Advertisement
ಕಾರ್ಕಳದಲ್ಲೇ ಇದ್ದುಕೊಂಡು ಖಾಸಗಿ ಕಾಲೇಜಿನಲ್ಲಿ ಎಂಬಿಎ ಕಲಿಯುತ್ತಿರುವ ದೀಕ್ಷಾ (22) ಶುಕ್ರವಾರ ಸಂಜೆ ಊರಿಗೆ ಆಗಮಿಸಿದ್ದು ದೇರಳಕಟ್ಟೆಯ ಕ್ಷೇಮ ಆಸ್ಪತ್ರೆ ಬಳಿ ಬಸ್ಸಿನಿಂದ ಇಳಿದು ಬಗಂಬಿಲದ ಮನೆ ಕಡೆ ತೆರಳುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಸುಶಾಂತ್ ಮನೆಯಿಂದ ಅನತಿ ದೂರದಲ್ಲಿ ಆಕೆಯನ್ನು ಅಡ್ಡಗಟ್ಟಿ ಚೂರಿ ಯಿಂದ 12 ಬಾರಿ ಇರಿದಿದ್ದಾನೆ. ಬಳಿಕ ತನ್ನ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆಸ್ಪತ್ರೆ ಸಿಬಂದಿ, ಸ್ಥಳೀಯರು ಧಾವಿಸಿ ಬಂದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು.
ಸಣ್ಣಪುಟ್ಟ ಗಲಾಟೆಗಳಲ್ಲಿ ಭಾಗವಹಿಸುತ್ತಿದ್ದ ಸುಶಾಂತ್ ಜಪಾನ್ ಮಂಗ ಯಾನೆ ರಾಜೇಶ್‌ನ ಸ್ನೇಹಿತನಾಗಿದ್ದ. 2016ರಲ್ಲಿ ಹೋಂಸ್ಟೇ ದಾಳಿಯಲ್ಲಿ ಆರೋಪಿಯಾಗಿದ್ದ ಸುಭಾಷ್ ಪಡೀಲ್ ಮತ್ತು ಆತನ ತಂಡದ ಸದಸ್ಯರೊಂದಿಗೆ ನ್ಯಾಯಾಲಯದ ಆವರಣದಲ್ಲಿ ಜಪಾನ್ ಮಂಗ ಯಾನೆ ರಾಜೇಶ್ ನೇತೃತ್ವದಲ್ಲಿ ನಡೆದ ಹೊಡೆದಾಟ ಪ್ರಕರಣ ಮತ್ತು ಚೂರಿ ಇರಿತ ಪ್ರಕರಣದಲ್ಲಿ ಜಪಾನ್ ಮಂಗನನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಹೋಗುವಲ್ಲಿ ಇದೇ ಸುಶಾಂತ್ ಭಾಗಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬಂಧಿತನಾಗಿ ಜೈಲು ಪಾಲಾಗಿದ್ದ. ಈ ಸಂದರ್ಭದಲ್ಲಿ ಬಂದರು ಠಾಣೆಯಲ್ಲಿ ಸುಶಾಂತ್ ವಿರುದ್ಧವೂ ರೌಡಿಶೀಟರ್ ಹಾಕಲಾಗಿತ್ತು. ಈ ಘಟನೆಯ ಬಳಿಕವೂ ದೀಕ್ಷಾ ಆತನನ್ನು ದೂರ ಮಾಡಿದ್ದು, ಅ ಕಾರಣಕ್ಕೂ ಆಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕ್ಷೇಮ ವೈದ್ಯರ ತ್ವರಿತ ಸ್ಪಂದನೆ
ಗಂಭೀರ ಸ್ಥಿತಿಯಲ್ಲಿ ದಾಖಲಾದ ದೀಕ್ಷಾಗೆ ಚಿಕಿತ್ಸೆ ನೀಡಲು ವಿವಿಧ ವಿಭಾಗಗಳ ತಜ್ಞ ವೈದ್ಯರ ತಂಡ ನಿರಂತರ ಶ್ರಮಿಸಿದೆ. ನಿಟ್ಟೆ ವಿ.ವಿ.ಯ ವಿದ್ಯಾರ್ಥಿಗಳು, ದೀಕ್ಷಾಳ ಸಂಬಂಧಿಕರು ಮತ್ತು ಸ್ಥಳೀಯರು ಆಕೆಗೆ ರಕ್ತ ನೀಡಿದರು. ಶಸ್ತ್ರಚಿಕಿತ್ಸೆ ನಡೆದಿದ್ದು ತೀವ್ರ ನಿಗಾದಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
Related Articles
ಕೊಲೆ ಮಾಡುವ ಪೂರ್ವ ಯೋಜನೆಯಂತೆ ಆಗಮಿಸಿದ್ದ ಸುಶಾಂತ್ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಮೂಲಕ ಮೊದಲೇ ಸುಳಿವು ನೀಡಿದ್ದ. ಮಧ್ಯಾಹ್ನ 12.09ರ ವೇಳೆಗೆ ಸ್ಟೇಟಸ್ ಬದಲಾಯಿಸಿದ್ದ ಆತ “ಲವ್ ಯು ದೀಚು… ಮಿಸ್ ಯು ಬಾಬಾ.. ಲವ್ ಯು ಲಾಟ್’ ಎಂದು ಬರೆದುಕೊಂಡು ಇಬ್ಬರು ಜತೆಗಿದ್ದ ಫೋಟೋಗಳನ್ನು ಹಾಕಿದ್ದ. ಬಳಿಕ ಗಾಂಜಾ ಸೇವಿಸಿ ಕ್ಷೇಮ ಬಸ್ ನಿಲ್ದಾಣದಲ್ಲಿ ಆಕೆಯ ಬರುವಿಕೆಗಾಗಿ ಕಾಯುತ್ತಿದ್ದ. ಆತನ ಇರವನ್ನು ತಿಳಿಯದ ದೀಕ್ಷಾ ಬಸ್ಸಿನಿಂದ ಇಳಿದು ಮನೆ ಕಡೆ ಹೋಗುತ್ತಿದ್ದಾಗ ಕೃತ್ಯ ಎಸಗಿದ್ದಾನೆ.
Advertisement
ಡ್ಯಾನ್ಸ್ ತರಗತಿಯಲ್ಲಿ ಪರಿಚಯಸುಶಾಂತ್ ಶಾಲೆ ಕಾಲೇಜುಗಳಿಗೆ ಬ್ರೇಕ್ ಡ್ಯಾನ್ಸ್ ಕಲಿಸಲು ಹೋಗುತ್ತಿದ್ದು, ದೀಕ್ಷಾಳ ಡ್ಯಾನ್ಸ್‌ಗೆ ಕೊರಿಯೋಗ್ರಫಿ ಮಾಡಿದ್ದ. ಇದೇ ಕಾರಣದಿಂದ ಇಬ್ಬರೂ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಸ್ನಾತಕೋತ್ತರ ಪದವಿಗೆ ಕಾರ್ಕಳಕ್ಕೆ ತೆರಳಿದ ಬಳಿಕ ಯಾಕೋ ಇಬ್ಬರಲ್ಲೂ ವೈಮನಸ್ಸು ಆರಂಭವಾಗಿತ್ತು. ಕೆಲ ತಿಂಗಳ ಹಿಂದೆ ಸ್ನೇಹಿತನೊಂದಿಗೆ ಕಾರಿನಲ್ಲಿ ಕಾರ್ಕಳಕ್ಕೆ ತೆರಳಿದ್ದ ಸುಶಾಂತ್ ದಿಕ್ಷಾಳನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಬಲಾತ್ಕರಿಸಿದ್ದು, ಕಾರ್ಕಳ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆತನನ್ನು ಠಾಣೆಯಲ್ಲೇ ಕುಳ್ಳಿರಿಸಿ ಹೆತ್ತವರ ಎದುರು ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದರು. ಇದೇ ಕಾರಣದಿಂದ ದೀಕ್ಷಾಳನ್ನು ಕೊಲೆ ಮಾಡುವ ಯೋಜನೆ ರೂಪಿಸಿದ್ದ ಎನ್ನಲಾಗಿದೆ. ಹಲವು ಇರಿತಗಳಿಂದಾಗಿ ದೀಕ್ಷಾಳ ದೇಹಕ್ಕೆ ಬಲವಾದ ಏಟು ಬಿದ್ದಿದ್ದು ಆಸ್ಪತ್ರೆಯ ತಜ್ಞ ವೈದ್ಯರ ತಂಡದ ಸಹಕಾರದಿಂದ ಸಕಾಲದಲ್ಲಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮುಂದಿನ 48ರಿಂದ 72 ಗಂಟೆಗಳ ಸಮಯ ಅಮೂಲ್ಯವಾಗಿದ್ದು ವೈದ್ಯರು 24 ಗಂಟೆಗಳ ಕಾಲ ನಿಗಾ ವಹಿಸುತ್ತಿದ್ದಾರೆ.
- ಡಾ| ನರೇಶ್ ರೈ, ದೀಕ್ಷಾಳಿಗೆ ಚಿಕಿತ್ಸೆ ನೀಡುತ್ತಿರುವ ಕ್ಷೇಮ ವೈದ್ಯರು ನ್ಯಾಯಾಲಯ ಆವರಣದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ವಿರುದ್ಧ ಈ ಹಿಂದೆಯೇ ಬಂದರು ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದೆ. ಈಗಲೂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ವಿದ್ಯಾರ್ಥಿನಿ ವಿಚಾರದಲ್ಲಿ ಕಾರ್ಕಳ ಠಾಣೆಯಲ್ಲೂ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
– ಹನುಮಂತರಾಯ, ಡಿಸಿಪಿ ಮಂಗಳೂರು ಕಮಿಷನರೆಟ್