ಬೆಂಗಳೂರು: ಪರೀಕ್ಷೆ ಸರಿಯಾಗಿ ಬರೆಯದ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಸಂಜಯನಗರದ ನಾಗಶೆಟ್ಟಿ ಹಳ್ಳಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ತಿಮ್ಮಪ್ಪ ಮತ್ತು ಸವಿತಾ ದಂಪತಿಯ ಪುತ್ರಿ ಸಂಜನಾ(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಆದರೆ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ ಕೆಲ ದಿನಗಳ ಹಿಂದಷ್ಟೇ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರಿಯಾಗಿ ಬರೆಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.
ಭಯಗೊಂಡು ಆತ್ಮಹತ್ಯೆ: ಸಂಜನಾ ತಂದೆ ತಿಮ್ಮಪ್ಪ ಕಾರು ಚಾಲಕರಾಗಿದ್ದು, ತಾಯಿ ಸವಿತಾ ಮನೆ ಕೆಲಸ ಮಾಡುತ್ತಾರೆ. ಸಂಜನಾ ಖಾಸಗಿ ಶಾಲೆಯಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದು, ಪರೀಕ್ಷೆಯಲ್ಲಿ ಸರಿಯಾಗಿ ಬರೆಯಲು ಸಾಧ್ಯವಾಗಿಲ್ಲ ಎಂದು ಪೋಷಕರ ಬಳಿ ಸಂಜನಾ ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ.
ಮಂಗಳವಾರ ಪ್ರಕಟಗೊಳ್ಳುವ ಪರೀಕ್ಷೆ ಫಲಿತಾಂಶದಲ್ಲಿ ಅನುತ್ತೀರ್ಣಗೊಳ್ಳುತ್ತೇನೆ ಎಂಬ ಭಯದಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು. ಏ.28ರಂದೇ ತಿಮ್ಮಪ್ಪ ಕಾರ್ಯನಿಮಿತ್ತ ಶಿವಮೊಗ್ಗಕ್ಕೆ ಹೋಗಿದ್ದು, ತಾಯಿ ಸವಿತಾ ಏ.29ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗಿದ್ದಾರೆ.
ಈ ವೇಳೆ ಸಂಜನಾ ಮನೆಯ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ತಾಯಿ ಸವಿತಾ ಮನೆಗೆ ಬಂದಾಗ ಒಳಭಾಗದಿಂದ ಬಾಗಿಲು ಲಾಕ್ ಆಗಿತ್ತು.
ಸಾಕಷ್ಟು ಬಾರಿ ಬಾಗಿಲು ಬಡಿದರೂ ಸಂಜನಾ ಪ್ರತಿಕ್ರಿಯೆ ನೀಡಿಲ್ಲ. ಅನುಮಾನಗೊಂಡ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣ ಸಂಜಯನಗರ ಠಾಣೆಯಲ್ಲಿ ದಾಖಲಾಗಿದೆ.