ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಸರ್ಕಾರಿ ಆದರ್ಶ ಆರ್.ಎಂ.ಎಸ್.ಎ. ಶಾಲೆಯ ವಿದ್ಯಾರ್ಥಿನಿ ಢವಳಗಿ ಗ್ರಾಮದ ಪವಿತ್ರಾ ಮಡಿವಾಳಪ್ಪ ಗೌಡ ಕೊಣ್ಣೂರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಇಂಗ್ಲೀಷ್ ಮಾಧ್ಯಮ ವಿಭಾಗದಲ್ಲಿ 623 ಅಂಕ ಪಡೆದು ರಾಜ್ಯಕ್ಕೆ 3ನೇ ಮತ್ತು ವಿಜಯಪುರ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾಳೆ.
ಇಂಗ್ಲೀಷ್ ಮತ್ತು ವಿಜ್ಞಾನದಲ್ಲಿ ತಲಾ 99 ಅಂಕ, ಕನ್ನಡದಲ್ಲಿ 125, ಉಳಿದೆಲ್ಲ ವಿಷಯಗಳಿಗೆ 100 ಅಂಕ ಗಳಿಸಿದ್ದಾಳೆ.
ಇವರ ತಂದೆ ಪಿಯುಸಿವರೆಗೆ ಓದಿದ್ದು ಕಲಬುರ್ಗಿ ಸಾರಿಗೆ ಘಟಕದಲ್ಲಿ ಕಂಡಕ್ಟರ್ ಆಗಿದ್ದಾರೆ. ತಾಯಿ ಎಸ್ಸೆಸ್ಸೆಲ್ಸಿವರೆಗೆ ಓದಿದ್ದು ಗೃಹಿಣಿಯಾಗಿದ್ದಾರೆ.
ಹಾರ್ಡ್ ವರ್ಕ್ ಗಿಂತ ಸ್ಮಾರ್ಟ್ ವರ್ಕ್ ಗೆ ಒತ್ತು ಕೊಟ್ಟಿದ್ದು, ಈ ಸಾಧನೆಗೆ ಅವಕಾಶವಾಗಿದೆ ಎಂದಿರುವ ಆಕೆ ಉತ್ತಮ ಮಾರ್ಗದರ್ಶನ ನೀಡಿದ ಶಾಲೆಯ ಎಚ್ಎಂ, ಶಿಕ್ಷಕರನ್ನು ಸ್ಮರಿಸುತ್ತಾಳೆ. ಪಿಯುಸಿ ವಿಜ್ಞಾನದ ನಂತರ ಎಂಬಿಬಿಎಸ್ ಮಾಡುವ ಕನಸು ಈಕೆಯದ್ದಾಗಿದೆ.
ಫಲಿತಾಂಶ ಹೊರಬಿದ್ದ ಕೂಡಲೇ ತಂದೆ, ತಾಯಿ ಜೊತೆ ಶಾಲೆಗೆ ಬಂದಿದ್ದ ಪವಿತ್ರಾಳನ್ನು ಬಿಇಓ ಬಿ.ಎಸ್. ಸಾವಳಗಿ, ಇಸಿಓ ಮತ್ತು ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಎಚ್.ಎ.ಮೇಟಿ, ಎಚ್ಎಂ ನೀಲಮ್ಮ ತೆಗ್ಗಿನಮಠ, ಶಿಕ್ಷಕರು ಸನ್ಮಾನಿಸಿ, ಸಿಹಿ ತಿನ್ನಿಸಿ ಶುಭ ಕೋರಿದರು.