Advertisement

‘ಎಸೆಸೆಲ್ಸಿ ಶಿಕ್ಷಣ ಕ್ಷೇತ್ರದ ಅಡಿಪಾಯ’

01:30 AM Dec 21, 2018 | Karthik A |

ವೇಣೂರು: ವೇಣೂರು ವಲಯದ ವಿವಿಧ ಪ್ರೌಢಶಾಲೆಗಳಿಗೆ ಭೇಟಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ವೈ. ಶಿವರಾಮಯ್ಯ ಅವರು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಮುಂದಿನ ವಿದ್ಯಾಭ್ಯಾಸಕ್ಕೆ ಎಸೆಸೆಲ್ಸಿ ಮಹತ್ವ ಪಡೆಯುತ್ತದೆ. ಏಕಾಗ್ರತೆಯಿಂದ ಜ್ಞಾನಾರ್ಜನೆ ಮಾಡಿ. ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಬದುಕನ್ನು ರೂಪಿಸುವ ಶಕ್ತಿ ಇರುತ್ತದೆ. ವಿದ್ಯಾಭ್ಯಾಸದಲ್ಲಿ ಉನ್ನತ ಗುರಿ ಇಟ್ಟುಕೊಂಡಾಗ ವಿದ್ಯಾರ್ಜನೆ ಸುಲಭವಾಗುತ್ತದೆ. ಶಿಕ್ಷಣಕ್ಕೆ ಸರಕಾರ ಸವಲತ್ತುಗಳ ಮೂಲಕ ಸಾಕಷ್ಟು ಪ್ರೋತ್ಸಾಹ ನೀಡಿದೆ. ಶಿಕ್ಷಕರ ಜತೆಗೆ ಹೆತ್ತವರೂ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.

Advertisement

ಬುದ್ಧಿವಂತಿಕೆ ಬಳಸಿ
ವಿದ್ಯಾರ್ಥಿಗಳು ಯಾರೂ ಅಸಮರ್ಥರಲ್ಲ. ಬುದ್ಧಿವಂತಿಕೆ ಬಳಸಿಕೊಂಡಾಗ ಉತ್ತಮ ಅಂಕ ಪಡೆಯಲು ಸಹಕಾರಿ ಆಗುತ್ತದೆ. ವೃತ್ತಿಪರ ಕೋರ್ಸ್‌ಗಳಿಗೆ ಎಸೆಸೆಲ್ಸಿ ಅಂಕ ವೇದಿಕೆಯಾಗುತ್ತದೆ. ಹೀಗಾಗಿ ಎಸೆಸೆಲ್ಸಿ ಶಿಕ್ಷಣ ಕ್ಷೇತ್ರದ ಅಡಿಪಾಯ. ಪಾಸಾಗುವುದಕ್ಕಿಂತ ಫೇಲ್‌ ಆಗುವುದು ತುಂಬಾ ಕಷ್ಟ ಅನ್ನುವಂತಹ ಮಟ್ಟಿಗೆ ವಿದ್ಯಾರ್ಜನೆಯಲ್ಲಿ ತೊಡಗಿಕೊಳ್ಳಿ ಎಂದರು.

ಆರೋಗ್ಯ ಕಾಪಾಡಿ
ಪರೀಕ್ಷೆಯ ಬಗ್ಗೆ ಭಯ ಬೇಡ. ಇಂದು ಪರೀಕ್ಷೆ ವಿಧಾನ ಸುಲಭವಾಗಿದೆ. ಯಾವುದೇ ಗೊಂದಲ, ಸಂಶಯಗಳು ಇದ್ದಾಗ ನೇರವಾಗಿ ಶಿಕ್ಷಕರಲ್ಲಿ ಕೇಳಿ. ಆರೋಗ್ಯದ ಬಗ್ಗೆ ನಿಗಾ ಇಡಿ. ಎಸೆಸೆಲ್ಸಿ ಪಬ್ಲಿಕ್‌ ಪರೀಕ್ಷೆಗೆ ಇನ್ನುಳಿದಿರುವ 90 ದಿನಗಳಲ್ಲಿ ಅಧ್ಯಾಪಕರ ಮಾರ್ಗದರ್ಶನದಂತೆ ಚಟುವಟಿಕೆಗಳಲ್ಲಿ  ತೊಡಗಿಸಿಕೊಳ್ಳಿ ಎಂದರು.

ದೇಶದ ನಕ್ಷೆ ಬಿಡಿಸಿದರು
ಕಾಶಿಪಟ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದೇಶದ ನಕ್ಷೆ ಹಾಗೂ ವಿಜ್ಞಾನಕ್ಕೆ ಸಂಬಂಧಿತ ಚಿತ್ರವನ್ನು ಬಿಡಿಸುವಂತೆ ಸೂಚಿಸಿದರು. ವಿದ್ಯಾರ್ಥಿಗಳು ಪುಸ್ತಕದಲ್ಲಿ ಚಿತ್ರ ಬಿಡಿಸಿ ಪ್ರದರ್ಶಿಸಿದರು. ಈ ವೇಳೆ ಭಾರತದ ಚಿತ್ರವನ್ನು ಬೋರ್ಡಿನ ಮೇಲೆ ಬಿಡಿಸುವ ಮೂಲಕ ಸುಲಭ ವಿಧಾನವನ್ನು ಹೇಳಿಕೊಟ್ಟರು. ಪೆರಿಂಜೆ ಎಸ್‌ಡಿಎಂ ಅನುದಾನಿತ ಪ್ರೌಢಶಾಲೆ, ವೇಣೂರು ಸರಕಾರಿ ಪ್ರೌಢಶಾಲೆ, ಕೊಕ್ರಾಡಿ ಹಾಗೂ ಕಾಶಿಪಟ್ಣ ಪ್ರೌಢಶಾಲೆಗಳಿಗೆ ಅವರು ಭೇಟಿ ನೀಡಿ ವಿದ್ಯಾರ್ಥಿಗಳ ಪರೀಕ್ಷೆ ಭಯ ಹೋಗಲಾಡಿಸಿ ಧೈರ್ಯ ತುಂಬಿದರು. ಪರೀಕ್ಷೆಗೆ ಉಳಿದಿರುವ 90 ದಿನಗಳಲ್ಲಿ ಓದಿನ ಕಡೆಗೆ ಗಮನ ನೀಡುವಂತೆ ಸೂಚಿಸಿದರು.

ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ಮೂಡುಬಿದಿರೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಶಿಕ್ಷಣ ಇಲಾಖೆಯ ತಾಲೂಕು ಸಮನ್ವಯ ಅಧಿಕಾರಿ ಗಣೇಶ್‌ ಐತಾಳ್‌, ಪ್ರಮುಖರಾದ ಸತೀಶ್‌ ಕಾಶಿಪಟ್ಣ, ಮೋಹನ ಅಂಡಿಂಜೆ, ಇಸ್ಮಾಯಿಲ್‌ ಕೆ. ಪೆರಿಂಜೆ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಾದ ಮುಕುಂದಚಂದ್ರ, ವೆಂಕಟೇಶ್‌ ಎಸ್‌. ತುಳುಪುಳೆ, ಶ್ರೀಕೃಷ್ಣ, ಪದ್ಮಿನಿ ಉಪಸ್ಥಿತರಿದ್ದರು.

Advertisement

ಶಿಕ್ಷಣ ಮಾರ್ಗದರ್ಶಿಗೆ ಮೆಚ್ಚುಗೆ


ಕೊಕ್ರಾಡಿ ಪ್ರೌಢಶಾಲೆಗೆ ಉಪನಿರ್ದೇಶಕರು ಭೇಟಿ ನೀಡಿದ ಸಂದರ್ಭ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ಸಂಚಿಕೆಯ ವಿಷಯಗಳ ಮಾಹಿತಿಯನ್ನು ಶಿಕ್ಷಕರು ಮಕ್ಕಳಿಗೆ ನೀಡುತ್ತಿದ್ದರು. ಈ ಸಂದರ್ಭ ಉದಯವಾಣಿ ಶಿಕ್ಷಣ ಸಂಚಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳಿಗೆ ಇದು ಸಹಾಯವಾಗಲಿದೆ ಎಂದು, ಶಿಕ್ಷಕರ ಕಾರ್ಯವನ್ನು  ಶ್ಲಾಘಿಸಿದರು.

ಬಾನುಲಿ ಪಾಠ ಆಲಿಸಿ
ಕಾಶಿಪಟ್ಣ ಶಾಲೆಯಲ್ಲಿ ಬಾನುಲಿ ಪಾಠ ಆಲಿಸದಿರುವ ಬಗ್ಗೆ ಎಚ್ಚರಿಸಿದ ಉಪನಿರ್ದೇಶಕರು, ಬಾನುಲಿ ಪಾಠ ಮಕ್ಕಳಿಗೆ ಅನುಕೂಲವಾಗಲಿದೆ. ಇದನ್ನು ಆಲಿಸಿ ಪಾಠ ಮಾಡುವಂತೆ ಸೂಚಿಸಿದರು. 

ಬಿಸಿಯೂಟ ಸವಿದರು
ವೇಣೂರು ಪ್ರೌಢಶಾಲೆಗೆ ಉಪನಿರ್ದೇಶಕರು ಭೇಟಿ ನೀಡಿದ ಸಂದರ್ಭದಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಹೆತ್ತವರ‌ ಸಭೆ ನಡೆಯುತ್ತಿತ್ತು. ಈ ಬಗ್ಗೆ ಶಾಲೆಯ ಕಾರ್ಯವೈಖರಿ ಬಗ್ಗೆ ಉಪನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಎಸೆಸೆಲ್ಸಿಯ ಮೂರು ವಿಭಾಗಗಳಲ್ಲಿ 204 ವಿದ್ಯಾರ್ಥಿಗಳು ಇರುವ ಬಗ್ಗೆ ಶ್ಲಾಘಿಸಿದರು. ಬಳಿಕ ಮಧ್ಯಾಹ್ನದ ಬಿಸಿಯೂಟವನ್ನು ಸವಿದರು.

Advertisement

Udayavani is now on Telegram. Click here to join our channel and stay updated with the latest news.

Next