ಮಂಗಳೂರು: ಕಳೆದ ವರ್ಷ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ವರ್ಷ ದ್ವಿತೀಯ ಸ್ಥಾನಕ್ಕೇರಿದೆ. ಅಷ್ಟೇ ಅಲ್ಲದೆ ಪುತ್ತೂರು ತಾಲೂಕಿನ ಕಡಬ ಸಂತ ಜೋಕಿಮ್ಸ್ ಪ್ರೌಢಶಾಲೆಯ ಪೂರ್ಣಾನಂದ ಎಚ್. 625ಕ್ಕೆ 625 ಅಂಕಗಳನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಮೊದಲ ಸ್ಥಾನದೊಂದಿಗೆ ದ್ವಿತೀಯ, ತೃತೀಯ ಸ್ಥಾನವನ್ನೂ ದ.ಕ.ಜಿಲ್ಲೆ ಪಡೆದು ಕೊಂಡಿರುವುದು ವಿಶೇಷ. ಅದರಲ್ಲಿಯೂ ಪೂರ್ಣಾನಂದ ಕನ್ನಡ ಮಾಧ್ಯಮದಲ್ಲಿ ಕಲಿತು ಪ್ರಥಮ ಸ್ಥಾನ ಗಳಿಸಿರುವುದು ಶ್ಲಾಘ ನೀಯ. ಆದರೆ ಕಳೆದ ಸಾಲಿನಲ್ಲಿ ಏಕೈಕ ವಿದ್ಯಾರ್ಥಿ 624 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದರು.
ಈ ಬಾರಿ ಮಂಗಳೂರಿನ ಸಂತ ಆ್ಯಗ್ನೇಸ್ ಹೆಣ್ಣು ಮಕ್ಕಳ ಪ್ರೌಢಶಾಲೆಯ ವಿದ್ಯಾರ್ಥಿನಿ ಜಯಾನಿ ರೋಹಿನಾಥ್ 624 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಅಲ್ಲದೆ ಬಜಪೆ ಸಂತ ಜೋಸೆಫ್ ಜ್ಯೂನಿಯರ್ ಕಾಲೇಜಿನ ನೋಯಲ್ ಡಿಕೋಸ್ತಾ, ಮೂಡಬಿದಿರೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಆಕಾಶ್ ಎಂ. ನಾೖರಿ ಹಾಗೂ ದೀಕ್ಷಾ ಎಂ.ಎನ್. ತಲಾ 623 ಅಂಕಗಳೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಜಿಲ್ಲೆಗೆ ಶೇ. 82.39 ಫಲಿತಾಂಶ: ರಾಜ್ಯದ ಒಟ್ಟು ಫಲಿತಾಂಶ ಪಟ್ಟಿಯಲ್ಲಿ ಈ ಬಾರಿ ದ.ಕ. ಜಿಲ್ಲೆಯು ದ್ವಿತೀಯ ಸ್ಥಾನಕ್ಕೇರಿದ್ದರೂ ಶೇಕಡಾವಾರು ಲೆಕ್ಕಾಚಾರದಲ್ಲಿ ಫಲಿತಾಂಶವು ಕುಸಿತಗೊಂಡಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಗೆ 88.01 ಶೇ. ಫಲಿತಾಂಶ ಲಭಿಸಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಶೇಕಡವಾರು ಫಲಿತಾಂಶ 82.39ರಷ್ಟು ದಾಖಲಾಗಿದೆ. ಈ ಹಿಂದಿನ ಶೈಕ್ಷಣಿಕ ವರ್ಷಗಳಿಗೆ ಹೋಲಿಸಿದರೆ ದ.ಕ.ಜಿಲ್ಲೆಯು 2014-15ರಲ್ಲಿ ರಾಜ್ಯದಲ್ಲಿ 8ನೇ ಸ್ಥಾನ (89.35 ಶೇ.), 2013-14ನೇ ಸಾಲಿನಲ್ಲಿ 29ನೇ ಸ್ಥಾನ (79 ಶೇ.), 2012-13ಧಿರಲ್ಲಿ 26ನೇ ಸ್ಥಾನ (82.36 ಶೇ.), 2011-12ರಲ್ಲಿ 7ನೇ ಸ್ಥಾನ (90 ಶೇ.) ಹಾಗೂ 2010-11ರಲ್ಲಿ 21ನೇ ಸ್ಥಾನಧಿ (83.05 ಶೇ.) ಪಡೆದಿತ್ತು. ಕಳೆದ ಸತತ 6 ವರ್ಷಗಳಿಗೆ ಹೋಲಿಸಿದರೆ ಸ್ಥಾನಗಳ ಲೆಕ್ಕಾಚಾರದಲ್ಲಿ ಈ ಬಾರಿ ಜಿಲ್ಲೆ ಗಣನೀಯ ಪ್ರಗತಿ ಸಾಧಿಸಿರುವುದು ಗಮನಾರ್ಹ.