Advertisement

ಮೌನ -ಸ್ತಬ್ಧತೆಯ ನಡುವೆ ಅರಳಿದ ಚಕ್ರವ್ಯೂಹ

03:45 PM Apr 07, 2017 | |

ಮಂಗಳೂರಿನ ಶ್ರೀರಾಮಕೃಷ್ಣ ಆಶ್ರಮ ಮತ್ತು ವಿಭಿನ್ನ ಮಂಗಳೂರು ಇವರ ಆಶ್ರಯದಲ್ಲಿ ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣ ದಲ್ಲಿ ಇತ್ತೀಚೆಗೆ ಜರಗಿದ “ಥಿಯೇಟರ್‌ ಯಕ್ಷ’ದ “ಚಕ್ರವ್ಯೂಹ’ ಯಕ್ಷ ರೂಪಕದಲ್ಲಿ ಪ್ರಧಾನ ಪಾತ್ರಗಳಾಗಿ ತೋರಿದ್ದು ನೃತ್ಯದ ಮೂಲಾಧಾರವಾದ ಸ್ತಬ್ಧತೆ ಮತ್ತು ಶಬ್ದದ ಮೂಲಬಿಂದುವಾದ ಮೌನ. ಸುಭದ್ರೆಯ ಪ್ರವೇಶಕ್ಕೆ ಬಳಸಿದ ಮಂದ ಬೆಳಕು, ಜತೆಗೆ ಅತಿ ವಿಳಂಬ ಲಯದ ಏಕತಾಳದ ಆಲಾಪನೆ ಪ್ರೇಕ್ಷಕರಿಗೆ ಸುಭದ್ರೆಯ ಅಂತರಂಗದಲ್ಲಾಗುತ್ತಿರುವ ತಳಮಳವನ್ನು ಕಟ್ಟಿಕೊಟ್ಟದ್ದು ಸತ್ಯವಲ್ಲವೇ? ಆಗ ಬಳಸಿದ ತೆರೆಯ ಬಣ್ಣವೂ ಆ ತೆರೆಯನ್ನು ಹಿಡಿಯುವವರೂ ವಿಳಂಬ ಲಯಕ್ಕೆ ಸ್ಪಂದಿಸುತ್ತ ಇದ್ದುದನ್ನು ಗಮನಿಸಬೇಕು. 

Advertisement

ವಿಳಂಬ ಕಾಲದ ನೃತ್ತದ ಸಾಧ್ಯತೆ – ಅದರ ಸೌಂದರ್ಯದ ಅನ್ವೇಷಣೆಯೇ “ಥಿಯೇಟರ್‌ ಯಕ್ಷ’ದ ಉದ್ದೇಶ. “ಈ ಹುಡುಕಾಟದ ಹಾದಿಯಲ್ಲಿ ಸೋಲೂ ಗೆಲುವೇ’- ಇದು ಥಿಯೇಟರ್‌ ಯಕ್ಷದ ಹಿಂದೆ ದುಡಿಯುತ್ತಿರುವ ಸಮಾನಮನಸ್ಕ ಪರಿವರ್ತನಶೀಲ ಯಕ್ಷಾಸಕ್ತರ ಅಂಬೋಣ. ನೃತ್ಯಗಾರನು ತನ್ನ ಇಡೀ ದೇಹ, ಭಾವ, ಬುದ್ಧಿಯನ್ನು ಆ ಕ್ಷಣದಲ್ಲಿ ನಡೆಯುತ್ತಿರುವ ಗಾನ ಮತ್ತು  ವಾದನದ ಜತೆಗೆ ಮಿಳಿತಗೊಳಿಸಿ ನೃತ್ಯವನ್ನು ಪ್ರಸ್ತುತಿಗೊಳಿಸಬಹುದು ಎನ್ನುವುದು ವಿಳಂಬ ಕಾಲದ ನಾಟ್ಯದ ಅನುಕೂಲ. ಕೈ, ಪಾದ, ಬಾಹುಗಳು, ಕಟಿಗಳನ್ನು ಅಲ್ಲಿ ರೂಪಿಸಬಹುದಾದ ರೇಖೆಗಳಿಂದ; ಕಣ್ಣುಗಳು, ಹುಬ್ಬುಗಳು, ಕೈಬೆರಳುಗಳು- ಎಲ್ಲವನ್ನೂ ರಸೋತ್ಕರ್ಷಣೆಗೆ ತೊಡಗಿಸಿಕೊಳ್ಳಬಹುದು. ಥಿಯೇಟರ್‌ ಯಕ್ಷದ ಯಕ್ಷ ಪ್ರಸ್ತುತಿಗಳಲ್ಲಿ ಪ್ರದರ್ಶನದಿಂದ ಪ್ರದರ್ಶನಕ್ಕೆ ಇದು ಆವಿಷ್ಕಾರಗೊಳ್ಳುತ್ತ, ಪರಿಷ್ಕಾರಗೊಳ್ಳುತ್ತ ಬರುತ್ತಿರುವುದನ್ನು ಗಮನಿಸಬಹುದು. ಹಾಗಾಗಿಯೇ ಈ ಚಕ್ರವ್ಯೂಹವೇ ಆಗಲಿ, ಅದರ ಮುಂದಿನ ಪ್ರದರ್ಶನದಲ್ಲಿ ಇನ್ನಷ್ಟು ಚೆನ್ನಾದುದನ್ನು ನಾವು ನಿರೀಕ್ಷಿಸಬಹುದು. 

ಯಕ್ಷಗಾನದಲ್ಲಿ ಉಪಯೋಗಿಸಲ್ಪಡುವ ಬಾಯಿತಾಳ ಗಳ ಸಮರ್ಥ ಬಳಕೆ ಈ ಯಕ್ಷರೂಪಕದಲ್ಲಿ ತೋರಿಬಂದ ಇನ್ನೊಂದು ಅಂಶ. ಕೇವಲ ಪೂರ್ವರಂಗದಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಮತ್ತು ಈಗಿನ ಮಾಮೂಲಿ ಯಕ್ಷಗಾನ ಗಳಲ್ಲಿ ಬಹುತೇಕ ಮರೆಯಾಗಿ ಹೋಗಿರುವ ತಕತಕಿಟದಿಂದ ತೈ , ತಾಹತದಿಂದ ತೈ – ದ್ರೋಣನನ್ನು ಕೌರವಾದಿಗಳು ನಿರೀಕ್ಷಿಸುವಾಗ ಬಳಸಿದ್ದು ಪರಿಣಾಮಕಾರಿಯಾಗಿತ್ತು. ಕೌರವಾದಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮುನ್ನಿನ ದಸ್ತು ಮತ್ತು ಅದಕ್ಕೆ ಈ ಯಕ್ಷರೂಪಕದಲ್ಲಿ ಬಳಸಿದ ಎರಡಾವರ್ತ ಮಟ್ಟೆ ತಾಳದ “ಕ್ಟಾಂಗ್ರಡ್ಡಡ್ಡಾ ಕ್ಟಾಂಗ್ರಡ್ಡಡ್ಡಾ ಡ್ಡಾಂಗ್‌’ -ಇದು ಅನ್ಯತ್ರ ಅಲಭ್ಯ. ಸಂಕುಲ ಯುದ್ಧದಲ್ಲಿ ಬಳಸಿದ ತ್ವರಿತ ತ್ರಿವುಡೆ, ಝಂಪೆ ತಾಳ, ತೈತ ತಕತಗಳ ಬಳಕೆ ಸೌಂದರ್ಯವನ್ನು ಒದಗಿಸಿದೆ. “ಚಕ್ರವ್ಯೂಹ’ ಪ್ರಸ್ತುತಿಗೆ ಮುನ್ನ ನಡೆದ ಅಭ್ಯಾಸ ಪ್ರಕ್ರಿಯೆಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ಅಂಶಗಳನ್ನು ನಿರ್ದೇಶಕರ ಪರಿಕಲ್ಪನೆಗಳ ಜತೆಗೆ ಭಾಗವಹಿಸಿದ ಪ್ರತೀ ಕಲಾವಿದರ ಸೂಚನೆ ಮತ್ತು ಕಲ್ಪನೆಗಳನ್ನು ಸಮನ್ವಯಗೊಳಿಸಿ, ಒಟ್ಟು ಆನ್ವಯಿಕ ಸಾಧ್ಯತೆಯನ್ನು ಪರಿಗಣಿಸಿ ರೂಪಕದ ಪ್ರಸ್ತುತಿಯಲ್ಲಿ ಬಳಸಲಾಗಿದೆ. 

ತೆರೆ ಹಿಡಿಯುವವರ ವಸ್ತ್ರವಿನ್ಯಾಸ, ಮುಖವರ್ಣಿಕೆ ಯಿಂದ ತೊಡಗಿ ಭಾಗವತರು ರಂಗದಲ್ಲಿ ಹೇಗಿದ್ದರು ಎಂಬಲ್ಲಿಯ ತನಕ ಇಡಿಯ ರೂಪಕದ ಪ್ರಸ್ತುತಿಯ ಆಳದಲ್ಲಿ ಗಾಢವಾಗಿ ಇದ್ದ ಶಿಸ್ತು ಗಮನಾರ್ಹ. 

ಸಾರಥಿ ಮತ್ತು ಅಭಿಮನ್ಯುವಿನ ಪ್ರವೇಶ ಸಂದರ್ಭ. ಮದ್ದಳೆಯ ಕ್ಷೀಣವಾದ ಕೇವಲ ಬಲದ ನುಡಿತದಿಂದ ಶುರುವಾಗಿ, ಅನಂತರ ನಿಧಾನಕ್ಕೆ ಎಡದ ನುಡಿತಗಳು ಜತೆ ಸೇರಿ ಮುಂದುವರಿಯುವ ತಾಂ ತಾಂ ತಾಂ ತಕದಿಮಿತಕದಿಮಿ; ಮುಂದೆ ಮಿದುವಾದ ಚೆಂಡೆಯ ಕಣಕಣದೊಂದಿಗೆ ಮಿಳಿತವಾಗಿ ವೇಷಗಳ ಪ್ರವೇಶ ರಂಗದ ಮಧ್ಯಕ್ಕೆ ಬರುವಾಗ, ಗಟ್ಟಿಗೊಂಡು ಎಲ್ಲೋ ದೂರದಿಂದ ನಮ್ಮ ಸನಿಹಕ್ಕೆ ಬಂದಂತಹ ಅನುಭವವನ್ನು ಕಟ್ಟಿ ಕೊಡುವ ಪ್ರಯತ್ನದ ರಂಗ ಕ್ರಿಯೆ ಅನನ್ಯ. ಇದಕ್ಕೆ ಎರಡೂ ಪಾತ್ರಧಾರಿಗಳು ಕುಣಿದ ಹುಡಿ (ಕಿರು ಹೆಜ್ಜೆಯ) ನಾಟ್ಯ ಅಪೂರ್ವವಾಗಿತ್ತು. ರಂಗ ವಿನ್ಯಾಸಗಳೆಲ್ಲ ನಿರ್ದೇಶಕ ಸಂಜೀವ ಸುವರ್ಣರ ಸೃಜನಶೀಲ ಕಲ್ಪನೆಗಳು. 

Advertisement

“ಚಕ್ರವ್ಯೂಹ’ದಂತಹ ಥಿಯೇಟರ್‌ ಯಕ್ಷದ ನೃತ್ಯರೂಪಕಗಳ ಆತ್ಮವು ನಿಧಾನ ಲಯದ ಬಳಕೆಯಲ್ಲಿದೆ. ಅಭಿಮನ್ಯುವಿನ ನಿಷðಮಣದ ವಿಷಾದ ಸ್ಥಾಯೀಭಾವ ರೂಪಕದ ಉದ್ದಕ್ಕೂ ಅಂತಃಸೆಲೆಯಾಗಿ ಹರಿಯುತ್ತದೆ, ರೂಪಕದ ಇನ್ನುಳಿದ ಸನ್ನಿವೇಶಗಳಲ್ಲಿ ವಿವಿಧ ರಸಗಳನ್ನು ಉತ್ಪತ್ತಿಗೊಳಿಸುವ ಸಾಧ್ಯತೆಗಳನ್ನು ನಿಧಾನ ಲಯದ ಬಳಕೆ ಪುಷ್ಟಿಗೊಳಿಸುತ್ತದೆ. ವಿವಿಧ ಸನ್ನಿವೇಶಗಳು, ಅವು ಸೃಜಿಸುವ ಭಾವಗಳೆಲ್ಲ ಜತೆಯಾಗಿ ಹರಿದು ಜತೆ ಸೇರುವುದು ಕೊನೆಯ ಅಭಿಮನ್ಯು ಧರೆಗೊರಗಿದ ಕ್ಷಣದಲ್ಲಿ. ಆಗ ಅಲ್ಲಿ ವಿಷಾದ ಸಾಗರದ ತೆರೆಗಳು ಎದ್ದೆದ್ದು ಹೊರಳಿ ಮರಳುತ್ತವೆ. ಅದು ಗಾಜಿನ ಮನೆಯೊಂದು ಫ‌ಳ್ಳನೆ ಒಡೆದು ಚೂರು ಚೂರಾಗಿ ನೆಲಕ್ಕೆ ಕುಸಿದಂತಹ ಅನುಭವ. ಅದೇ ಕಾರಣಕ್ಕೆ ಅಭಿಮನ್ಯು ಬಿದ್ದ ಕ್ಷಣಕ್ಕೆ ಚೆಂಡೆ, ಮದ್ದಳೆಗಳೆಲ್ಲ ಸ್ತಬ್ಧಗೊಂಡು ಕೊನೆಗೆ ಶ್ರುತಿಯೂ ಮೌನವಾಗಿ ಪಾತ್ರಧಾರಿಗಳೆಲ್ಲ ಕೇವಲ ಮನುಷ್ಯರಾಗಿ ರಂಗದಿಂದ ಆಚೆಗೆ ಹೆಜ್ಜೆ ಹಾಕುತ್ತಾರೆ. ಬದುಕಿನಲ್ಲಿ ಕಟ್ಟಿಕೊಂಡದ್ದೆಲ್ಲ ಸರಸರನೆ ಕುಸಿದ ಬಳಿಕ ಏನೂ ಇಲ್ಲ ಎಂಬ ಶೂನ್ಯ ಸಂಪಾದನೆಯ ವಿಷಾದ ಈ ರೂಪಕವನ್ನು ವೀಕ್ಷಿಸುತ್ತ ಪ್ರೇಕ್ಷಕನ ಮನಸ್ಸನ್ನು ಮಿಡಿದು ಕೊನೆಯಲ್ಲೊಂದು ಕಣ್ಣೀರ ಹನಿ ಜಾರಿದರೆ ಅಚ್ಚರಿಯಿಲ್ಲ.

ಕೃಷ್ಣಪ್ರಕಾಶ ಉಳಿತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next