ಕಾರ್ಕಳ: ನಮ್ಮನ್ನು ಈ ಭೂಮಿಗೆ ತಂದು ಲಾಲನೆ-ಪಾಲನೆಗೈದು ಬೆಳೆಸಿ ಒಳ್ಳೆಯ ವ್ಯಕ್ತಿಗಳನ್ನಾಗಿಸಿ ಭವಿಷ್ಯವನ್ನು ರೂಪಿಸುವ ಹೆತ್ತವರು ದೈವಸ್ವರೂಪಿಗಳು. ಅವರನ್ನು ಗೌರವಿಸಿ ಸಮ್ಮಾನಿಸುವುದು ನಮ್ಮ ಕರ್ತವ್ಯ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಲೋಬೊ ಹೇಳಿದರು.
ಕಾರ್ಕಳ ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ಮಹೋತ್ಸವದ ಎರಡನೇ ದಿನ ಸೋಮ ವಾರದ ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ಅವರು ಪ್ರಬೋಧನೆ ನೀಡಿದರು.
ಎರಡನೇ ದಿನವನ್ನು ತಂದೆ ತಾಯಂದಿರಿಗಾಗಿ ಮೀಸಲಿಡಲಾಗಿತ್ತು. ಹೆತ್ತವರು ಮತ್ತು ಪೋಷಕರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತು. ಯುವಜನರು ವೃದ್ಧ ಪೋಷಕರನ್ನು ಕೈಹಿಡಿದು ಕರೆತರುವ ದೃಶ್ಯ ವಿಶೇಷವಾಗಿತ್ತು.
ಇದನ್ನೂ ಓದಿ:ಹರ್ಷ ಹತ್ಯೆಯ ಆರೋಪಿಗಳಿಬ್ಬರ ಹೆಸರು ಬಹಿರಂಗ: ಶಿವಮೊಗ್ಗದಲ್ಲಿ ಕರ್ಫ್ಯೂ
ದಿನದ ಬಲಿಪೂಜೆಗಳನ್ನು ವಂ| ರಾಜೇಶ್ ಪ್ರಸನ್ನ ಕಟಪಾಡಿ, ವಂ| ಹ್ಯಾರಿ ಡಿ’ಸೋಜಾ ಕಯ್ಯಾರು, ವಂ| ಮನೋಜ್ ಡಿ’ಸೋಜಾ ನಿಟ್ಟೆ, ವಂ| ಪಾವ್ಲ್ ರೇಗೊ ಮಿಯ್ಯಾರು ಅವರು ನೆರವೇರಿಸಿದರು. ದಿನದ ಅಂತಿಮ ಬಲಿಪೂಜೆಯನ್ನು ವಂ| ಬೇಸಿಲ್ ವಾಸ್ ಮಡಂತ್ಯಾರು ಸಂಜೆ 7 ಗಂಟೆಗೆ ನೆರವೇರಿಸಿ 2ನೇ ದಿನದ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಿದರು. ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮಹೋತ್ಸವದ ಮೊದಲನೇ ದಿನ ರವಿವಾರ ಪುಣ್ಯ ಕ್ಷೇತ್ರಕ್ಕೆ ಭೇಟಿಯಿತ್ತಿದ್ದರು.
ಇಂದು ಅಸ್ವಸ್ಥರಿಗಾಗಿ
ವಿಶೇಷ ಪ್ರಾರ್ಥನೆ
ಮಹೋತ್ಸವದ ಮೂರನೇ ದಿನ ಮಂಗಳವಾರ ಬೆಳಗ್ಗೆ 8, 10, 12 ಮತ್ತು ಮಧ್ಯಾಹ್ನ 2, 4, 7 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಅಸ್ವಸ್ಥರಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆಯಿರುವುದು.