ರಬಕವಿ-ಬನಹಟ್ಟಿ: ಚಿದಾನಂದ ಪ್ರಕಾಶ ಪಟ್ಟಣ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 623 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ತೃತೀಯ ಮತ್ತು ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ತಂದೆ ಪ್ರಕಾಶ ವಾಹನ ಚಾಲಕರಾಗಿದ್ದು, ತಾಯಿ ವೀಣಾ ಕೂಲಿ ನೇಕಾರ ಕಾರ್ಮಿರಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ಸೋಮವಾರ ಚಿದಾನಂದ ಪಟ್ಟಣರ ಮನೆಗೆ ಭೇಟಿ ನೀಡಿದಾಗ ತಂದೆ ತಾಯಿ ಇಬ್ಬರು ಕೆಲಸಕ್ಕೆ ಹೋಗಿದ್ದರು. ಚಿಕ್ಕದಾದ ಮನೆಯಲ್ಲಿ ಸಹೋದರನೊಂದಿಗೆ ಫಲಿತಾಂಶವನ್ನು ನೋಡುತ್ತಿದ್ದರು.ಚಿದಾನಂದ ಕನ್ನಡ:125, ಇಂಗ್ಲಿಷ್: 100, ಹಿಂದಿ: 100, ಗಣಿತ: 100, ವಿಜ್ಞಾನ:99 ಮತ್ತು ಸಮಾಜ ವಿಜ್ಞಾನಕ್ಕೆ 99 ಅಂಕಗಳನ್ನು ಪಡೆದುಕೊಂಡಿದ್ದಾರೆ.
ನಾನು ಮತ್ತು ಪತ್ನಿ ದಿನನಿತ್ಯ ದುಡಿಯಲು ಬೇರೆ ಕಡೆಗೆ ಹೋಗುತ್ತಿದ್ದೇವು. ಚಿದಾನಂದ ತಾನೇ ಮನೆಯಲ್ಲಿ ಕುಳಿತುಕೊಂಡು ಓದುತ್ತಿದ್ದ. ಬೆಳಗ್ಗೆ ಟ್ಯೂಶನ್ ಮುಗಿಸಿಕೊಂಡು ಬಂದು ಓದುವುದು, ನಂತರ ಶಾಲೆ, ಮತ್ತೆ ಸಂಜೆಗೆ ಬಂದು ಎಂದಿನಟ ಓದುತ್ತಿದ್ದ. ಉತ್ತಮ ಅಂಕಗಳನ್ನು ಪಡೆದುಕೊಳ್ಳುತ್ತಾನೆ ಎಂಬ ವಿಶ್ವಾಸವಿತ್ತು. ಆದರೆ ಈಗ ರಾಜ್ಯಕ್ಕೆ ತೃತೀಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಚಿದಾನಂದ ತಂದೆ ಪ್ರಕಾಶ ತಿಳಿಸಿದರು.
ದಿನನಿತ್ಯ ಓದುತ್ತಿದ್ದೆ. ಪರೀಕ್ಷೆಯ ಸಮಯದಲ್ಲಿ ಮಾತ್ರ ಸ್ವಲ್ಪ ಹೆಚ್ಚು ಓದುತ್ತಿದ್ದೆ. ಶಾಲೆಯ ಶಿಕ್ಷಕರ ಪ್ರೋತ್ಸಾಹ ಮತ್ತು ತಂದೆ ತಾಯಿಗಳ ಆಶೀರ್ವಾದದಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಚಿದಾನಂದ ಪತ್ರಿಕೆಗೆ ತಿಳಿಸಿದರು.
ರಬಕವಿ ಬನಹಟ್ಟಿ ತಾಲ್ಲೂಕಿನ ಎಸ್ ಆರ್ ಎ ಪ್ರೌಢ ಶಾಲೆಯ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಭಾಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದ್ದು, ರಬಕವಿ ಬನಹಟ್ಟಿ ತಾಲ್ಲೂಕು ಶೈಕ್ಷಣಿಕ ಕ್ಷೇತ್ರವಾಗಿ ಬೆಳೆಯುತ್ತಿರುವುದು ಉತ್ತಮ ಸಂಗತಿಯಾಗಿದೆ ಎಂದು ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸನ್ನವರ ಮತ್ತು ನೋಡಲ್ ಅಧಿಕಾರಿ ಶ್ರೀಶೈಲ ಬುರ್ಲಿ ತಿಳಿಸಿದರು.