Advertisement

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ: ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ

06:50 AM May 01, 2019 | Lakshmi GovindaRaju |

ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫ‌ಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಶೇ.84.5 ಫ‌ಲಿತಾಂಶ ಪಡೆದು 7 ಸ್ಥಾನದಲ್ಲಿದ್ದ ಹಾಸನ ಜಿಲ್ಲೆ ಈ ವರ್ಷ ಶೇ.89.3 ಫ‌ಲಿತಾಂಶದೊಂದಿಗೆ ಮೊದಲ ಸ್ಥಾನ ಪಡೆಕೊಂಡಿದೆ.

Advertisement

2012 -13 ನೇ ಸ್ಥಾನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 3 ನೇ ಸ್ಥಾನ ಪಡೆದಿದ್ದನ್ನು ಬಿಟ್ಟರೆ ಹಿಂದೆಂದೂ ಪ್ರಥಮ ಸ್ಥಾನ ಪಡೆದಿರಲಿಲ್ಲ. ಈ ವರ್ಷ ಟಾಪ್‌ -5 ಸ್ಥಾನದಲ್ಲಿರುವ ಗುರಿಯೊಂದಿಗೆ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಿತ್ತು. ಆದರೆ ರಾಜ್ಯದಲ್ಲಿ ಪ್ರಥಮ ಸ್ಥಾನದ ಬಂಪರ್‌ ಗಳಿಸಿಕೊಂಡಿದೆ.

17,689 ವಿದ್ಯಾರ್ಥಿಗಳು ಉತ್ತೀರ್ಣ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 19,709 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 17,689 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 89.33 ಫ‌ಲಿತಾಂಶ ದಾಖಲಾಗಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಜಿಲ್ಲೆಯ ಒಟ್ಟು 512 ಪ್ರೌಢ ಶಾಲೆಗಳ ಪೈಕಿ 86 ಸರ್ಕಾರಿ ಶಾಲೆಗಳು, 16 ಅನುದಾನಿತ ಶಾಲೆಗಳು, 45 ಅನುದಾನ ರಹಿತ ಶಾಲೆಗಳು ಶೇ.100 ಫ‌ಲಿತಾಂಶ ಪಡೆದುಕೊಂಡಿವೆ. ಕನ್ನಡ ಮಾಧ್ಯಮದಲ್ಲಿ ಶೇ.86.5, ಆಂಗ್ಲ ಮಾಧ್ಯಮದಲ್ಲಿ ಶೇ.94.28, ಉರ್ದು ಮಾಧ್ಯಮದಲ್ಲಿ ಶೇ.43.33 ಫ‌ಲಿತಾಂಶ ಬಂದಿದೆ.
ಸರ್ಕಾರಿ ಶಾಲೆಗಳಲ್ಲಿ ಶೇ.89.03,ಅನುದಾನಿತ ಶಾಲೆಗಳಲ್ಲಿ ಶೇ.86.88 ಮತ್ತು ಅನುದಾನ ರಹಿತ ಶಾಲೆಗಳಿಗೆ ಶೇ.94.05 ಫ‌ಲಿತಾಂಶ ಲಭಿಸಿದೆ.

ಒಂದು ಶಾಲೆಗೆ ಶೂನ್ಯ ಫ‌ಲಿತಾಂಶ: ಸಕಲೇಶಪುರ ಪಟ್ಟಣದ ಕುಶಾಲ ನಗರ ಬಡಾವಣೆಯ ಎಸ್‌.ಮಾನಸ ಪ್ರೌಢಶಾಲೆ ಶೂನ್ಯ ಫ‌ಲಿತಾಂಶ ಪಡೆದಿದೆ.

ಸಕಲೇಶಪುರ ತಾಲೂಕು ಪ್ರಥಮ: ತಾಲೂಕುವಾರು ಫ‌ಲಿತಾಂಶದಲ್ಲಿ ಸಕಲೇಶಪುರ ತಾಲೂಕು ಶೇ.91.13ರಷ್ಟು ಫ‌ಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಆಲೂರು – ಶೇ.89.65, ಚನ್ನರಾಯಪಟ್ಟಣ – ಶೇ.88.93,ಅರಸೀಕೆರೆ – ಶೇ.84.98, ಹೊಳೆನರಸೀಪುರ ಶೇ.84.58, ಹಾಸನ -ಶೇ. 83.54, ಬೇಲೂರು ತಾಲೂಕು ಶೇ. 77.68 ಫ‌ಲಿತಾಂಶ ಪಡೆದಿದೆ. ತಾಲೂಕುವಾರು ಫ‌ಲಿತಾಂಶದಲ್ಲಿ ಸಕಲೇಶಪುರ ಪ್ರಥಮ ಸ್ಥಾನ ಪಡೆದಿದ್ದು, ಬೇಲೂರು ಕಡೆಯ ಸ್ಥಾನ ಪಡೆದಿರುತ್ತದೆ.

Advertisement

ಮೂಲ ಸೌಕರ್ಯ ಕಲ್ಪಿಸಿದ್ದಕ್ಕೆ ಫ‌ಲ ಸಿಕ್ಕಿದೆ: ರೇವಣ್ಣ
ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫ‌ಲಿತಾಂಶದಲ್ಲಿ ಹಾಸನ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಪಡೆದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ. ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಶಿಕ್ಷಕರ ಮೇಲೆ ಒತ್ತಡ ಹೇರಿದ್ದಕ್ಕೆ ಈಗ ಫ‌ಲ ಸಿಕ್ಕಿದೆ ಎಂದೂ ಅವರು ಹೇಳಿದ್ದಾರೆ.

ನಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದ್ದು, ಜಿಲ್ಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಈ ಮೂಲ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಂಡು ಹಗಲಿರುಳು ಶ್ರಮ ಪಟ್ಟು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ, ಮಕ್ಕಳ ಓದಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿದ ಪೋಷಕರಿಗೆ ಹಾಗೂ ಮಕ್ಕಳ ಕಲಿಕೆಗ ಹೆಚ್ಚು ಶ್ರಮಿಸಿದ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಅನುಕೂಲವಾಗುವಂತೆ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಜೊತೆಗೆ ವೈದ್ಯಕೀಯ, ಇಂಜಿನಿಯರಿಂಗ್‌, ಕೃಷಿ, ಪಶುವೈದ್ಯಕೀಯ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದಿಂದಲೇ ಸ್ಥಾಪಿಸಿದ್ದು ಸಾರ್ಥಕವಾಯಿತು ಎಂದಿದ್ದಾರೆ.

ಸುಧಾರಣಾ ಕ್ರಮಗಳು ಯಶಸ್ವಿ: ಭವಾನಿ ರೇವಣ್ಣ
ಹಾಸನ: ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಶ್ರಮಿಸಿದ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರು ಅಭಿನಂದಿಸಿದ್ದಾರೆ.

ಜಿಲ್ಲಾ ಪಂಚಾಯಿತಿಯ ಪ್ರತಿ ಸಭೆಗಳಲ್ಲೂ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸಿ, ಪ್ರೋತ್ಸಾಹಿ ಉತ್ತಮ ಫ‌ಲಿತಾಂಶ ತರಿಸಬೇಕೆಂದು ಒತ್ತಡ ತರಲಾಗುತ್ತಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಅವರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಎಲ್ಲಾ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಭೆ ನಡೆಸಿ ಕಳಪೆ ಫ‌ಲಿತಾಂಶ ಬಂದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರು.

ಜಿಪಂ ಸ್ಥಾಯಿ ಸಮಿತಿಯ ಎಲ್ಲಾ ಸಭೆಗಳಲ್ಲೂ ಡಿಡಿಪಿಐ ಅವರಿಗೆ ಫ‌ಲಿತಾಂಶ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗುತ್ತಿತ್ತು. ಆ ನಿಟ್ಟಿನಲ್ಲಿ ಅವರೂ ಶ್ರಮಿಸಿದ್ದಾರೆ. ಅದರ ಫ‌ಲವಾಗಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡದು ದಾಖಲೆ ನಿರ್ಮಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂದಿನ ವರ್ಷಗಳಲ್ಲೂ ಇದೇ ರೀತಿಯ ಶ್ರಮ ವಹಿಸುವಂತೆ ಸಲಹೆ ನೀಡಲು ಹಾಗೂ ವಿದ್ಯರ್ಥಿಗಳು, ಶಿಕ್ಷಕರು, ಪೋಷಕರಿಗೆ ಅಭಿನಂದಿಸಲು ಜಿಲ್ಲಾ ಪಂಚಾಯಿತಿಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮಗೆ ಈಗ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ: ಡಿಡಿಪಿಐ
ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಸನ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಡಿಡಿಪಿಐ ಮಂಜುನಾಥ್‌ ಅವರು , ಈಗ ನಮಗೆ ಜವಾಬ್ದಾರಿ ಹೆಚ್ಚಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ಹಾಸನ ಜಿಲ್ಲೆ ಎಸ್ಸೆಸ್ಸೆಲ್ಸಿ ಫ‌ಲಿತಾಂಶದಲ್ಲಿ 7ನೇ ಸ್ಥಾನದಲ್ಲಿತ್ತು. ಈ ವರ್ಷ ಟಾಪ್‌ -5ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿಟ್ಟುಕೊಂಡು ಶ್ರಮ ಹಾಕಿದ್ದೆವು. ಶ್ರಮ ಫ‌ಲ ಕೊಟ್ಟಿದೆ. ವಿಶೇಷ ತರಗತಿಗಳನ್ನು ನಿರಂತರವಾಗಿ ನಡೆಸಲಾಗಿತ್ತು. ರಜೆಯಲ್ಲೂ ವಿಶೇಷ ತರಗತಿಗಳು ಎಲ್ಲಾ ಶಾಲೆಗಳಲ್ಲೂ ನಡೆದಿದ್ದವು.

ತಾಯಂದಿರ ಸಭೆಗಳನ್ನು ಶಾಲೆಯಲ್ಲಿ ಆಗಿಂದಾಗ ನಡೆಸಿ ವಿದ್ಯಾರ್ಥಿಗಳ ಪ್ರಗತಿ ವಿವರ ನೀಡಿ ಮನೆಯಲ್ಲಿ ಮಕ್ಕಳ ಓದಿನ ಮೇಲೆ ನಿಗಾ ವಹಿಸುವಂತೆ ಶಿಕ್ಷಕರು ಸಲಹೆ ನೀಡುತ್ತಿದ್ದರು. ಪಾಸಿಂಗ್‌ ಪ್ಯಾಕೇಜ್‌ ಅಂದರೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಕನಿಷ್ಠ 35 ಅಂಕ ಪಡೆಯುವಂತೆ ತರಬೇತಿ ನೀಡಲಾಗಿತ್ತು.

ಶಿಕ್ಷಕರಿಗೆ ಡಯಟ್‌(ಜಿಲ್ಲಾಶಿಕ್ಷಣ ತರಬೇತಿ ಸಂಸ್ಥೆ)ನಿಂದ ತರಬೇತಿ ಕೊಡಿಸಲಾಗಿತ್ತು. ಡಿಸೆಂಬರ್‌ಗೆ ಪಠ್ಯಕ್ರಮ ಬೋಧನೆ ಮುಗಿಸಿ ಪರೀಕ್ಷೆವರೆಗೂ ಪುನರ್‌ಮನನ ತರಗತಿಗಳನ್ನು ಶ್ಕಿಷಕರು ನಡೆಸಿದ್ದರು. ಅದೆಲ್ಲದರ ಫ‌ಲ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಈ ದೊರೆತಿರುವ ಮೊದಲ ಸ್ಥಾನವನ್ನು ಮುಂದಿನ ವರ್ಷಗಳಲ್ಲಿ ಉಳಿಸಿಕೊಳ್ಳುವ ದೊಡ್ಡ ಸವಾಲು ನಮ್ಮ ಮೇಲಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವೆವು ಎಂದರು.

ಜಿಲ್ಲಾಧಿಕಾರಿ, ಸಿಇಒ ಅಭಿನಂದನೆ
ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್‌. ಜಯ ಪ್ರಕಾಶ್‌ ಅವರು ಹರ್ಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳು ಶಿಕ್ಷಕರು, ಪೋಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ಗುಣಮಟ್ಟ ಮುಂದಿನ ದಿನಗಳಲ್ಲಿಯೂ ಕಾಯ್ದಿರಿಸಿಕೊಂಡು ರಾಜ್ಯಕ್ಕೆ ಸದಾ ಮಾದರಿಯಾಗಿರುವಂತೆ ಅವರು ಶುಭ ಹಾರೈಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ‌ ಮಂಜುನಾಥ್‌ ಅವರು ಸಹ ಎಸ್ಸೆಸ್ಸೆಲ್ಸಿ ಫ‌ಲಿತಾಂಶದ ಈ ಸಾಧನೆಗೆ ಸಹಕರಿಸಿದ ಎಲ್ಲಾರಿಗೂ ಕೃತಜ್ಞತೆ ಹಾಗೂ ಅಭಿನಂದನೆ ಸಲ್ಲಿಸಿದ್ದಾರೆ.

ಅಬಿನ್‌, ಪ್ರಗತಿ ಎಂ.ಗೌಡಗೆ 2 ನೇ ರ್‍ಯಾಂಕ್‌
ಹಾಸನ: ನಗರದ ವಿಜಯಾ ಇಂಗ್ಲಿಷ್‌ ಶಾಲೆಯ ವಿದ್ಯಾರ್ಥಿಗಳಾದ ಬಿ.ಅಭಿನ್‌ ಮತ್ತು ಪ್ರತಿ ಎಂ.ಗೌಡ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 624 ಅಂಕಗಳನ್ನು ಪಡೆದು ರಾಜ್ಯದಲ್ಲಿ 2 ನೇ ಸ್ಥಾನ ಪಡೆದಿದ್ದಾರೆ.

ಪ್ರಗತಿ ಎಂ.ಗೌಡ ಅವರು ಕನ್ನಡದಲ್ಲಿ 124 ಅಂಕಗಳನ್ನು ಪಡೆದಿದ್ದು, ಇನ್ನುಳಿದ ಎಲ್ಲಾ 5 ವಿಷಯಗಳಲ್ಲೂ 100ಕ್ಕೆ 100 ಅಂಕಗಳನ್ನು ಪಡೆದಿದ್ದರೆ, ಬಿ. ಅಭಿನ್‌ ಹಿಂದಿಯಲ್ಲಿ 99 ಅಂಕಗಳನ್ನು ಪಡೆದಿದ್ದು, ಇನ್ನುಳಿದ ಎಲ್ಲಾ 5 ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next