ಮೈಸೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮನೆ ಹಾಳು ಮಾಡಿದ ಮಹಾನ್ ನಾಯಕ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ರಾಜ್ಯಕ್ಕೆ ಇದೆ. ಅದರಲ್ಲಿ ನಾನು ಸಹಾ ಒಬ್ಬ. ಶೀಘ್ರದಲ್ಲಿ ಆ ಮಹಾನ್ ನಾಯಕ ಯಾರು ಎಂದು ಗೊತ್ತಾಗಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಆದರೆ ಮಹಾನ್ ನಾಯಕ ಹೇಳಿಕೆ ಬಗ್ಗೆ ಡಿ.ಕೆ. ಶಿವಕುಮಾರ್ ತಮ್ಮನ್ನೇ ಏಕೆ ಮುಟ್ಟಿಕೊಳ್ಳುತ್ತಿದ್ದಾರೆ. ಎಲ್ಲಾ ಪಕ್ಷದಲ್ಲೂ ಮಹಾನ್ ನಾಯಕರಿದ್ದಾರೆ. 10 ಮತ ಹಾಕಿಸುವವನೇ ಈಗ ಮಹಾನ್ ನಾಯಕನೇ. ಅದರಲ್ಲಿ ಇವರು ನಾವು ಅಂತಾ ಏಕೆ ಅಂದುಕೊಳ್ಳಬೇಕು ಎಂದು ಟೀಕಿಸಿದರು.
ಇಂತಹ ಸಿ.ಡಿ ಮಾಡಿ ರಾಜ್ಯ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹಂಚಿದ್ದಾರೆ. ಮನೆ ಮನಗಳನ್ನು ಮುರಿದಿದ್ದಾರೆ. ಇಂತಹ ಮನೆ ಮುರುಕ ಪುಣ್ಯಾತ್ಮ ಯಾರು ಅನ್ನೋದು ಗೊತ್ತಾಗಬೇಕಿದೆ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ಡ್ರಗ್ಸ್ ವಿರೋಧಿ ನೀತಿ ಜಾರಿ ಶೀಘ್ರ : ಗೃಹ ಸಚಿವ ಬೊಮ್ಮಾಯಿ
ನ್ಯಾಯಾಲಯಕ್ಕೆ ಹೋದ ಸಚಿವರಿಂದ ಸದನದಲ್ಲಿ ಉತ್ತರ ಪಡೆಯುವುದಿಲ್ಲ ಎಂಬ ಕಾಂಗ್ರೆಸ್ ಪಕ್ಷದ ನಾಯಕರ ತೀರ್ಮಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ವೈಯಕ್ತಿಕ ತೇಜೋವಧೆ ತಪ್ಪಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದೆವು. ಈ ಹಿಂದೆ ಮೇಟಿ ಪ್ರಕರಣದಲ್ಲಿ ಅವರ ಮಾನ ಹರಾಜಾಯ್ತು. ಮನೆ ಮನಗಳು ಮುರಿದು ಹೋದವು. ಮಾನ ಮರ್ಯಾದೆ ಎಲ್ಲವೂ ಹೋಯಿತು. ಮೂರು ತಿಂಗಳ ನಂತರ ಅದು ನಕಲಿ ಸಿಡಿ ಎಂದು ಸಾಬೀತಾಗಿತ್ತು. ಆದರೆ ಹೋದ ಮಾನ ವಾಪಸ್ಸು ಬಂತೇ? ಇದೇ ಕಾರಣಕ್ಕೆ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟನೆ ನೀಡಿದರು.