಬರುವ ವರೆಗೆ ಮಾಲ್‌ ಬಂದ್‌: ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್‌ ಪದ್ಮಾವತಿ, ಕಟ್ಟಡದ ಸದೃಢತೆ ವರದಿ ಬರುವವರೆಗೆ ಮಾಲ್‌ ಬಂದ್‌ ಮಾಡಲು ಸೂಚಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಪರೀಕ್ಷೆ ಮೂಲಕ ಮಾಲ್‌ನ ಸದೃಢತೆ ಸಾಭೀತಾಗುವವರೆಗೆ ಮಾಲ್‌ ಪುನಾರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ಸೋಮವಾರ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಸ್ಕ್ವೇರ್‌ ಮಾಲ್‌ನ 3ನೇ ಮಹಡಿಯ ಹಿಂಭಾಗದ ಗೋಡೆ ಕಾರಿಡಾರ್‌ ಸಮೇತ ಕುಸಿದು ಮಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿ ಗಾಯಗೊಂಡಿದ್ದರು. ಅಲ್ಲದೆ, ಇನ್ನೆರಡು ಅಂತಸ್ಥಿನ ಗೋಡೆಗಳೂ ಬಿರುಕುಬಿಟ್ಟಿದ್ದವು. ಈ ಸಂದರ್ಭದಲ್ಲಿ ಮಾಲ್‌ನಲ್ಲಿದ್ದ ಗ್ರಾಹಕರು ಗಾಬರಿಗೊಂಡು ಹೊರ ಬಂದಿದ್ದರಲ್ಲದೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ಮಂತ್ರಿಮಾಲ್‌ ಕಟ್ಟಡದೊಳಗಿನ ಮಳಿಗೆಗಳಷ್ಟೇ ಅಲ್ಲದೆ ಅಕ್ಕ ಪಕ್ಕದ ಅಪಾರ್ಟ್‌ ಮೆಂಟ್‌ ಹಾಗೂ ಇತರೆ ಕಟ್ಟಡಗಳ ಮಾಲೀಕರಲ್ಲೂ ಭಯ ಹುಟ್ಟಿಸಿತ್ತು.

ವ್ಯಾಪಾರಿಗಳ ಅಳಲು 
ಬೆಂಗಳೂರು:
ಮಂತ್ರಿಮಾಲ್‌ ಮಹಡಿಯ ಹಿಂಭಾಗದ ಗೋಡೆ ಕಾರಿಡಾರ್‌ ಸಮೇತ ಕುಸಿದ ಘಟನೆ ಹಿನ್ನೆಲೆಯಲ್ಲಿ ಮಾಲ್‌ “ಬಂದ್‌’ ಆಗಿರುವುದರಿಂದ ಅಲ್ಲಿ ಮಳಿಗೆ ತೆರೆದಿರುವ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಕಟ್ಟಡದ ಸದೃಢತೆ ವರದಿ ಬರುವವರೆಗೆ ಕನಿಷ್ಠ 15 ದಿನ ಮಾಲ್‌ ಬಂದ್‌ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದ್ದು, ಲಕ್ಷಾಂತರ ರೂ. ಬಂಡವಾಳ ಹೂಡಿ ಮಂತ್ರಿ ಮಾಲ್‌ನಲ್ಲಿ ಮಳಿಗೆಗಳನ್ನು ತೆರೆದಿರುವ ವ್ಯಾಪಾರಿಗಳಲ್ಲಿ ಆತಂಕ ಮನೆ ಮಾಡಿದೆ.

Advertisement

ತಕ್ಷಣಕ್ಕೆ ಹದಿನೈದು ದಿನಗಳ ಕಾಲ ಮಾಲ್‌ ಬಂದ್‌ ಆಗಲಿದೆಯಾದರೂ ತಜ್ಞರ ವರದಿಯಲ್ಲಿ ಕಟ್ಟಡ ವಾಸಯೋಗ್ಯವಲ್ಲ ಎಂಬುದು ಸಾಬೀತಾದರೆ ಕಟ್ಟಡ ಶಾಶ್ವತವಾಗಿ ಬಂದ್‌ ಮಾಡಬೇಕಾಗಿ ಬರಹುದು. ಹೀಗಾಗಿ, ವ್ಯಾಪಾರಿಗಳಲ್ಲಿ ಮುಂದೇನಾಗುವುದೋ ಎಂಬ ಭಯ ಕಾಡುತ್ತಿದೆ.  ಈ ಮಧ್ಯೆ, ತಮ್ಮ ಮಳಿಗೆಗಳಲ್ಲಿನ ಮಾಲು ಹೊರತರಲು ಬೇಡಿಕೆ ಇಟ್ಟ ವ್ಯಾಪಾರಿಗಳಿಗೆ ಸುರಕ್ಷತೆ ದೃಷ್ಟಿಯಿಂದ ಅವಕಾಶ ನೀಡಿಲ್ಲ. 

ಸಮಿತಿಯಲ್ಲಿ ಯಾರ್ಯಾರು? 
ಆಯುಕ್ತ ಮಂಜುನಾಥ್‌ ಪ್ರಸಾದ್‌ ನೇತೃತ್ವದ ಸಮಿತಿಯಲ್ಲಿ ಬಿಬಿಎಂಪಿ ನಗರ ಯೋಜನೆಯ ಅಪರ ನಿರ್ದೇಶಕ ತಿಪ್ಪಣ್ಣ ಅವರನ್ನು ಸದಸ್ಯರ ಕಾರ್ಯದರ್ಶಿಯಾಗಿ, ಆರ್‌.ವಿ.ಎಂಜನಿಯರಿಂಗ್‌ ಕಾಲೇಜು  ಸಹಾಯಕ ಪ್ರಾಧ್ಯಾಪಕ ಡಾ.ರಾಧಾಕೃಷ್ಣ, ಸಿವಿಲ್‌ ಏಡ್‌ ಟೆಕ್ನೋಕ್ಲಿನಿಕ್‌ನ  ಡಾ. ಜಯಸಿಂಹ, ತಾಂತ್ರಿಕ ನಿರ್ದೇಶಕ ಡಾ.ಆ ನಾಗೇಂದ್ರ ಸದಸ್ಯರಾಗಿದ್ದಾರೆ. 

ಅಂತಾರಾಷ್ಟ್ರಮಟ್ಟ ಪರೀಕ್ಷೆ 
ತಜ್ಞರ ಸಮಿತಿ ಕಟ್ಟಡ ನಿರ್ಮಾಣಕ್ಕೆ ಅನುಸರಿಸಲಾಗಿರುವ ತಂತ್ರಜ್ಞಾನ, ಬಳಕೆ ಮಾಡಿದ ಕಬ್ಬಿಣ, ಮರಳು, ಸಿಮೆಂಟ್‌ ಹಾಗೂ ಇತರೆ ಸಾಮಗ್ರಿಗಳ ಮಾಹಿತಿ ಪಡೆದು, ಅವುಗಳ ಮಾದರಿಗಳನ್ನು ಸಿವಿಲ್‌ ಲ್ಯಾಬ್‌ನಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳ ಅನುಸಾರ ಕೂಲಂಕಷ ಪರೀಕ್ಷೆ ನಡೆಸಿ ವಸ್ತುನಿಷ್ಠ ತಾಂತ್ರಿಕ ವರದಿಯನ್ನು 15 ದಿನಗಳಲ್ಲಿ ಪಾಲಿಕೆಗೆ ಸಲ್ಲಿಸಬೇಕು. 

ಪ್ರಾಥಮಿಕ ತನಿಖೆಯಲ್ಲಿ ದೋಷ  ಪತ್ತೆ
ಮಂತ್ರಿ ಮಾಲ್‌ ಬಗ್ಗೆ ಪಾಲಿಕೆ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕಟ್ಟಡದ ಸದೃಢತೆಯಲ್ಲಿ ದೋಷವಿರುವುದು ಪತ್ತೆಯಾಗಿದೆ. ಇದೇ ಹಿನ್ನೆಲೆಯಲ್ಲಿ ಮಾಲ್‌ಗೆ ನೀಡಲಾಗಿದ್ದ ಸ್ವಾಧೀನಾನುಭವ ಪತ್ರವನ್ನು ಪಾಲಿಕೆ ಹಿಂದಕ್ಕೆ ಪಡೆದಿತ್ತು. ಜತೆಗೆ ಇಡೀ ಕಟ್ಟಡದ ಸದೃಢತೆ ಸಮಗ್ರವಾಗಿ ಪರೀಕ್ಷೆ ಮಾಡುವಂತೆ ನಾಗರಿಕ ಸಂಘಟನೆಗಳಿಂದ ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ, ತಜ್ಞರ ಸಮಿತಿ ರಚಿಸಲಾಗಿದೆ.

ಮಾಲಿಕರ ವಿರುದ್ಧ ಪ್ರಕರಣ 
ಮಂತ್ರಿ ಮಾಲ್‌ ಗೋಡೆ ಕುಸಿತ ಪ್ರಕರಣ ಸಂಬಂಧ ನಿರ್ಲಕ್ಷ್ಯ ಆರೋಪದಡಿ ಮಾಲಿಕರ ವಿರುದ್ಧ ಮಲ್ಲೇಶ್ವರಂ ಪೊಲೀಸರು ಮಂಗಳವಾರ ಎಫ್ಐಆರ್‌ ದಾಖಲಿಸಿದ್ದಾರೆ.  ಐಪಿಸಿ 337 ಪ್ರಕಾರ ಮಾಲ್‌ನ  ಪ್ರಕರಣ ದಾಖಲಿಸಿಕೊಂಡಿದ್ದೇವೆ. ಬಿಬಿಎಂಪಿ ವರದಿ ಬಳಿಕ ತಪ್ಪಿತಸ್ಥರ ಹೆಸರು ಎಫ್ಐಆರ್‌ನಲ್ಲಿ ಸೇರಿಸುವುದಾಗಿ   ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಮಂತ್ರಿ ಆಡಳಿತ ಮಂಡಳಿ ಸ್ಪಷ್ಟನೆ
ಗೋಡೆ ಕುಸಿತದ ಘಟನೆ ಹಿನ್ನೆಲೆಯಲ್ಲಿ ಮಂತ್ರಿ ಮಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಸಿಬ್ಬಂದಿ ಹಾಗೂ ಸಹಭಾಗಿಗಳನ್ನು ಅಲ್ಲಿಂದ ಸ್ಥಳಾಂತರಿಸಿ ಸುರಿಕ್ಷಿತ ಕ್ರಮ ಕೈಗೊಳ್ಳಲಾಗಿದೆ ಎಂದು ಮಂತ್ರಿಮಾಲ್‌ ಆಡಳಿತ ಮಂಡಳಿ ತಿಳಿಸಿದೆ. ಎಸಿ ಪೈಪ್‌ಗ್ಳಿಂದ ನೀರು ಸೋರಿಕೆಯಾಗಿ ಈ ಅವಘಡ ಸಂಭವಿಸಿರಬಹುದು. ಈ ಸಂಬಂಧ ತಜ್ಞರಿಂದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next