ಕಾರ್ಕಳ: ಕೋವಿಡ್‌ನಿಂದ ಜನ ತುಂಬಾ ಸಮಸ್ಯೆ ಅನುಭವಿಸಿದ್ದಾರೆ. ಮಹಾಮಾರಿಗೆ ನಮ್ಮದೇ ಮನೆಯ ಸದಸ್ಯರು, ಪ್ರೀತಿಪಾತ್ರರು ಬಲಿಯಾಗಿದ್ದಾರೆ. ಇನ್ನೂ ಅನೇಕರು ನರಳುತ್ತಿದ್ದಾರೆ. ಅಸ್ವಸ್ಥರ ಆರೈಕೆ ಮಾಡಿದವರಿಗೆ ದೇವರ ಆಶೀರ್ವಾದವಿರುತ್ತದೆ ಎಂದು ಬಳ್ಳಾರಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಹೆನ್ರಿ ಡಿ’ಸೋಜಾ ಹೇಳಿದರು.
ಅವರು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಪ್ರಮುಖ ಬಲಿಪೂಜೆ ನೆರವೇರಿಸಿ ಮಾತನಾಡಿದರು.
ಅಸ್ವಸ್ಥರಿಗಾಗಿ ವಿಶೇಷ ಪೂಜೆ ಪ್ರಾರ್ಥನೆ ನೆರವೇರಿಸ ಲಾಯಿತು. ಗುರುಗಳು ಮತ್ತು ಸೇವಾರ್ಥಿಗಳು ಅಸ್ವಸ್ಥರ ಬಳಿಗೆ ಹೋಗಿ ಪವಿತ್ರ ಪರಮ ಪ್ರಸಾದವನ್ನು ವಿತರಿಸಿದರು. ದಿನದ ಏಕೈಕ ಪ್ರಮುಖ ಬಲಿಪೂಜೆಯನ್ನು ಬಳ್ಳಾರಿಯ ಧರ್ಮಾಧ್ಯಕ್ಷರು ನೆರವೇರಿಸಿದರು.
ದಿನದ ಬಲಿಪೂಜೆಗಳನ್ನು ವಂ| ಫ್ರಾನ್ಸಿಸ್ ಕರ್ನೇಲಿಯೊ ತೊಟ್ಟಂ, ವಂ| ಕೆನ್ಯೂಟ್ ಬಾಬೊಜಾ ಕಂಡ್ಲೂರು, ವಂ| ರೆಜಿನಾಲ್ಡ್ ಪಿಂಟೋ ಉಡುಪಿ, ವಂ| ಸಿಲ್ವೆಸ್ಟರ್ ಡಿ’ಕೋಸ್ಟಾ ಮೂಲ್ಕಿ ನೆರವೇರಿಸಿದರು.ವಂ| ಲುವಿಸ್ ಡೇಸಾ ಮುಕಮಾರು ದಿನದ ಅಂತಿಮ ಬಲಿಪೂಜೆ ನೆರವೇರಿಸಿದರು.
ಇಂದಿನ ಕಾರ್ಯಕ್ರಮ
ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ಬೆಳಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4 ಮತ್ತು 7 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಬೆಳಗ್ಗಿನ 12 ಗಂಟೆಯ ಬಲಿಪೂಜೆ ಕನ್ನಡದಲ್ಲೂ 10 ಗಂಟೆಯ ವಿಶೇಷ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ನೆರವೇರಿಸಲಿದ್ದಾರೆ. ನಾಲ್ಕನೇ ದಿನವನ್ನು ಕುಟುಂಬಗಳಿಗಾಗಿ ಪ್ರಾರ್ಥಿಸಲು ಮೀಸಲಿಡಲಾಗಿದೆ.