ಮೈಸೂರು: ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೈಸೂರು ಅಭಿವೃದ್ಧಿಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಇಲ್ಲಿಗೆ ಏನೆಲ್ಲ ಬೇಕು ಎಂಬ ಬಗ್ಗೆ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಪಟ್ಟಿ ಸಿದ್ಧಪಡಿಸುತ್ತೇವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮೈಸೂರಿನಲ್ಲಿ ಶ್ರೀಗಂಧದ ವಸ್ತುಸಂಗ್ರಹಾಲಯಯನ್ನು ಲೋಕಾರ್ಪಣೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮೈಸೂರಿಗೆ ಏನೇನು ಬೇಕು ಎಂಬ ಬಗ್ಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ಹಾಗೂ ಎಲ್. ನಾಗೇಂದ್ರ ಅವರು ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಎಲ್ಲವನ್ನೂ ಚರ್ಚಿಸಿ ನಾವು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಅಲ್ಲದೆ, ಕೋವಿಡ್ ಕಾರಣಕ್ಕೆ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಗಮನಹರಿಸಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ:ಮುಂದುವರಿದ ಖಾತೆ ಸಂಗೀತ ಕುರ್ಚಿ: ಮತ್ತೆ ಸಚಿವರ ಖಾತೆ ಬದಲಾವಣೆಗೆ ಮುಂದಾದ ಸಿಎಂ!
ಮೈಸೂರಿನಲ್ಲಿ ಆಸ್ಪತ್ರೆಗಳಿಗೆ ಅಗತ್ಯವಾಗಿ ಬೇಕಾದ ವೆಂಟಿಲೇಟರ್ ಸೇರಿದಂತೆ ಇನ್ನಿತರ ಕಡೆ ಅಭಿವೃದ್ಧಿಗಾಗಿ ಸಂಸದರು, ಶಾಸಕರೊಂದಿಗೆ ಸಭೆ ಸೇರಿ ಪಟ್ಟಿ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು.
ರೈತರ ಪ್ರತಿಭಟನೆಗೆ ಸರ್ಕಾರದ ವಿರೋಧವಿಲ್ಲ: ರೈತರು ಪ್ರತಿಭಟನೆ ಮಾಡಲು ಸರ್ಕಾರದಿಂದ ಯಾವುದೇ ವಿರೋಧವಿಲ್ಲ. ಆದರೆ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಓಡಿಸಲು ಆಗುವುದಿಲ್ಲ. ಹಾಗೆ ಮಾಡಿದರೆ ಸಂಚಾರ ಸ್ಥಗಿತಗೊಳ್ಳುತ್ತದೆ. ಜನ ಸಾಮಾನ್ಯರಿಗೆ ರೈತರು ತೊಂದರೆ ಕೊಡುವ ಕೆಲಸ ಮಾಡುವುದಿಲ್ಲ ಎಂದು ನಾವು ನಂಬಿದ್ದೇವೆ. ಇನ್ನು ದೆಹಲಿಯಲ್ಲಿ ಅನುಮತಿ ಕೊಟ್ಟಿದ್ದರೂ ಸಹ ಅಲ್ಲಿಯ ರಸ್ತೆ ಬೇರೆ, ಬೆಂಗಳೂರಿನ ರಸ್ತೆಯ ಚಿತ್ರಣವೇ ಬೇರೆ. ಇಲ್ಲಿ ಒಮ್ಮೆಗೆ ಸಾವಿರಾರು ಟ್ರ್ಯಾಕ್ಟರ್ ಗಳು ಬಂದರೆ ಎಲ್ಲವೂ ಸ್ತಬ್ಧವಾಗಲಿದೆ. ಹೀಗಾಗಿ ರೈತರು ಸಹಕರಿಸಲಿ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.