ಯಳಂದೂರು: ಕೋವಿಡ್‌ನಿಂದ ಸತತ 2 ಕೋವಿಡ್ ವರ್ಷಗಳ ತರುವಾಯ ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆದ 8 ಹಾಗೂ 9ನೇ ತರಗತಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಪರೀಕ್ಷೆ ಬರೆಯುತ್ತಿದ್ದಾರೆ. ಈ ವರ್ಷ ಪರೀಕ್ಷೆಯಲ್ಲಿ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಕಾಂತರಾಜು ಕರೆ ನೀಡಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಬೀಳ್ಕೊಡುಗೆ ಹಾಗೂ ಪ್ರವೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಶಿಕ್ಷಣದಲ್ಲಿ ಪ್ರಗತಿ ಕಡಿಮೆ ಇದೆ. ನಮ್ಮ ಮಕ್ಕಳು ಬಹುತೇಕ ಗ್ರಾಮೀಣರೇ ಆಗಿದ್ದು ಇವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ತುರ್ತು ಬೇಕಿದೆ. ಜೊತೆಗೆ ಮೌಲ್ಯಾಧರಿತ ಶಿಕ್ಷಣ, ಮಕ್ಕಳಲ್ಲಿ ಸನ್ನಡತೆ, ಸಂಸ್ಕಾರ, ಸದ್ಭಾವನಾ ಗುಣಗಳನ್ನು ರೂಢಿಸಿಕೊಳ್ಳುವ ವ್ಯವಸ್ಥೆಯನ್ನು ಶಿಕ್ಷಣದಿಂದ ಮಾಡಬೇಕಿದೆ. ಜೊತೆಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಕಲಿಸುವ ಜರೂರತ್ತಿದೆ ಎಂದರು.
ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿರುಮಲಾಚಾರ್ ಮಾತನಾಡಿ, ನಮ್ಮ ತಾಲೂಕು ಶೈಕ್ಷಣಿಕ ಪ್ರಗತಿಯಲ್ಲಿ ಪ್ರತಿ ವರ್ಷವೂ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಕೋವಿಡ್ ಸಮಯದಲ್ಲಿ ಶಿಕ್ಷಕರು ವಿದ್ಯಾಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ. ಕೋವಿಡ್ ನಂತರ ಭೌತಿಕ ತರಗತಿಗಳು ಆರಂಭವಾಗಿ ಎಸ್ಸೆಸ್ಸೆಲ್ಸಿ ಮಕ್ಕಳು ಈಗ ಪರೀಕ್ಷೆ ಬರೆಯುತ್ತಿದ್ದಾರೆ. ಈ ವರ್ಷ ಶಿಕ್ಷಕರಿಗೆ ಇದು ಸವಾಲು ಆಗಿದೆ. ಮಕ್ಕಳನ್ನು ಕಲಿಕೆಯ ವಾಹಿನಿಗೆ ತರುವಲ್ಲಿ ಶಿಕ್ಷಕರು ಶ್ರಮ ವಹಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಗಳಿಗೆ ಉತ್ತಮ ಬೋಧನಾ ಸೌಲಭ್ಯಗಳನ್ನು ಒದಗಿಸಿದ್ದು ಶಾಸಕರು 600ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವ ಘೋಷಣೆಯನ್ನು ಮಾಡಿದ್ದಾರೆ. ಮಕ್ಕಳು ಉತ್ತಮವಾಗಿ ವ್ಯಾಸಂಗ ಮಾಡಿ ಉತ್ತಮ ಫಲಿತಾಂಶ ನೀಡಬೇಕು ಎಂದು ಸಲಹೆ ನೀಡಿದರು.
ನಂತರ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಣೆ ಮಾಡಲಾಯಿತು. ಪ್ರತಿ ಮಕ್ಕಳಿಗೂ ಗುಲಾಬಿ ಹೂವು ಹಾಗೂ ಕಿರುಕಾಣಿಕೆ ನೀಡುವ ಮೂಲಕ ಸ್ವಾಗತಿಸಲಾಯಿತು. ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ತಿರುಮಲಾಚಾರ್ ಹಾಗೂ ನೂತನವಾಗಿ ಆಗಮಿಸಿರುವ ಕೆ.ಕಾಂತರಾಜುರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಬಂಗಾರನಾಯಕ, ಉಪಪ್ರಾಂಶು ಪಾಲ ನಂಜುಂಡಯ್ಯ, ದೈಹಿಕ ಪರಿವೀಕ್ಷಕ ನಿಂಗರಾಜು, ಬಿಆರ್‌ಸಿ ರಂಗಸ್ವಾಮಿ, ಶಿಕ್ಷಕರಾದ ತ್ರಿವೇಣಿ, ಆಶಾ, ರೋಹಿಣಿ, ರೇವತಿ, ಚಂದ್ರಕಲಾ, ಪುಟ್ಟಸ್ವಾಮಿ ಸೇರಿದಂತೆ ಪ್ರಭಾವತಿ, ಜಡೇಗೌಡ, ನಾಗಮ್ಮ, ಮಂಜುಳಾ ಇದ್ದರು.