Advertisement
ರ್‍ಯಾಂಕಿಂಗ್ ವ್ಯವಸ್ಥೆ ಜಾರಿಯಲ್ಲಿದ್ದಾಗ ಪ್ರತಿವರ್ಷ ಮೊದಲ ಹತ್ತು ರ್‍ಯಾಂಕ್‌ಗಳು ಮೈಸೂರಿಗೆ ಮೀಸಲು ಎಂಬಂತಿದ್ದ ಜಿಲ್ಲೆಯಲ್ಲಿ 2015-16ನೇ ಸಾಲಿನಲ್ಲಿ 8 ನೇ ಸ್ಥಾನಗಳಿಸಿದ್ದರೆ, ಈ ವರ್ಷ 21ನೇ ಸ್ಥಾನಕ್ಕೆ ಕುಸಿದು ತಲೆತಗ್ಗಿಸುವಂತೆ ಮಾಡಿದೆ. ಸ್ವತ್ಛ ಭಾರತ್ ಸರ್ವೇಕ್ಷಣೆಯಲ್ಲಿ ಸತತ ಎರಡು ಬಾರಿ ಪ್ರಥಮ ಸ್ಥಾನ ಬಂತು ಎಂದು ಬೀಗುವ ಮೈಸೂರಿನ ಆಡಳಿತ ಶೈಕ್ಷಣಿಕ ವ್ಯವಸ್ಥೆಗೆ ಮಹತ್ವ ನೀಡದಿರುವುದನ್ನು ಈ ಫಲಿತಾಂಶ ತೋರಿಸುತ್ತದೆ.
Related Articles
Advertisement
ಖಾಲಿ ಹುದ್ದೆ ಸಮಸ್ಯೆ: ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧನೆಗೆ ಶಾಲಾ ಶಿಕ್ಷಕರ ಕೊರತೆಯೂ ಕಾರಣ ಎನ್ನಲಾಗುತ್ತಿದೆ. ಜಿಲ್ಲೆಯ 232 ಸರ್ಕಾರಿ ಪ್ರೌಢಶಾಲೆಗಳಲ್ಲಿ 336 ಶಿಕ್ಷಕರ ಹುದ್ದೆ ಖಾಲಿ ಇದೆ. ಇವುಗಳನ್ನು ತುಂಬುವ ಗೋಜಿಗೇ ಹೋಗಿಲ್ಲ ಸರ್ಕಾರ. ಇನ್ನು ಪಾಠ-ಪ್ರವಚನಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅತಿಥಿ ಶಿಕ್ಷಕರುಗಳನ್ನು ನೇಮಕಮಾಡಿಕೊಳ್ಳಲು ಅನುಮತಿ ನೀಡಿತಾದರೂ ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು.
336 ಶಿಕ್ಷಕರ ಹುದ್ದೆ ಖಾಲಿ ಇದ್ದರೆ, ಸರ್ಕಾರ ಕೇವಲ 98 ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಿತು. ಅದೂ ಕೂಡ ನವೆಂಬರ್ ತಿಂಗಳಲ್ಲಿ. ಒಟ್ಟು ಖಾಲಿಯಿದ್ದ ಶಿಕ್ಷಕರಲ್ಲಿ ಮೂರನೇ ಒಂದರಷ್ಟು ಹುದ್ದೆಯನ್ನು ಅತಿಥಿ ಶಿಕ್ಷಕರ ಮೂಲಕ ಭರ್ತಿ ಮಾಡಿಕೊಂಡರೂ ಆ ಶಿಕ್ಷಕರು ಒಂದು ಶಾಲೆಯಲ್ಲಿ ಕೂಡ ನಿಯಮಿತವಾಗಿ ಬೋಧನೆ ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ ಅವರನ್ನು ಈ ಶಾಲೆಗೆ ಮೂರು ದಿನ, ಮತ್ತೂಂದು ಶಾಲೆಗೆ ಮೂರು ದಿನಗಳಂತೆ ಕಳುಹಿಸಿಕೊಡಲಾಯಿತು.
ಇದರಿಂದಾಗಿ ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಸಾಧ್ಯವಾಗಲೇ ಇಲ್ಲ. ಇದರ ಪರಿಣಾಮ ಫಲಿತಾಂಶದ ಮೇಲಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು. ದಶಕಗಳ ಹಿಂದೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟದ ಸಂದರ್ಭ ಬಂದರೆ ಇಡೀ ರಾಜ್ಯ ಮೈಸೂರಿನತ್ತ ನೋಡುತ್ತಿದ್ದ ದಿನಗಳು ಮತ್ತೆ ಬರಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಇನ್ನಾದರೂ ಶಿಕ್ಷಣ ಕ್ಷೇತ್ರಕ್ಕೆ ಮಹತ್ವವನ್ನು ನೀಡಬೇಕಿದೆ ಎನ್ನುತ್ತಾರೆ ಶಿಕ್ಷಣ ಪ್ರೇಮಿಗಳು.
ಮೈಸೂರು ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 21ನೇ ಸ್ಥಾನಕ್ಕೆ ಕುಸಿದಿರುವುದು ತುಂಬಾ ನೋವು ತಂದಿದೆ. ಈ ರೀತಿಯ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಫಲಿತಾಂಶ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಕಾರ್ಯಕ್ರಮಗಳನ್ನೂ ಮಾಡಲಾಗಿತ್ತು. ಎಲ್ಲಿ ಎಡವಿದ್ದೇವೆ ಎಂಬುದನ್ನು ಇನ್ನಷ್ಟೆ ತಿಳಿದುಕೊಂಡು ಸರಿಪಡಿಸಿಕೊಳ್ಳಬೇಕಿದೆ.-ಎಚ್.ಆರ್.ಬಸಪ್ಪ, ಡಿಡಿಪಿಐ