Advertisement

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ನಡೆಸಲಿದ್ದೇವೆ : ಸುರೇಶ್‌ ಕುಮಾರ್‌

09:24 PM Apr 09, 2020 | Sriram |

ಬೆಂಗಳೂರು: ಸಮಯದ ಅಭಾವವಿದ್ದರೂ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಬಳಿಕ ಪೂರಕ ಪರೀಕ್ಷೆಯನ್ನು ನಡೆಸಲಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

Advertisement

ಲಾಕ್‌ಡೌನ್‌ ವಿಸ್ತರಣೆಯಾಗುವ ಸಂಭವ ಇರುವುದರಿಂದ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಇಲಾಖೆಯಿಂದ ಕೈಗೊಂಡಿರುವ ಕ್ರಮದ ಬಗ್ಗೆ ತಮ್ಮ ಫೇಸ್‌ಬುಕ್‌ ಲೈವ್‌ ಮೂಲಕ ಮಾಹಿತಿ ನೀಡಿದ ಅವರು, ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸುವ ಸಂಬಂಧ ಅನೇಕ ಮಕ್ಕಳ ಹೆತ್ತವರು ಕೇಳಿಕೊಂಡಿದ್ದಾರೆ. ಪೂರಕ ಪರೀಕ್ಷೆ ಸಂಬಂಧ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ಸೂಕ್ತ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ಎಸೆಸೆಲ್ಸಿ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ 7ರಿಂದ 10 ದಿನಗಳ ಪುನರ್‌ ಮನನ ಅವಧಿಯನ್ನು ಕಲ್ಪಿಸಿ ಪರೀಕ್ಷೆ ಎದುರಿಸುವ ಮನಃಸ್ಥಿತಿಗೆ ಬರುವಂತೆ ಮಾಡಲು ಕ್ರಮಕೈಗೊಳ್ಳಲಾಗುವುದು. ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಬಳಿಕ ಪೂರಕ ಪರೀಕ್ಷೆಗಳನ್ನು ನಡೆಸಬೇಕಾಗಿದ್ದು, ಇದಕ್ಕೂ ಸಹ ಆವಶ್ಯಕ ಸಮಯವನ್ನು ದೊರಕಿಸಿಕೊಂಡು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಮುಂದಿನ ದಿನಗಳಲ್ಲಿ ಉದ್ಭವವಾಗುವ ಪರಿಸ್ಥಿತಿಗಳ ಆಧಾರದ ಮೇಲೆ ನಿರ್ಣಯಿಸಲು ಸೂಚನೆ ನೀಡಿದ್ದೇನೆ ಎಂದರು.

ಎಸೆಸೆಲ್ಸಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಕಾಶವಾಣಿ ಮತ್ತು ದೂರದರ್ಶನದ ಮೂಲಕ ಪುನರ್‌ ಮನನ ಕಾರ್ಯಕ್ರಮ ನೀಡುವ ಸಂಬಂಧ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತದೆ. ಇದೇ ರೀತಿ ಎಲ್ಲ ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಅನುಕೂಲವಾಗುವಂತೆ ಮುಂದಿನ ವಾರದಲ್ಲಿ ಯೂಟ್ಯೂಬ್‌ ಚಾನೆಲ್‌ ಆರಂಭಿಸಲಿದ್ದೇವೆ ಎಂದರು.

ಕಾಲಾವಧಿ ವಿಸ್ತರಣೆ
ಶಿಕ್ಷಕರಿಗೆ ಮನೆಯಲ್ಲೇ ಇದ್ದು ರೂಪಿಸಬೇಕಾದ ಕಾರ್ಯಚಟುವಟಿಕೆಗೆ ನೀಡಿದ್ದ ಕಾಲಾವಧಿಯನ್ನು ಮುಂದೂಡಿದ್ದೇವೆ. ಹಾಗೆಯೇ ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ(ಎಸ್‌ಎಟಿಎಸ್‌) ಅಪ್‌ಡೇಟ್‌ಗೆ ಕಾಲಾವಕಾಶ ನೀಡಿದ್ದೇವೆ. ಪರಿಸ್ಥಿತಿ ತಿಳಿಯಾದ ಅನಂತರ ಇದಕ್ಕಾಗಿ ಒಂದು ವಾರಗಳ ಕಾಲಾವಕಾಶ ನೀಡಲಿದ್ದೇವೆ. ಸೋಮವಾರ ಈ ಎಲ್ಲ ವಿಚಾರವಾಗಿ ಡಿಡಿಪಿಐಗಳೊಂದಿಗೆ ವೀಡಿಯೋ ಸಂವಾದ ನಡೆಸಲಿದ್ದೇನೆ ಎಂದು ಸುರೇಶ್‌ ಕುಮಾರ್‌ ವಿವರ ನೀಡಿದರು.

Advertisement

ವದಂತಿಗೆ ಕಿವಿಗೊಡಬೇಡಿ
ಎಸೆಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯವನ್ನು ಕೋವಿಡ್ 19 ಭೀತಿ ತಿಳಿಯಾದ ಅನಂತರವೇ ನಡೆಸಲಿದ್ದೇವೆ. ಈ ಬಗ್ಗೆ ವಿದ್ಯಾರ್ಥಿಗಳು, ಪಾಲಕ, ಪೋಷಕರಿಗೆ ಆತಂಕ ಅಥವಾ ಗೊಂದಲ ಬೇಡ. ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತವಾಗಿ ನಾನೇ ಪ್ರಕಟಿಸಲಿದ್ದೇನೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ಮೌಲ್ಯಮಾಪನ ಕಾರ್ಯವನ್ನು ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದೇವೆ. ಪಿಯು ಇಲಾಖೆಯ ನಿರ್ದೇಶಕರು ಈ ಸಂಬಂಧ ಕಾರ್ಯ ನಿರ್ವಹಿಸುತ್ತಿದ್ದಾ ರೆ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆ
ಕೋವಿಡ್ 19  ಲಾಕ್‌ಡೌನ್‌ ಅವಧಿ ಮುಗಿದ ಬಳಿಕ ಟಿಇಟಿ ಸಹಿತ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳು ನಿಗದಿಯಾಗುವ ಸಂದರ್ಭದಲ್ಲಿ ಬೇರಾವುದೇ ಪರೀಕ್ಷೆಗಳ ದಿನಾಂಕಗಳಿಗೆ ಅಡ್ಡಿಯಾಗದ ರೀತಿಯಲ್ಲಿ ನಿಗದಿಪಡಿಸಲು ಸೂಚಿಸಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ನೇಮಕಾತಿ ಕುರಿತಂತೆ ಕೂಡಲೇ ಕೌನ್ಸೆಲಿಂಗ್‌ ದಿನಾಂಕವನ್ನು ನಿಗದಿಪಡಿಸಿ ಮೇ ತಿಂಗಳಿನಲ್ಲಿ ಕೌನ್ಸೆಲಿಂಗ್‌ ಗಳನ್ನು ಲಾಕ್‌ಡೌನ್‌ ತೆರವಿನ ಆಧಾರದಲ್ಲಿ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next