ಮಲ್ಪೆ : ಮಳೆಯ ಬಿರುಸು ತಗ್ಗಿರುವ ಹಿನ್ನೆಲೆಯಲ್ಲಿ ಸೈಂಟ್‌ಮೇರಿ ದ್ವೀಪ ಯಾನದ ನಿರೀಕ್ಷೆಯೊಂದಿಗೆ ಮಲ್ಪೆಗೆ ಆಗಮಿಸುವ ಪ್ರವಾಸಿಗರಿಗೆ ಇನ್ನೂ ದ್ವೀಪಯಾನ ಆರಂಭಗೊಳ್ಳದಿರುವುದು ನಿರಾಸೆಯನ್ನುಂಟು ಮಾಡುತ್ತಿದೆ.
ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಕೆಲವರು ಸೀವಾಕ್‌ನಲ್ಲಿ ಸುತ್ತಾಡಿ ತೃಪ್ತಿ ಪಡೆಯುತ್ತಿದ್ದರೆ ಮತ್ತೆ ಕೆಲವರು ಬೀಚ್ ಕಡೆ ಬರುತ್ತಿದ್ದಾರೆ. ದ್ವೀಪ ನೋಡಲು ಕೇರಳದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ದ್ವೀಪಕ್ಕೆ ಕರೆದೊಯ್ಯುವ ಬೋಟ್‌ಗಳ ಸಂಚಾರ ಇನ್ನೂ ಆರಂಭವಾಗಿಲ್ಲ ಎಂದು ತಿಳಿಯುತ್ತಿದ್ದಂತೆ ನಿರಾಸೆಯಿಂದ ಬೇರೆ ತಾಣಗಳಿಗೆ ತೆರಳುತ್ತಿದ್ದಾರೆ.
ಮಳೆಗಾಲದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಸಾಮಾನ್ಯವಾಗಿ ಮೇ 15ರಿಂದ ಸೆ. 15ರ ವರೆಗೆ ಪ್ರವಾಸಿ ಬೋಟುಗಳಿಗೆ ಮತ್ತು ಬೀಚ್‌ನಲ್ಲಿ ನಡೆಯುವ ಜಲಕ್ರೀಡೆಗಳಿಗೆ ನಿರ್ಬಂಧ ಹೇರುತ್ತದೆ. ಸೆ. 16ರಿಂದ ಎಲ್ಲವೂ ಮುಕ್ತವಾಗಿರುತ್ತವೆ. ಆದರೆ ಈ ಬಾರಿ ಇದುವರೆಗೂ ಸಮುದ್ರ ಪ್ರಕ್ಷುಬ್ಧತೆ ಕಡಿಮೆಯಾಗದಿರುವ ಹಿನ್ನೆಲೆಯಲ್ಲಿ ಯಾವುದಕ್ಕೂ ಅನುಮತಿ ಲಭಿಸಿಲ್ಲ.
ಸೆ. 25ರಿಂದ ಯಾನ ಸಾಧ್ಯತೆ: ಜಿಲ್ಲಾಡಳಿತ ಸೈಂಟ್‌ಮೇರಿ ದ್ವೀಪದಲ್ಲಿ ಪ್ರವಾಸಿಗರ ಸುರಕ್ಷೆಯ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸೆ. 25ರಿಂದ ದ್ವೀಪಯಾನ ಮತ್ತು ಬೀಚ್ ವಾಟರ್‌ನ್ಪೋರ್ಟ್ಸ್ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಬೀಚ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಮಲ್ಪೆ ತಿಳಿಸಿದ್ದಾರೆ.
ಇದನ್ನೂ ಓದಿ : ಚಂಡೀಗಢ ವಿವಿ ವಿಡಿಯೋ ಸೋರಿಕೆ ಪ್ರಕರಣ : ಯುವತಿ ಸೇರಿ ಮೂವರ ಬಂಧನ