ಮಾಗಡಿ: ಎಸ್ಟಿ, ಎಸ್ಟಿ ಸಮುದಾಯಗಳು ಸಾಮಾಜಿಕ ನ್ಯಾಯ ಮತ್ತು ಸೌಲಭ್ಯಗಳಿಂದ ವಂಚಿತರಾಗ ಬಾರದು. ಇದನ್ನು ಕಾಪಾಡುವ ಜವಾಬ್ದಾರಿ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳ ಮೇಲಿದೆ. ಮೂರು ತಿಂಗಳಿಗೊಮ್ಮೆ ಸಭೆ ಕರೆದು ಚರ್ಚಿಸಿಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಎಸ್ಸಿ, ಎಸ್ಟಿ ಕುಂದುಕೊರತೆಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕ ಸ್ಮಶಾನ: ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲ, ಕೂಡಲೇ ಸಾರ್ವಜನಿಕ ಸ್ಮಶಾನ ಎಂದು ಪರಿಗಣಿಸಿ ಎಂದು ಮುಖಂಡ ದೊಡ್ಡಿ ಲಕ್ಷ್ಮಣ್ ಸಲಹೆ ನೀಡಿದರು. ಬೆಳಗುಂಬ ಗ್ರಾಮದಲ್ಲಿ ಸ್ಮಶಾನ ಎಂದು ಪಹಣಿ ಬರುತ್ತಿದೆ. ಆದರೆ, ಸ್ಮಶಾನ ಎಲ್ಲಿದೆ ಎಂದು ಸರ್ವೆಇಲಾಖೆ ಅಳತೆ ಮಾಡಿಕೊಡಬೇಕು ಮತ್ತು ಹರ್ತಿಯಲ್ಲಿ ಸ್ಮಶಾನಕ್ಕೆ ನೀಡಿರುವ ಭೂಮಿ ಕಲ್ಲುಬಂಡೆಯಿಂದ ಕೂಡಿದೆ. ಅದನ್ನು ಬದಲಾಯಿಸಿ ಸರ್ವೆ ನಂ.66ರಲ್ಲಿ ಗುರುತಿಸಿ ಅಳತೆ ಮಾಡಿಸಿಕೊಡುವಂತೆ ಬೆಳಗುಂಬದ ನರಸಿಂಹಯ್ಯ ಶಾಸಕರಲ್ಲಿ ಮನವಿ ಮಾಡಿದರು. ನಾಗಶೆಟ್ಟಿಹಳ್ಳಿಯಲ್ಲಿ 6 ಗುಂಟೆ ಸ್ಮಶಾನವಿದೆ. ಅದನ್ನು ಕೆಲವರು ಉಳಿಮೆ ಮಾಡುತ್ತಿದ್ದಾರೆ. ಹೊಸಹಳ್ಳಿ ಗ್ರಾಮದಲ್ಲಿ ಸ್ಮಶಾನವಿಲ್ಲ, ಗೊಲ್ಲಹಳ್ಳಿಯಲ್ಲಿ ಕೆರೆಯಲ್ಲಿ ಶವ ಸಂಸ್ಕಾರ ಮಾಡುತ್ತಿದ್ದು, ಮಳೆ ನೀರು ಬಂದರೆ ಕೆರೆಯಲ್ಲಿ ತೇಲುತ್ತಿವೆ. ದಲಿತರಿಗೆ ಬೇರೆಡೆ ಸ್ಮಶಾನ ನೀಡುವಂತೆ ಮಹಿಳಾ ಮುಖಂಡರಾದ ಎಸ್.ಜಿ.ವನಜಾ ಶಾಸಕರ ಮನವಿ ಮಾಡಿದರು.
ತಾಲೂಕಿನಲ್ಲಿ 33.24 ಎಕರೆ ಸ್ಮಶಾನ ಜಾಗವನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ಕಳಿಸಲಾಗಿದೆ. ಈಗಾಗಲೇ 15.24.ಎಕರೆ ಜಮೀನನ್ನು ಸರ್ವೇಅಧಿಕಾರಿಗಳು ಅಳತೆ ಮಾಡಿ ಸ್ಕೇಚ್ ನೀಡಿದ್ದಾರೆ ಎಂದು ತಹಶೀಲ್ದಾರ್ ಬಿ.ಜೆ.ಶ್ರೀನಿವಾಸ ಪ್ರಸಾದ್ ಶಾಸಕರ ಗಮನಕ್ಕೆ ತಂದರು.
ಮನವಿ; ಕಳೆದ 10 ವರ್ಷಗಳಿಂದಲೂ ಅಲೆಯುತ್ತಿದ್ದೇವೆ. ಲಕ್ಕೇನಹಳ್ಳಿ ಗ್ರಾಮದಲ್ಲಿ 60 ದಲಿತರ ಭೂಮಿಯನ್ನು ಇನ್ನೂ ಪೋಡಿ ಮಾಡಿಲ್ಲ, ಕೂಡಲೆ ಪೋಡಿ ಮಾಡಿಕೊಡುವಂತೆ ಶಾಸಕರಲ್ಲಿ ಮಂಜೇಶ್ ಮನವಿ ಮಾಡಿದರು.
ಸುಮಟೋ ಕೇಸು ದಾಖಲಿಸಿ: ತಾಲೂಕಿನಲ್ಲಿ ಬಹುತೇಕ ಕೆರೆ-ಕಟ್ಟೆ, ರಸ್ತೆ ಒತ್ತುವರಿಯಾಗಿದೆ.ತಹಶೀಲ್ದಾರ್ ಸ್ಥಳ ಪರಿಶೀಲಿಸಿ, ಸರ್ವೆ ಮಾಡಿಸಿಅವರ ವಿರುದ್ಧ ಸುಮಟೋ ಕೇಸು ದಾಖಲಿಸಿ ದಂಡ ವಸೂಲಿ ಮಾಡಬೇಕು ಎಂದು ಕಲ್ಕೆರೆ ಶಿವಣ್ಣ ಮನವಿ ಮಾಡಿದರು.
ಕೆಡಿಪಿ ಸದಸ್ಯ ನಾಗರಾಜು, ಮುಖಂಡರಾದ ತೋ.ವಿ.ಗಿರೀಶ್, ನರಸಿಂಹಮೂರ್ತಿ, ಜೀವಿಕ ಗಂಗಹನುಮಯ್ಯ, ಶಿವಣ್ಣ, ರಂಗಪ್ಪ, ತಿರುಮಲೆಆಂಜನಪ್ಪ, ರಾಜಣ್ಣ, ತಾಪಂ ಇಒ ಟಿ. ಪ್ರದೀಪ್,ತಾಲೂಕು ಮಟ್ಟದ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಮುಖಂಡರು ಇತರರು ಉಪಸ್ಥಿತರಿದ್ದರು.