ಕೋಲಾರ: ಕೋವಿಡ್-19ರ ಸವಾಲನ್ನು ಮೆಟ್ಟಿನಿಂತು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ಧವಾಗಿರುವ ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆ ಕ್ರಮಗ ಳೊಂದಿಗೆ ತಾಲೂಕಿನ ನರಸಾಪುರ ವ್ಯಾಲಿ ಪಬ್ಲಿಕ್ ಶಾಲೆ ಕೇಂದ್ರದಲ್ಲಿ ಸೋಮವಾರ ಯಶಸ್ವಿಯಾಗಿ ಅಣಕು ಪರೀಕ್ಷೆ ನಡೆಸಿತು. ಈ ಮೂಲಕ ಜೂ.25ರಿಂದ ಮೂಲ ಪರೀಕ್ಷೆಗೆ ಇಲಾಖೆ ಸನ್ನದ್ಧವಾಗಿದೆ ಎಂದು ಸಾಕ್ಷೀಕರಿಸ ಲಾಯಿತು. ಪರೀಕ್ಷೆ ಸಿದ್ಧತಾ ನೇತೃತ್ವ ವಹಿಸಿದ್ದ ಡಿಡಿಪಿಐ ಕೆ.ರತ್ನಯ್ಯ ಮಾತನಾಡಿ, ಕೋವಿಡ್ ಸಂಕಷ್ಟ ಇದೊಂದು ಅಪರೂಪದ್ದಾಗಿದ್ದು, ಇದನ್ನು ತಡೆಯುವ ಶಕ್ತಿ ನಮ್ಮ ಕೈಯಲ್ಲೇ ಇದೆ, ಮಕ್ಕಳಲ್ಲಿ ಹೆಜ್ಜೆಹೆಜ್ಜೆಗೂ ಅರಿವು ಮೂಡಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮುನ್ನಡೆಯಲು ಅರಿವು ಮೂಡಿಸಲು ಅಣಕು ಪರೀಕ್ಷೆ ಸಹಕಾರಿಯಾಗಿದೆ ಎಂದು ಹೇಳಿದರು.
ಪರೀಕ್ಷಾ ಸಿಬ್ಬಂದಿಗೂ ತಪಾಸಣೆ, ಸ್ಯಾನಿಟೈಸ್: ಪರೀಕ್ಷೆಗೆ ಬರುವ ಮಕ್ಕಳಿಗೆ ಮಾತ್ರವಲ್ಲ, ಅಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಯನ್ನೂ ಸಾಮಾಜಿಕ ಅಂತರದ ಸರದಿ ಸಾಲಿನಲ್ಲಿ ಥರ್ಮಲ್ ಟೆಸ್ಟಿಂಗ್ ಮಾಡಿ, ಸ್ಯಾನಿಟೈಸ್ ನೀಡಿ, ನಿಯಮಾನುಸಾರ ಮೊಬೆ„ಲ್ ವಶಕ್ಕೆ ಪಡೆದು ಕೇಂದ್ರದೊಳಗೆ ಕರೆಸಿಕೊಳ್ಳಲಾಯಿತು. ಅಣಕು ಪರೀಕ್ಷೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮೂಲ ಪರೀಕ್ಷೆಯನ್ನೂ ನಾವು ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಿ ಮಾಡಬಲ್ಲೆವು ಎಂದು ಸಾಬೀತು ಪಡಿಸಿದರು.
ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಬಸ್ ಸೌಲಭ್ಯ: ವ್ಯಾಲಿ ಪಬ್ಲಿಕ್ ಶಾಲೆ ಪರೀಕ್ಷಾ ಕೇಂದ್ರಕ್ಕೆ ಬರುವ ಶಾಲೆಗಳ ಮಕ್ಕಳನ್ನು ಖಾಸಗಿ ಶಾಲೆಗಳ ಸ್ಯಾನಿಟೆ„ಸ್ ಮಾಡಿದ ಬಸ್ಸಿನಲ್ಲೇ ಸಾಮಾಜಿಕ ಅಂತರ ಕಾಪಾಡಿ ಹತ್ತಿಸಿ ಕೇಂದ್ರಕ್ಕೆ ಕರೆತಂದರಲ್ಲದೇ, ಇಲ್ಲಿಯೂ ಮಕ್ಕಳು ಅಂತರ ಕಾಯ್ದುಕೊಂಡೇ ಸರದಿ ಸಾಲಿನಲ್ಲಿ ಸಾಗುವಂತೆ ಮಾಡಲಾಯಿತು. ಕೇಂದ್ರಕ್ಕೆ ಸ್ಥಾನಿಕ ಜಾಗೃತಿ ದಳ ನೇಮಕ, ಕೊಠಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಜ್ವರ, ನೆಗಡಿ ಇರುವ ಮಕ್ಕಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ, ಶೌಚಾಲಯಗಳು, ಕೈತೊಳೆಯಲು ನೀರು, ಸೋಪು, ಸೋಂಕು ನಿವಾರಕ ದ್ರಾವಣಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಗಳ ರಚನೆ ಹೀಗೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಯಿತು.
ವ್ಯಾಲಿ ಪಬ್ಲಿಕ್ ಶಾಲಾ ಆಡಳಿತ ಮಂಡಳಿಯ ಜಿ.ಸುಮಾ, ರವಿಕುಮಾರ್, ಸತೀಶ್ ಮತ್ತಿತರರು ಕಾಲಕಾಲಕ್ಕೆ ಅಣಕು ಪರೀಕ್ಷೆಗೆ ಸಿದ್ಧತೆ ನಡೆಸಿ ಸಹಕಾರ ನೀಡಿದರು. ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್ .ನಾಗರಾಜಗೌಡ, ಎವೈಪಿಸಿ ಸಿದ್ದೇಶ್, ವಿಷಯ ಪರಿವೀಕ್ಷಕರಾದ ಶಶಿವಧನ, ಕೃಷ್ಣಪ್ಪ, ಗಾಯತ್ರಿ, ಡಿಪಿಒ ಮಂಜುನಾಥ್, ಮುಖ್ಯ ಅಧೀಕ್ಷಕ ಬಿ.ಎಂ.ಚಂದ್ರಪ್ಪ, ತಾಲೂಕು ನೋಡಲ್ ಅಧಿಕಾರಿಗಳಾದ ಮುನಿರತ್ನಯ್ಯಶೆಟ್ಟಿ, ಸಿ.ಎಂ. ವೆಂಕಟರಮಣಪ್ಪ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.