Advertisement

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೂ “ಉತ್ತರದಾಯಿತ್ವ”

10:13 AM Dec 28, 2019 | mahesh |

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಳೆದ
ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲ ವಿಷಯದಲ್ಲೂ ಉತ್ಕೃಷ್ಟ ಉತ್ತರ ನೀಡಿರುವ ಉತ್ತರ ಪ್ರತಿಗಳನ್ನು ವೆಬ್‌ ಸೈಟ್‌ನಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ.

Advertisement

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಅನುಕೂಲ ಕ್ಕಾಗಿ ಪದವಿ ಪೂರ್ವ ಇಲಾಖೆ 36 ವಿಷಯಗಳ ಉತ್ಕೃಷ್ಟ ಉತ್ತರ ಪ್ರತಿಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು. ಈ ಕುರಿತು “ಉದಯವಾಣಿ’ ಡಿ.26ರಂದು ಪಿಯುಸಿ ವಿದ್ಯಾರ್ಥಿಗಳಿಗೆ ಉತ್ತರ ದಾಯಿತ್ವ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು. ಈ ವರದಿಯ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಗಳಿಗೂ ಅನುಕೂಲವಾಗುವಂತೆ ಕಳೆದ ಸಾಲಿನ ಟಾಪರ್‌ಗಳ ಉತ್ತರ ಪತ್ರಿಕೆಯನ್ನು ವೆಬ್‌ ಸೈಟ್‌ನಲ್ಲಿ ಪ್ರಕಟಿಸಲು ಗುರುವಾರ ನಿರ್ದೇಶನ ನೀಡಿದ್ದಾರೆ.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ಕೃಷ್ಟ ಉತ್ತರ ಪ್ರತಿಗಳನ್ನು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸಚಿವರು ಪ್ರತಿ ತಿಂಗಳು ನಡೆಸುವ ಸಂವೇದನ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಹಲವರು ಕೋರಿಕೊಂಡಿದ್ದರು.

ಪಿಯು ಇಲಾಖೆ ಈಗಾಗಲೇ ಈ ಕ್ರಮ ಜಾರಿಗೆ ತಂದಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ಸಂಬಂಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಹಾಗೂ ವೆಬ್‌ಸೈಟ್‌ನಲ್ಲೂ ಈ ಬಗ್ಗೆ ಏನನ್ನೂ ಪ್ರಕಟಿಸಿಲ್ಲ. ಸಚಿವರ ಸೂಚನೆಯಂತೆ ಮಂಡಳಿ ನಿರ್ಧಾರ ತೆಗೆದುಕೊಂಡ ನಂತರ ವೆಬ್‌ಸೈಟ್‌ನಲ್ಲಿ //kseeb.kar.nic.in/ನಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಮಾಹಿತಿ ಲಭ್ಯವಾಗಲಿದೆ.

ಕಳೆದ ಸಾಲಿನ ಟಾಪರ್‌ ಉತ್ತರ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಯಾವುದೇ ಕ್ರಮ ಇನ್ನೂ ತೆಗೆದುಕೊಂಡಿಲ್ಲ. ಸಚಿವರ ನಿರ್ದೇಶನದಂತೆ, ಕಡತಗಳನ್ನು ಪರಿಶೀಲಿಸಿ
ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
● ವಿ. ಸುಮಂಗಳಾ, ನಿರ್ದೇಶಕಿ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next