ಕಾರ್ಕಳ: ಕೆಲವೊಮ್ಮೆ ಶರೀರದ ಶಸ್ತ್ರಚಿಕಿತ್ಸೆ ಕೆಲಸ ಮಾಡುವುದಿಲ್ಲ, ತಂತ್ರಜ್ಞಾನವೂ ಕೆಲಸ ಮಾಡುವುದಿಲ್ಲ; ಅಂತಹ ಮೊಣಕಾಲೂರಿ ಮಾಡುವ ನಿರಂತರ ಪ್ರಾರ್ಥನೆ ಫಲ ನೀಡುತ್ತದೆ. ಪ್ರಾರ್ಥನೆಯ ರೀತಿ, ನಿಯಮಗಳನ್ನು ಪಾಲಿಸಿದರೆ ಮಾತ್ರ ವರದಾನ ಲಭಿಸುತ್ತದೆ. ಪ್ರಾರ್ಥನೆಯಲ್ಲಿ 3 ಹಂತಗಳಿವೆ. ವಿಶ್ವಾಸ, ಆಸೆ ಬಯಕೆ, ಆಂತರಿಕ ಸ್ವಾತಂತ್ರ್ಯ ಎಂಬ ಸಂದೇಶ ಅವುಗಳಾಗಿವೆ ಎಂದು ಶಿವಮೊಗ್ಗ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್ ಸೆರಾವೋ ಹೇಳಿದರು.
ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎರಡನೇ ದಿನವಾದ ಸೋಮವಾರ “ಎಡೆಬಿಡದೆ ಪ್ರಾರ್ಥಿಸೋಣ’ ಎಂಬ ದಿನದ ವಿಷಯವನ್ನು ಧ್ಯಾನಿಸಿ ಅವರು ಗಾಯನ ಬಲಿಪೂಜೆ ನೆರವೇರಿಸಿ ಪ್ರವಚನ ನೀಡಿದರು.
ಬೆಳಗ್ಗೆ ಪುಣ್ಯಕ್ಷೇತ್ರದ ಸಂತ ಲಾರೆನ್ಸರ ಪವಿತ್ರ ಅವಶೇಷ ಹಾಗೂ ಪವಾಡ ಮೂರ್ತಿಯ ಸಂಪುಟವನ್ನು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಠಾಪಿಸಿದರು. ಭಕ್ತರು ಆ ಸಂಪುಟದ ದಿವ್ಯದರ್ಶನ ಪಡೆದರು.
ದಿನದ ಇತರ ಬಲಿಪೂಜೆಗಳನ್ನು ವಂ| ಜೋಯ್ ಜೊಲ್ಸನ್ ಅಂದ್ರಾದೆ, ಕಲ್ಯಾಣಪುರ, ವಂ| ಜೆ.ಬಿ. ಸಲ್ಡಾನ್ಹಾ ಬಿಜೈ ಮಂಗಳೂರು, ಉಡುಪಿ ಧರ್ಮಕ್ಷೇತ್ರದ ಕುಲಪತಿ ವಂ| ಡಾ| ರೋಷನ್ ಡಿ’ಸೋಜಾ, ವಂ| ವಿಜಯ್ ಡಿ’ಸೋಜಾ ಪಾಂಗಾÛ, ಮಂಗಳೂರು ಮಿಲಾಗ್ರಿಸ್‌ನ ವಂ| ಬೊನವೆಂಚರ್ ನಜ್ರೆತ್, ಶಿವಮೊಗ್ಗ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಫ್ರಾನ್ಸಿಸ್ ಸೆರಾವೊ ಎಸ್.ಜೆ., ಕಾರ್ಕಳ ವಲಯಾಧಿಕಾರಿ ವಂ| ಪೌಲ್ ರೇಗೊ ನೆರವೇರಿಸಿದರು. ಸೂರ್ಯಾಸ್ತದ ಸಮಯದಲ್ಲಿ ಭಕ್ತರು ಹರಕೆಯ ಮೋಂಬತ್ತಿಯನ್ನು ಬೆಳಗಿಸಿ, ದಿವ್ಯ ತೈಲವನ್ನು ಸ್ವೀಕರಿಸಿ ಪವಿತ್ರ ಪುಷ್ಕರಿಣಿಗೆ ಧಾವಿಸಿ ತೀರ್ಥವನ್ನು ಪಡೆದುಕೊಂಡರು. ದಿನದ ಅಂತಿಮ ಬಲಿಪೂಜೆಯು ರಾತ್ರಿ 8ಕ್ಕೆ ನೆರವೇರಿತು.