ಮುದ್ದೇಬಿಹಾಳ: ಎಸ್ಸೆಸ್ಸೆಲ್ಸಿ ಪರೀಕ್ಷೆ ಎರಡನೇ ದಿನ ಇಲ್ಲಿನ ಚಿನ್ಮಯ ಜೆಸಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸಮಾಜ ವಿಜ್ಞಾನ ಪತ್ರಿಕೆ ಬರೆಯುತ್ತಿದ್ದ ವಿದ್ಯಾರ್ಥಿನಿ ಬೇಬಿ ಈರಪ್ಪ ವಡ್ಡರ ಏಕಾಏಕಿ ಹೊಟ್ಟೆ ಮತ್ತು ಎದೆನೋವಿನಿಂದ ಅಸ್ವಸ್ಥಗೊಂಡಿದ್ದರಿಂದ ತಕ್ಷಣ ಕೇಂದ್ರದಲ್ಲಿದ್ದ ಆರೋಗ್ಯ ಸಿಬ್ಬಂದಿ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಅಂಬ್ಯೂಲೆನ್ಸ್ ಮೂಲಕ ತಾಲೂಕು ಸರ್ಕಾರಿ ಆಸ್ಪತ್ರಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿದ ಘಟನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.
ಈಕೆ ತಾಲೂಕಿನ ಯರಗಲ್ ಗ್ರಾಮದವಳಾಗಿದ್ದು ಇಲ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂದು ಅದೇ ಪ್ರೌಢಶಾಲೆಯ ಮುಖ್ಯಾದ್ಯಾಪಕರೂ ಆಗಿರುವ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಂ.ಎಸ್.ಕವಡಿಮಟ್ಟಿ ತಿಳಿಸಿದ್ದಾರೆ.
ವಿದ್ಯಾರ್ಥಿನಿಗೆ ತಾಲೂಕು ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಪರಶುರಾಮ ವಡ್ಡರ ಅವರು ಇಸಿಜಿ ಮಾಡಿ ತುರ್ತು ಚಿಕಿತ್ಸೆ ನೀಡಿದ್ದು ಆಕೆಯ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಇಟ್ಟುಕೊಳ್ಳಲಾಗಿದೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ತಿಳಿಸಿದರು. ವಿದ್ಯಾರ್ಥಿನಿಗೆ ಉತ್ತರ ಬರೆಯಲಾಗಿಲ್ಲ. ಹೀಗಾಗಿ ಆಕೆಯ ಉತ್ತರ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಕೊಠಡಿ ಮೇಲ್ವಿಚಾರಕರು ಇಸಿದುಕೊಂಡು ಆಕೆಯನ್ನು ಚಿಕಿತ್ಸೆಗೆ ಕಳಿಸಿದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು