Advertisement

ಎಸೆಸೆಲ್ಸಿ ಫಲಿತಾಂಶ: ಪ್ರಥಮ ಸ್ಥಾನದ ಗುರಿ

11:04 PM Feb 19, 2020 | mahesh |

ಪುತ್ತೂರು: ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಕ್ಕಳ ಸಾಧನೆಗೆ ಪೂರಕವಾಗಿ ರಾಜ್ಯದಲ್ಲಿಯೇ ಮಿಷನ್‌ 95+ ನಂತಹ ಮಹತ್ವದ ಯೋಜನೆಗಳನ್ನು ರೂಪಿಸಿದ ಹೆಗ್ಗಳಿಕೆ ಪಡೆದಿರುವ ಪುತ್ತೂರು ಶಿಕ್ಷಣ ಇಲಾಖೆಯು ಈ ಬಾರಿ ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ನೆಗೆಯುವ ಗುರಿಯನ್ನಿರಿಸಿಕೊಂಡಿದೆ.

Advertisement

ಮಧ್ಯದಲ್ಲಿ ಸಿದ್ಧತೆಗೆ ಸಂಬಂಧಿಸಿ ಒಂದಷ್ಟು ನಿಧಾನಗತಿಗೆ ಜಾರಿದವರೂ ಕೊನೆಯ ಹಂತದಲ್ಲಿ ಸಮರೋಪಾದಿಯ ಉತ್ಸಾಹದಲ್ಲಿ ಇಲಾಖೆ ಮುನ್ನಡೆಯುತ್ತಿದೆ. ತಾಲೂಕಿಗೆ ಶೇ. 90 ಮಿಕ್ಕಿ ಫಲಿತಾಂಶ ಪಡೆಯುವ ಗುರಿಯನ್ನು ಇಟ್ಟುಕೊಂಡಿದೆ. ತಾಲೂಕಿನ ಸರಕಾರಿ, ಅನುದಾನಿತ, ಅನುದಾನರಹಿತ ಮತ್ತು ಮೊರಾರ್ಜಿ ದೇಸಾಯಿ ಶಾಲೆ ಸೇರಿದಂತೆ ಒಟ್ಟು 78 ಪ್ರೌಢಶಾಲೆಗಳ ಒಟ್ಟು 4,786 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ರಾತ್ರಿಯೂ ಪಾಠ
ಸುಳ್ಯಪದವು ಸರ್ವೋದಯ ಪ್ರೌಢಶಾಲೆ, ಶ್ರೀ ರಾಮಕೃಷ್ಣ ಪ್ರೌಢಶಾಲೆ, ದುರ್ಗಾಂಬ ಪ್ರೌಢಶಾಲೆ ಆಲಂಕಾರು, ಸುಬೋಧ ಪ್ರೌಢಶಾಲೆ ಪಾಣಾಜೆ, ಸರಕಾರಿ ಪ್ರೌಢಶಾಲೆ ಕಬಕ ಹಾಗೂ ನಗರದ ಸರಕಾರಿ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ನೆರವಿನೊಂದಿಗೆ ರಾತ್ರಿ ಶಾಲೆಗಳನ್ನು ನಡೆಸುವ ಮೂಲಕ ಮಕ್ಕಳ ಪರೀಕ್ಷಾ ತಯಾರಿ ನಡೆಸಲಾಗುತ್ತಿದೆ.

0-14 ಅಂಕದ ಮಕ್ಕಳಿಗೆ ಆದ್ಯತೆ
ಎಸೆಸೆಲ್ಸಿ ಪಬ್ಲಿಕ್‌ ಪರೀಕ್ಷೆಗೆ ಹಾಜರಾಗುವ ಮಕ್ಕಳನ್ನು ತಯಾರು ಮಾಡುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಪೂರ್ವ ತಯಾರಿ ಪರೀಕ್ಷೆ ನಡೆಸಲಾಗಿದ್ದು, ಕಲಿಕೆಯಲ್ಲಿ ಹಿಂದುಳಿದ ಹಾಗೂ ಪೂರ್ವ ತಯಾರಿ ಪರೀಕ್ಷೆಯಲ್ಲಿ 0-14 ಅಂಕಗಳನ್ನು ಪಡೆದ ಸುಮಾರು 750 ಮಕ್ಕಳನ್ನು ಗುರುತಿಸಲಾಗಿದೆ. ಮಕ್ಕಳ ಬಗ್ಗೆ ವಿಶೇಷ ಆದ್ಯತೆ ನೀಡಿ ಅವರಿಗೆ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಮಕ್ಕಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ 300 ಭಾಷಾ ಶಿಕ್ಷಕರು ಮತ್ತು 350 ಗಣಿತ, ವಿಜ್ಞಾನ, ಸಮಾಜ ಶಿಕ್ಷಕರಿಗೆ ವಿಶೇಷ ಮಾಹಿತಿ ಶಿಬಿರ ನಡೆಸಲಾಗಿದೆ. ವಿವಿಧ ಇಲಾಖೆ, ಸ್ವಯಂಸೇವಾ ಸಂಘಟನೆಗಳೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಜಿ.ಪಂ. ಸದಸ್ಯರು, ತಾ.ಪಂ. ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜನಪ್ರತಿನಿಧಿಗಳು ಈ ಮನೆ ಭೇಟಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

12 ಪರೀಕ್ಷಾ ಕೇಂದ್ರ
ತಾಲೂಕಿನ 23 ಸರಕಾರಿ ಪ್ರೌಢಶಾಲೆಯ 675 ಗಂಡು ಮಕ್ಕಳು ಮತ್ತು 650 ಹೆಣ್ಣುಮಕ್ಕಳು, 22 ಅನುದಾನಿತ ಪ್ರೌಢಶಾಲೆಯ 702 ಗಂಡು, 823 ಹೆಣ್ಣುಮಕ್ಕಳು, 32 ಅನುದಾನಿತ ರಹಿತ ಪ್ರೌಢಶಾಲೆಯ 1,021 ಗಂಡು ಮಕ್ಕಳು ಮತ್ತು 880 ಹೆಣ್ಣುಮಕ್ಕಳು ಹಾಗೂ 1 ಮೊರಾರ್ಜಿ ದೇಸಾಯಿ ಪ್ರೌಢಶಾಲೆಯ 15 ಗಂಡುಮಕ್ಕಳು ಹಾಗೂ 20 ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 2,413 ಗಂಡು ಮಕ್ಕಳು ಹಾಗೂ 2,373 ಹೆಣ್ಣುಮಕ್ಕಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 12 ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಲಾಗಿದ್ದು, 208 ಕೊಠಡಿ ವ್ಯವಸ್ಥೆ ಹಾಗೂ 228 ಮೇಲ್ವಿಚಾರಕರ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ. ಕಳೆದ ಬಾರಿ 4,772 ಮಕ್ಕಳಲ್ಲಿ 647 ಮಕ್ಕಳು ಅನುತ್ತೀರ್ಣಗೊಂಡಿದ್ದರು. ಈ ಬಾರಿ ಈ ಸಂಖ್ಯೆಯನ್ನು 100ರ ಕೆಳಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ತಿಳಿಸಿದ್ದಾರೆ.

ಶಾಸಕರು ಅಖಾಡಕ್ಕೆ!
ಈಗಾಗಲೇ ಶಾಸಕರು, ಅಧಿಕಾರಿ ವರ್ಗ, ಜನಪ್ರತಿನಿಧಿಗಳು, ಪೋಷಕರು ಹಾಗೂ ಶಿಕ್ಷಕರ ಸಭೆಗಳನ್ನು ನಡೆಸಲಾಗಿದೆ. ಕೆಲವು ಆಯ್ದ ಶಾಲೆಗಳ ಎಸೆಸೆಲ್ಸಿ ಮಕ್ಕಳ ಮನೆಗೆ ಮುಂಜಾನೆ 5 ಗಂಟೆಗೆ ಭೇಟಿ ಮಾಡಿ ಮಕ್ಕಳ ಪರೀಕ್ಷಾ ತಯಾರಿ ಮತ್ತು ಪರೀಕ್ಷೆ ಎದುರಿಸುವ ಕುರಿತು ಚೈತನ್ಯ ತುಂಬುವ ಕೆಲಸ ನಡೆಯುತ್ತಿದೆ. ಸ್ವತಃ ಶಾಸಕ ಸಂಜೀವ ಮಠಂದೂರು ಅವರೇ ಕಾಳಜಿ ವಹಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಪ್ರಯತ್ನ ನಡೆಯುತ್ತಿದೆ
ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆ, ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಮುಖ್ಯವಾಗಿ ಶಾಸಕರು ಸೇರಿದಂತೆ ಇಲ್ಲಿನ ಜನಪ್ರತಿನಿಧಿಗಳು ಈ ವಿಚಾರದಲ್ಲಿ ತೊಡಗಿಸಿಕೊಳ್ಳುವಿಕೆ ಹುರುಪು ತುಂಬಿದೆ. ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ಪುತ್ತೂರು ಲಗ್ಗೆ ಇಡಲಿದೆ.
– ಲೋಕೇಶ್‌ , ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು

– ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next