Advertisement

ಎಸೆಸೆಲ್ಸಿ  ತುಳು ಪರೀಕ್ಷೆಗೆ 660 ವಿದ್ಯಾರ್ಥಿಗಳು

04:31 AM Dec 30, 2018 | |

ಮಂಗಳೂರು: ತುಳುವನ್ನು ತೃತೀಯ ಭಾಷೆಯಾಗಿ ಆಯ್ದುಕೊಂಡು ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ವೃದ್ಧಿಯಾಗಿದೆ. 2018-19ನೇ ಸಾಲಿನಲ್ಲಿ ಒಟ್ಟು 34 ಶಾಲೆಗಳಿಂದ 660 ಮಂದಿ ಪರೀಕ್ಷೆಗೆ ಹಾಜರಾಗಲಿದ್ದರೆ ಕಳೆದ ಸಾಲಿನಲ್ಲಿ ಈ ಸಂಖ್ಯೆ 417 ಆಗಿತ್ತು. 

Advertisement

ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸರಕಾರಿ ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗ ದಿಂದ 48 ಮಂದಿ ತುಳು ಪರೀಕ್ಷೆಗೆ ಉತ್ತರಿಸ ಲಿದ್ದು, ಪ್ರಥಮ ಸ್ಥಾನದಲ್ಲಿದೆ. ಸುಳ್ಯ ತಾಲೂಕಿನ ಬೆಳ್ಳಾರೆ ಸರಕಾರಿ ಪ.ಪೂ. ಕಾಲೇಜಿನಿಂದ 44, ಬಂಟ್ವಾಳ ತಾಲೂಕಿನ ವಿಟ್ಲದ ವಿಠಲ ಸರಕಾರಿ ಪ.ಪೂ. ಕಾಲೇಜಿನಿಂದ 42, ಬೆಳ್ತಂಗಡಿಯ ಧರ್ಮಸ್ಥಳ ಎಸ್‌ಡಿಎಂ ಕನ್ನಡ ಮಾಧ್ಯಮ ಹೈಸ್ಕೂಲ್‌ನಿಂದ 35, ಪುತ್ತೂರಿನ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಹೈಸ್ಕೂಲ್‌ನಿಂದ 33, ಬೆಳ್ತಂಗಡಿಯ ಬದನಾಜೆ ಸರಕಾರಿ ಹೈಸ್ಕೂಲ್‌ನಿಂದ 31 ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲಿದ್ದಾರೆ. 

18 ರಿಂದ 660ಕ್ಕೆ
2012-13ನೇ ಸಾಲಿನಲ್ಲಿ ತುಳು ತೃತೀಯ ಭಾಷೆಯಾಗಿ ಶಾಲೆಗಳಲ್ಲಿ ಅಧಿಕೃತವಾಗಿತ್ತು. 2014-15ರ ಪ್ರಥಮ ಬ್ಯಾಚ್‌ನಲ್ಲಿ ಒಂದು ಶಾಲೆಯಿಂದ 18 ಮಂದಿ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದರು. ಮುಂದಿನ ಸಾಲಿನ ಎರಡನೇ ಬ್ಯಾಚ್‌ನಲ್ಲಿ 3 ಶಾಲೆಗಳಿಂದ 25 ವಿದ್ಯಾರ್ಥಿಗಳು, 2016-17ನೇ ಸಾಲಿನಲ್ಲಿ 12 ಶಾಲೆಗಳಿಂದ 283, 2017-18ನೇ ಸಾಲಿನಲ್ಲಿ 22 ಶಾಲೆಗಳಿಂದ 417 ವಿದ್ಯಾರ್ಥಿಗಳು ತುಳು ಪರೀಕ್ಷೆ ಬರೆದಿದ್ದರು. ಕಳೆದ ಸಾಲಿನಲ್ಲಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. 

ಎಸೆಸೆಲ್ಸಿಯಲ್ಲಿ ತುಳು ಪರೀಕ್ಷೆ ಬರೆಯುವವರ ಸಂಖ್ಯೆಯಲ್ಲಿ ಐದು ವರ್ಷಗಳಲ್ಲಿ ಗಣನೀಯ ಪ್ರಗತಿ ದಾಖಲಾಗಿದೆ. 2014-15ರಲ್ಲಿದ್ದ 18 ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ 660ಕ್ಕೇರಿದೆ. ಇನ್ನಷ್ಟು ಪ್ರಗತಿ ಸಾಧಿಸಲು ತುಳು ಸಾಹಿತ್ಯ ಅಕಾಡೆಮಿ ಪ್ರಯತ್ನ ನಡೆಸುತ್ತಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್‌ ಚಂದ್ರಹಾಸ ರೈ ವಿವರಿಸಿದ್ದಾರೆ. 

ಒಟ್ಟು 2,066 ವಿದ್ಯಾರ್ಥಿಗಳು
ಎರಡೂ ಜಿಲ್ಲೆಗಳಲ್ಲಿ ಪ್ರಸ್ತುತ 41 ಶಾಲೆಗಳಲ್ಲಿ 6ರಿಂದ 10ನೇ ತರಗತಿಯ ವರೆಗೆ 2,066 ವಿದ್ಯಾರ್ಥಿಗಳು ತುಳು ಕಲಿಯುತ್ತಿದ್ದಾರೆ. 6ರಲ್ಲಿ100, 7ರಲ್ಲಿ 132, 8ರಲ್ಲಿ 494, 9ರಲ್ಲಿ 680 ಹಾಗೂ 10ನೇ ತರಗತಿಯಲ್ಲಿ 660 ವಿದ್ಯಾರ್ಥಿಗಳಿದ್ದಾರೆ. ಪುತ್ತೂರು ತಾಲೂಕಿನಲ್ಲಿ  989, ಬೆಳ್ತಂಗಡಿಯಲ್ಲಿ 387, ಮಂಗಳೂರಿನಲ್ಲಿ 222, ಸುಳ್ಯದಲ್ಲಿ 169, ಬಂಟ್ವಾಳದಲ್ಲಿ 151 ಹಾಗೂ ಉಡುಪಿಯಲ್ಲಿ 149 ವಿದ್ಯಾರ್ಥಿಗಳಿದ್ದಾರೆ. ಶಾಲೆವಾರು 6ರಿಂದ 10ರ ವರೆಗಿನ ಅಂಕಿಅಂಶ ಪರಿಗಣಿಸಿದರೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸ. ಹಿ. ಪ್ರಾಥಮಿಕ ಶಾಲೆಯಲ್ಲಿ 143 ವಿದ್ಯಾರ್ಥಿಗಳು ತುಳು ಕಲಿಯುತ್ತಿದ್ದು, ಪ್ರಥಮ ಸ್ಥಾನದಲ್ಲಿದೆ. 141 ವಿದ್ಯಾರ್ಥಿಗಳನ್ನು ಹೊಂದಿರುವ ಸುಳ್ಯ ತಾಲೂಕಿನ ಬೆಳ್ಳಾರೆ ಸ.ಪ.ಪೂ. ಕಾಲೇಜಿನ ಪ್ರೌಢ ಶಾಲಾ ವಿಭಾಗ, 117 ವಿದ್ಯಾರ್ಥಿ ಗಳಿರುವ ಪುತ್ತೂರು ತಾಲೂಕಿನ ರಾಮಕುಂಜದ  ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ  114 ವಿದ್ಯಾರ್ಥಿಗಳು ಇರುವ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸ. ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗ ಅನಂತರದ ಸ್ಥಾನಗಳಲ್ಲಿವೆ.

Advertisement

ಪದವಿಗೆ ಐಚ್ಛಿಕ ತುಳು: ಸಿದ್ಧತೆ
ಪದವಿಯಲ್ಲಿ ತುಳುವನ್ನು ಐಚ್ಛಿಕ ಭಾಷೆಯಾಗಿಸಲು ಅಕಾಡೆಮಿಯಿಂದ ಸಿದ್ಧತೆಗಳು ನಡೆಯುತ್ತಿವೆ. ಪಠ್ಯ ಸಿದ್ಧಪಡಿಸುವ ಕುರಿತು ಸಮಿತಿಯ ಸಭೆ ಡಿ.27ರಂದು ನಡೆದಿದೆ. ಈಗಾಗಲೇ ಮಂಗಳೂರು ವಿವಿ ಸಂಜೆ ಕಾಲೇಜಿ ನಲ್ಲಿ ತುಳು ಸ್ನಾತಕೋತ್ತರ ಪದವಿ ತರಗತಿ ಯಶಸ್ವಿಯಾಗಿ ನಡೆಯುತ್ತಿದೆ. ಪಿಯುಸಿಯಲ್ಲಿ ದ್ವಿತೀಯ ಭಾಷೆಯಾಗಿ ತುಳು ಕುರಿತಾಗಿಯೂ ಅಕಾಡೆಮಿ ಪ್ರಯತ್ನ ನಡೆಸುತ್ತಿದೆ. 

ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳು ತುಳುವನ್ನು ತೃತೀಯ ಭಾಷೆಯಾಗಿ ಕಲಿಸಲು ಉತ್ಸುಕತೆ ತೋರ್ಪಡಿಸುತ್ತಿರುವುದು ಸಂತೋಷದ ವಿಚಾರ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ತುಳು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಗಣನೀಯ ವೃದ್ಧಿಯಾಗಿದೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಮಂದಿ ತುಳುವನ್ನು ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ.
ಎ.ಸಿ. ಭಂಡಾರಿ,  ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ 

Advertisement

Udayavani is now on Telegram. Click here to join our channel and stay updated with the latest news.

Next