Advertisement

ಎಸ್ಸೆಸ್ಸೆಲ್ಸಿ: ಜಿಲ್ಲೆಗೆ ಮೂರನೇ ಸ್ಥಾನ

08:45 PM May 01, 2019 | Lakshmi GovindaRaj |

ದೇವನಹಳ್ಳಿ: 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫ‌ಲಿತಾಂಶ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಒಟ್ಟು ಶೇ.88.24 ರಷ್ಟು ಫ‌ಲಿತಾಂಶ ಪಡೆದು ಇಡೀ ರಾಜ್ಯದಲ್ಲಿಯೇ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ(ಡಿಡಿಪಿಐ)ಕೃಷ್ಣಮೂರ್ತಿ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ 12,166 ವಿದ್ಯಾರ್ಥಿಗಳಲ್ಲಿ 10,763 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.88.34 ಫ‌ಲಿತಾಂಶ ದಾಖಲಾಗುವ ಮೂಲಕ ಜಿಲ್ಲೆ ಇಡೀ ರಾಜ್ಯಕ್ಕೇ ಮೂರನೇ ಸ್ಥಾನ ಪಡೆದಿದೆ ಎಂದರು.

2017-18ನೇ ಸಾಲಿನಲ್ಲಿ 11,935 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 9,807 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.82.17ಫ‌ಲಿತಾಂಶದೊಂದಿಗೆ ರಾಜ್ಯದಲ್ಲಿ 14ನೇ ಸ್ಥಾನ ಪಡೆದಿತ್ತು. ಈ ಬಾರಿ ಮೂರನೇ ಸ್ಥಾನಕ್ಕೆ ಏರಿದೆ ಎಂದು ತಿಳಿಸಿದರು.

ಜಿಲ್ಲೆ ಗರಿಮೆ ಹೆಚ್ಚಳ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ನವ್ಯಾ ಹಾಗೂ ನಾಗೇಂದ್ರ 625ಅಂಕಕ್ಕೆ 619 ಅಂಕ ಗಳಿಸುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಇಬ್ಬರು ಹಂಚಿಕೊಂಡಿದ್ದಾರೆ. ಜಿಲ್ಲೆಯ ದೇವನಹಳ್ಳಿ ತಾಲೂಕು ಶೇ.93.30, ದೊಡ್ಡಬಳ್ಳಾಪುರ ಶೇ.93.79, ಹೊಸಕೋಟೆ ಶೇ.93.89, ನೆಲಮಂಗಲ ಶೇ.93.92ಗಳಿಸುವ ಮೂಲಕ ದೊಡ್ಡಬಳ್ಳಾಪುರ ತಾಲೂಕು ಹೊರತುಪಡಿಸಿದರೆ, ಈ ಬಾರಿ ಉತ್ತಮ ಫ‌ಲಿತಾಂಶ ದಾಖಲಾಗಿದೆ. ಇದು ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಫ‌ಲಿತಾಂಶ ಸುಧಾರಣಾ ಸಮಿತಿ: ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಬೈರೇಗೌಡ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌.ಲತಾ ಅವರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫ‌ಲಿತಾಂಶ ಸುಧಾರಣಾ ಸಮಿತಿ ರಚಿಸಿ, ಕಲಿಕೆಯಲ್ಲಿ ಕಡಿಮೆ ಸಾಧನೆ ಮಾಡಿದ್ದ ಮಕ್ಕಳನ್ನು ಗುರುತಿಸಿ, ಅವರ ಕಲಿಕಾ ಪ್ರಗತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ವಿವರಿಸಿದರು.

Advertisement

ಜಿಪಂ ಸಿಇಒ ಮುತುವರ್ಜಿ: ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶೈಕ್ಷಣಿಕ ಮಾರ್ಗದರ್ಶನಕ್ಕಾಗಿ ತಜ್ಞರ ನೇಮಕ, ಅನುದಾನಕ್ಕಾಗಿ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ಆಡಳಿತಾಧಿಕಾರಿಗಳ ಸಂಪರ್ಕ, ನಿಧಾನ ಕಲಿಕಾ ಮಕ್ಕಳ ಆಯ್ಕೆಗಾಗಿ ಸೂಕ್ತ ಮಾನದಂಡಗಳ ರಚನೆ,

ಜಿಲ್ಲಾದ್ಯಂತ 33ನೋಡಲ್‌ ಕೇಂದ್ರಗಳ ಸ್ಥಾಪನೆ ಪ್ರತಿ ಕೇಂದ್ರಕ್ಕೂ ನೋಡಲ್‌ ಅಧಿಕಾರಿಗಳ ನೇಮಕ, ಬೋಧಕರನ್ನಾಗಿ ನುರಿತ ಸಂಪನ್ಮೂಲ ಶಿಕ್ಷಕರ ಆಯ್ಕೆ, ಗೀತಂ ವಿವಿ ಸಭಾಂಗಣದಲ್ಲಿ ಕಡಿಮೆ ಸಾಧಕ ಮಕ್ಕಳನ್ನು ಒಗ್ಗೂಡಿಸಿ “ಪರೀಕ್ಷಾ ಸಂಭ್ರಮಕ್ಕೆ ಸಿದ್ಧರಾಗಿ’ ಎಂಬ ಸ್ಫೂರ್ತಿದಾಯಕ ಕಾರ್ಯಕ್ರಮದ ಆಯೋಜನೆ,

“ವಿಪಿಜಿ’ ಮತ್ತು “ಏ ಒನ್‌’ ಗುಂಪು ರಚಿಸಿ ಈ ಮಕ್ಕಳಿಗಾಗಿ ವಿಶೇಷ ಕಲಿಕಾ ಪಠ್ಯಕ್ರಮ ರಚನೆ, ಏರ್ಪಾಟು, ವಿಪಿಜಿ ಮಕ್ಕಳ ಪೋಷಕರ ಸಭೆಗೆ ಏರ್ಪಾಟು, ಗಣಿತ ಕಲಿಕೆಯನ್ನು ಸುಲಭಗೊಳಿಸಲು “ಗಣಿತ ಅಭ್ಯಾಸ ಪುಸ್ತಕ’ ಎಂಬ ಕೈಪಿಡಿ ರಚನೆ, ಜಿಲ್ಲೆಯ ಎಲ್ಲಾ 234 ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ

ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ನಡೆಸಿ ಶಾಲಾವಾರು ಫ‌ಲಿತಾಂಶ ಸುಧಾರಣಾ ಕ್ರಮಗಳ ಪರಿಶೀಲನೆ, ಪ್ರಿಪರೇಟರಿ ಪರೀಕ್ಷಾ ಫ‌ಲಿತಾಂಶದ ವಿಶ್ಲೇಷಣೆ, ಕಲಿಕೆಯಲ್ಲಿ ಪ್ರಗತಿ ಕಾಣದ “ಏ ಒನ್‌’ ಮಕ್ಕಳಿಗಾಗಿ ಪ್ರತಿ ಶಾಲೆಯಲ್ಲೂ ಬೋಧನಾ ಕ್ರಮದ ಜಾರಿ ಇತ್ಯಾದಿ ಸುಧಾರಣಾ ಕ್ರಮಗಳನ್ನು ರೂಪಿಸುವಲ್ಲಿ ಆರ್‌.ಲತಾ ಹೆಚ್ಚು ಆಸಕ್ತಿ ವಹಿಸಿದ್ದರು ಎಂದು ತಿಳಿಸಿದರು.

ಸಿಇಒ ಅಭಿನಂದನೆ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫ‌ಲಿತಾಂಶದಲ್ಲಿ ಜಿಲ್ಲೆಯ ಸ್ಥಾನ ಹೆಚ್ಚಳಗೊಳ್ಳಲು ಕಾರಣರಾದ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐ ಕೃಷ್ಣಮೂರ್ತಿ ಸೇರಿದಂತೆ ಶ್ರಮ ವಹಿಸಿದ ಎಲ್ಲರನ್ನೂ ಜಿಪಂ ಸಿಇಒ ಆರ್‌.ಲತಾ ಶ್ಲಾ ಸಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಧೃತಿಗೆಡದೆ ಮತ್ತೂಮ್ಮೆ ಆತ್ಮವಿಶ್ವಾಸದೊಂದಿಗೆ ಪರೀಕ್ಷೆಗೆ ಸಿದ್ಧರಾಗುವಂತೆ ಪ್ರೇರೇಪಿಸಿದ್ದು, ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಹರ್ಷ: ಸಿಇಒ ಆರ್‌.ಲತಾ ಅವರ ಅಧ್ಯಕ್ಷತೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಫ‌ಲಿತಾಂಶ ಸುಧಾರಣಾ ಸಮಿತಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಅತ್ಯಂತ ಕಾಳಜಿ ವಹಿಸಿ ವಿಶೇಷ ತರಗತಿಗಳನ್ನು ನಡೆಸಿ,ಪರೀಕ್ಷೆಗೆ ಅಣಿಗೊಳಿಸಿದ್ದರಿಂದ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಉತ್ತಮಗೊಂಡು ಮೂರನೇ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಯಲ್ಲಿ ಅನುಉತ್ತೀರ್ಣರಾದ ವಿದ್ಯಾರ್ಥಿಗಳು ಎದೆಗುಂದದೆ, ಮರು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಲು ಸಲಹೆ ನೀಡಿದ್ದಾರೆ ಎಂದು ಡಿಡಿಪಿಐ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next