Advertisement

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ “ಕಲಿಕಾ ಆಸರೆ”

12:25 PM Feb 22, 2023 | Team Udayavani |

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಲ್ಲಿ ಕಲಿಕಾ ಹಿಂದುಳಿಯುವಿಕೆ ಹೋಗಲಾಡಿಸಲು ಶಿಕ್ಷಣ ಇಲಾಖೆ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಪ್ರಸಕ್ತ ವರ್ಷದಲ್ಲಿ ಕಲಿಕಾ ಆಸರೆ ಎನ್ನುವಂತಹ ಹೊತ್ತಿಗೆಯನ್ನು ಹೊರ ತಂದಿದ್ದು, ಮಕ್ಕಳ ಕಲಿಕೆಗೆ ಉತ್ತೇಜನ ನೀಡುವ ಜತೆಗೆ ಕಲಿಕೆ ಸುಧಾರಣೆಗೆ ಮುಂದಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ 6 ಸಾವಿರ ಪುಸ್ತಕಗಳನ್ನು ಈಗಾಗಲೇ ಮಕ್ಕಳಿಗೆ ಪೂರೈಸಿದೆ. ಹೌದು, ಮುಂದುವರಿದ ಜಿಲ್ಲೆಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶಿಕ್ಷಣದ ಮಟ್ಟ ಸ್ವಲ್ಪ ಕಡಿಮೆ ಇದೆ. ವಿದ್ಯಾರ್ಥಿಗಳಲ್ಲಿನ ಕಲಿಕಾ ದೋಷ, ಶಿಕ್ಷಕರಲ್ಲಿನ ಬೋಧನಾ ವಿಧಾನ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶಿಕ್ಷಕರ ಕೊರತೆ ಸೇರಿದಂತೆ ನಾನಾ ಕಾರಣಗಳೂ ಇವೆ.

Advertisement

ಇದರಿಂದಾಗಿ 10ನೇ ತರಗತಿ ವಿದ್ಯಾರ್ಥಿಗಳು ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಂದಂಕಿ ಸ್ಥಾನದೊಳಗೆ ಬರಲು ಸಾಧ್ಯವೇ ಆಗುತ್ತಿಲ್ಲ. ಹಾಗಾಗಿ ಇದನ್ನು ಹೋಗಲಾಡಿಸಿ ಶಿಕ್ಷಣದಲ್ಲಿ ಮುಂದುವರಿದ ಜಿಲ್ಲೆಗಳೊಂದಿಗೆ ಕಲ್ಯಾಣ ಭಾಗದ ಮಕ್ಕಳಿಗೂ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಕಲಬುರಗಿ ಶಿಕ್ಷಣ ಇಲಾಖೆ ಈ ಬಾರಿ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ತರಲು ಕಲಿಕಾ ಆಸರೆ ಎನ್ನುವಂತಹ ವಿನೂತನ ಪುಸ್ತಕ ಹೊರ ತಂದಿದೆ.

ಈ ಪುಸ್ತಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮಾತ್ರ ಆದ್ಯತೆ ನೀಡುವಂತಹದ್ದಾಗಿದೆ. ಪ್ರತಿ ವರ್ಷವೂ ಶಿಕ್ಷಣ ಇಲಾಖೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಮೂರು ರೀತಿಯ ಪಟ್ಟಿ ಮಾಡಿ ಉತ್ತಮ, ಮಧ್ಯಮ ಹಾಗೂ ಸಾಧಾರಣ ಎಂಬ ವಿದ್ಯಾರ್ಥಿಗಳನ್ನು ಆಂತರಿಕವಾಗಿ ಗುರುತಿಸಿ ಇವುಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮೇಲೆ ಹೆಚ್ಚು ಒತ್ತು ನೀಡಿ ಅವರಿಗೆ ಪರಿಹಾರ ಬೋಧನೆ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮ ಹಮ್ಮಿಕೊಂಡು ಅವರಲ್ಲಿ ಸುಧಾರಣೆ ತರುವುದು, ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ಉತ್ತಮ ಅಂಕ ಗಳಿಸುವಂತಹ ಪ್ರಯೋಗಗಳನ್ನು ನಡೆಸಲಾಗುತ್ತಿದೆ.ಆ ನಿಟ್ಟಿನಲ್ಲಿ ಈ ಬಾರಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿಯೇ ಕಲಿಕಾ ಆಸರೆ ಪುಸ್ತಕ ಸಿದ್ಧಪಡಿಸಿ ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಗೆ ಪೂರೈಸಿದೆ.

ಕಲಿಕಾ ಆಸರೆ ಪುಸ್ತಕದಲ್ಲೇನಿದೆ?: ಕಲಿಕಾ ಆಸರೆ ಪುಸ್ತಕ ಆರು ವಿಷಯಗಳನ್ನು ಒಳಗೊಂಡಿದೆ. ಪ್ರತಿ ಪುಸ್ತಕದಲ್ಲೂ ಒಂದೊಂದು ಅಧ್ಯಾಯದ ವಿಷಯದ ಪ್ರಶ್ನೆಗಳು ಇರುತ್ತವೆ. ಆ ಪ್ರಶ್ನೆಗಳಿಗೆ ಉತ್ತರ ಬರೆಯಲು ಕೆಳಗೆ ಸ್ಥಳವಕಾಶ ಮಾಡಲಾಗಿದೆ. ವಿದ್ಯಾರ್ಥಿ ಮೇಲಿನ ಪ್ರಶ್ನೆ ಗಮನಿಸಿ ಕೆಳಗೆ ಉತ್ತರ ಬರೆಯಬೇಕು. ಜತೆಗೆ ಗಣಿತ ವಿಷಯ ಕುರಿತಂತೆಯೂ ಕೆಳಗೆ ಲೆಕ್ಕಗಳನ್ನು ಬಿಡಿಸಲು ಅವಕಾಶ ಕಲ್ಪಿಸಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ನಿರ್ದಿಷ್ಟ ಪ್ರಶ್ನೆಗಳಿಗೆ ನಿಖರವಾದ, ಸೀಮಿತ ಸ್ಥಳದಲ್ಲಿ ಉತ್ತರ ಬರೆಯಲು ಅವಕಾಶವಿದೆ. ಇದರಿಂದ ವಿದ್ಯಾರ್ಥಿಗಳಲ್ಲೂ ಸಹಿತ ಯಾವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎನ್ನುವ ವಿಧಾನವೂ ಮಕ್ಕಳಲ್ಲಿ ಗೊತ್ತಾಗಲಿದೆ.

10ನೇ ತರಗತಿ ವಿದ್ಯಾರ್ಥಿಗಳ ಕಲಿಕೆಗಾಗಿ ಕಲಬುರಗಿ ವಿಭಾಗದಿಂದ ಪೂರೈಸಿದ ಕಲಿಕಾ ಆಸರೆ ಎಂಬ ಪುಸ್ತಕವನ್ನು ಈಗಾಗಲೇ ಪೂರೈಸಿದ್ದೇವೆ. ಆ ಪುಸ್ತಕದಲ್ಲಿ ವಿದ್ಯಾರ್ಥಿಗಳು ಅಭ್ಯಾಸದ ಅಧ್ಯಾಯದ ಪ್ರಶ್ನೆಗಳಿಗೆ ಉತ್ತರ ಬರೆಯಲು ಅವಕಾಶವಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸುಧಾರಣೆ ತರುವುದು ಸೇರಿದಂತೆ ಪರೀಕ್ಷೆಗೆ ಆತನನ್ನು ಸಿದ್ಧಗೊಳಿಸುವ ಯೋಜನೆಯಾಗಿದೆ. ಕಲಿಕಾ ಆಸರೆ ಪುಸ್ತಕ ಜತೆಗೆ ಚಿಗುರು ಎಂಬ ಪುಸ್ತಕವನ್ನು ನಾವು ಮಕ್ಕಳಿಗೆ ಪೂರೈಸಿದ್ದೇವೆ.
ಮುತ್ತುರಡ್ಡಿ ರಡ್ಡೇರ್‌, ಡಿಡಿಪಿಐ, ಕೊಪ್ಪಳ.

Advertisement

ಚಿಗುರು ಪುಸ್ತಕವೂ ವಿತರಣೆ: ಕಲಿಕಾ ಆಸರೆ ಪುಸ್ತಕದ ಜತೆಗೆ ಕೊಪ್ಪಳ ಜಿಲ್ಲೆಯಲ್ಲಿ ಹಿಂದೆ ಜಿಪಂ ಸಿಇಒ ಆಗಿದ್ದ ಫೌಜಿಯಾ ತರನ್ನುಮ್‌ ಅವರು ಚಿಗುರು ಎಂಬ ಪುಸ್ತಕ ಸಿದ್ಧಪಡಿಸಿ ಮಕ್ಕಳಿಗೆ ಪೂರೈಸಿದ್ದು, 12 ಸಾವಿರ ಮಕ್ಕಳಿಗೆ ಆ ಪುಸ್ತಕವನ್ನು ವಿತರಿಸಲಾಗಿದೆ. ಚಿಗುರು ಪುಸ್ತಕವೂ ಇದೇ ಮಾದರಿಯನ್ನೊಳಗೊಂಡಿದೆ. ಮಕ್ಕಳ ಕಲಿಕೆಗೆ ಪ್ರೇರೇಪಿಸಲು ಇದು ತುಂಬಾ ಸಹಕಾರಿಯಾಗಿದೆ. ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಲಿಕಾಮಟ್ಟ ಸುಧಾರಿಸಲು, ಮಕ್ಕಳಲ್ಲಿ ಪ್ರೇರೇಪಣೆ ಮೂಡಿಸಲು ಕಲಬುರಗಿ ವಿಭಾಗ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಫಲಿತಾಂಶ ಸುಧಾರಿಸಲಿ ಎಂದೆನ್ನುತ್ತಿದೆ ಪ್ರಜ್ಞಾವಂತ ವಲಯ.

~ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next